ಚಿತ್ತಾಪುರ (ಕಲಬುರಗಿ ಜಿಲ್ಲೆ): ಪಟ್ಟಣದ ಲಾಡ್ಜಿಂಗ್ ಕ್ರಾಸ್ ಸಮೀಪ ಇರುವ ಅಶ್ವಾರೂಢ ಬಸವೇಶ್ವರ ಮೂರ್ತಿಯ ಮುಖಕ್ಕೆ ಬಟ್ಟೆ ಹಾಕಿ ಜೂ.23 ರಂದು ದುಷ್ಕರ್ಮಿಯೊಬ್ಬ ಅವಮಾನ ಮಾಡಿದ ಘಟನೆ ಖಂಡಿಸಿ ಸೋಮವಾರ ಸ್ವಯಂ ಘೋಷಿತ ಬಂದ್ ಯಶಸ್ವಿಯಾಗಿದೆ.
ಪಟ್ಟಣದಲ್ಲಿನ ಎಲ್ಲಾ ಅಂಗಡಿ, ವಾಣಿಜ್ಯ ಮಳಿಗೆಗಳ ಬಾಗಿಲು ತೆರೆಯಲಿಲ್ಲ. ಎಲ್ಲಾ ಬಗೆಯ ವ್ಯಾಪಾರಿಗಳು ಬಂದ್ ಕಾರ್ಯಕ್ರಮಕ್ಕೆ ಸ್ವಯಂ ಬೆಂಬಲಿಸಿದ್ದರಿಂದ ಬೆಳಗ್ಗೆಯಿಂದ ವ್ಯಾಪಾರ ವಹಿವಾಟು ಸಂಪೂರ್ಣ ಬಂದ್ ಮಾಡಿದ್ದಾರೆ.
ಹಾಲು, ಆಸ್ಪತ್ರೆ, ಔಷಧ ಅಂಗಡಿ ಯಥಾ ರೀತಿ ತೆರೆದಿದ್ದವು. ಉಳಿದಂತೆ ಜೀವನಾವಶ್ಯಕ ವಸ್ತುಗಳ ಸಹಿತ ಎಲ್ಲ ಅಂಗಡಿಗಳು ಬಂದ್ ಆಗಿ ಬಂದ್ ಆಚರಣೆ ಸಂಪೂರ್ಣ ಶಾಂತಿಯುತವಾಗಿದೆ.
ಸರ್ಕಾರಿ ಕಚೇರಿ, ಶಾಲಾ ಕಾಲೇಜು, ಬ್ಯಾಂಕ್ ಎಂದಿನಂತೆ ಕರ್ತವ್ಯ ನಿರ್ವಹಿಸಿದವು. ಬಸ್ ಸಂಚಾರ, ಆಟೊ ಸಂಚಾರ, ಬೈಕ್, ವಾಹನ ಸಂಚಾರ ಅಬಾಧಿತವಾಗಿತ್ತು.
ಬಂದ್ ಹಿನ್ನೆಲೆಯಲ್ಲಿ ಭಾನುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಪಟ್ಟಣದ ಪೊಲೀಸ್ ಠಾಣೆಗೆ ಆಗಮಿಸಿ ಸರ್ವಸಮಾಜದ ಮುಖಂಡರ ಸಭೆ ನಡೆಸಿ ಬಂದ್ ಆಚರಣೆ ಶಾಂತಿಯುತವಾಗಿರಲಿ ಎಂದು ಮನವಿ ಮಾಡಿದ್ದರು.
ಬಂದ್ ಆಚರಣೆಯಲ್ಲಿ ಪಟ್ಟಣದಲ್ಲಿ ಹಾಗೂ ಆಯಕಟ್ಟಿನ ಸ್ಥಳಗಳಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.