ADVERTISEMENT

ಚಿತ್ತಾಪುರ | ಬರದ ಹೊಡೆತ: ಸಂಕಷ್ಟದಲ್ಲಿ ರೈತ

ಚಿತ್ತಾಪುರ ತಾಲ್ಲೂಕಿನಲ್ಲಿ 23 ಸಾವಿರ ಹೆಕ್ಟೇರ್ ಬೆಳೆ ಹಾನಿ

ಮಲ್ಲಿಕಾರ್ಜುನ ಎಚ್.ಎಂ
Published 6 ಡಿಸೆಂಬರ್ 2023, 5:37 IST
Last Updated 6 ಡಿಸೆಂಬರ್ 2023, 5:37 IST
ಚಿತ್ತಾಪುರ ತಾಲ್ಲೂಕಿನ ಮರಗೋಳ ಗ್ರಾಮದ ಜಗನ್ನಾಥ ಪಾಟೀಲ ಜಮೀನಿನಲ್ಲಿ ಮೊಳಕೆಯ ಸ್ಥಿತಿಯಲ್ಲಿ ಬಾಡುತ್ತಿರುವ ಜೋಳ
ಚಿತ್ತಾಪುರ ತಾಲ್ಲೂಕಿನ ಮರಗೋಳ ಗ್ರಾಮದ ಜಗನ್ನಾಥ ಪಾಟೀಲ ಜಮೀನಿನಲ್ಲಿ ಮೊಳಕೆಯ ಸ್ಥಿತಿಯಲ್ಲಿ ಬಾಡುತ್ತಿರುವ ಜೋಳ   

ಚಿತ್ತಾಪುರ: ತಾಲ್ಲೂಕಿನ ಹಲವು ಕಡೆಗಳಲ್ಲಿ ವಾಡಿಕೆಯಂತೆ ಮಳೆಯಾಗದೆ ರೈತರು, ಬೆಳೆಗಾರರು ಪರಿತಪಿಸುತ್ತಿದ್ದಾರೆ. ಮುಂಗಾರು ಮತ್ತು ಹಿಂಗಾರು ಹಂಗಾಮಿನ ಬೆಳೆಗಳು ಹಾನಿಯಾಗಿದ್ದು, ರೈತರು ಬರಗಾಲದ ಕಪಿಮುಷ್ಠಿಗೆ ಸಿಕ್ಕು ತತ್ತರಿಸಿದ್ದಾರೆ.

ಮುಂಗಾರಿನ ಅತಿವೃಷ್ಟಿಗೆ 597 ಹೆಕ್ಟೇರ್ ಬೆಳೆ ಹಾಗೂ ಅನಾವೃಷ್ಟಿಗೆ 22,608 ಹೆಕ್ಟೇರ್ ಹಾನಿಯಾಗಿದೆ. ಅನಾವೃಷ್ಟಿಯಿಂದ 16,897 ಹೆಕ್ಟೇರ್ ತೊಗರಿ ಹಾಗೂ 5,214 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯ ಫಸಲು ರೈತರ ಕೈಸೇರಿಲ್ಲ.

ಮುಂಗಾರು ತಡವಾಗಿದ್ದರಿಂದ ಬಿತ್ತನೆಯನ್ನು ತಡ ಮಾಡಲಾಗಿತ್ತು. ಮಳೆ ನಿರೀಕ್ಷೆಯಿಂದ ಹೆಸರು, ಉದ್ದು, ತೊಗರಿ ಬಿತ್ತನೆ ಮಾಡಿದ್ದರು. ಬಳಿಕ ಮಳೆ ಕೈಕೊಟ್ಟ ಪರಿಣಾಮ ಬೆಳೆಯ ಬೆಳವಣಿಗೆ ಕುಂಠಿತಗೊಂಡು ಇಳುವರಿಯ ಪ್ರಮಾಣ ಕುಸಿತವಾಗುವ ಭೀತಿ ಬೆಳೆಗಾರರಲ್ಲಿ ಮೂಡಿದೆ.

ADVERTISEMENT

ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ಸುರಿದ ಮಳೆಯಿಂದ ರೈತರು ತಡವಾಗಿ ಹಿಂಗಾರಿನ ಬೆಳೆಗಳನ್ನು ತಡವಾಗಿ ಬಿತ್ತನೆ ಮಾಡಿದ್ದರು. ಆ ಬೆಳೆಗಳು ಸಹ ಕುಂಠಿತಗೊಂಡಿವೆ. 

ತೇವಾಂಶದ ಕೊರತೆಯಿಂದ ಮೊಳಕೆ ಭೂಮಿಯಿಂದ ಹೊರ ಬರಲಾಗದೆ ನೂರಾರು ರೈತರು ಜೋಳ ಮತ್ತು ಕಡಲೆ ಮರು ಬಿತ್ತನೆ ಮಾಡಿದ್ದರು. ತೊಗರಿ, ಉದ್ದು, ಹತ್ತಿ, ಕಡಲೆ ಬೆಳೆಗಳ ಬೆಳವಣಿಗೆ ಕುಂಠಿತವಾಗಿದೆ.

ಮಳೆ ಕೊರತೆಯಿಂದ ಹಳ್ಳಕೊಳ್ಳಗಳಲ್ಲಿ ನೀರಿನ ಹರಿಯುವಿಕೆ ಬತ್ತುತ್ತಿವೆ. ಅಂತರ್ಜಲ ಕುಸಿಯತೊಡಗಿದೆ. ತಾಲ್ಲೂಕಿನಲ್ಲಿ 16 ಗ್ರಾಮಗಳಲ್ಲಿ ಬರುವ ಬೇಸಿಗೆಯಲ್ಲಿ ಕುಡಿಯುವ ನೀರಿನ ಗಂಭೀರ ಸಮಸ್ಯೆ ಉದ್ಭವಿಸುವ ಸಾಧ್ಯತೆಯಿದೆ. ಜಾನುವಾರುಗಳಿಗೆ ನೀರು ಮತ್ತು ಮೇವಿನ ಕೊರತೆಯ ಬಿಸಿ ತಟ್ಟಲಿದೆ ಎನ್ನುತ್ತಾರೆ ಕೃಷಿಕರು. 

ಕೆಲಸವಿಲ್ಲದ ಕಾರಣ ಬಹುತೇಕರು ನಗರಗಳಿಗೆ ವಲಸೆ ಹೋಗಿದ್ದಾರೆ. ಪ್ರಸಕ್ತ ಸಾಲಿನ ನರೇಗಾ ಯೋಜನೆಯಡಿ 60ರಿಂದ 70 ಮಾನವ ದಿನಗಳನ್ನು ಕೂಲಿ ಕೆಲಸ ಮಾಡಿದ್ದಾರೆ. ಈಗ ಮತ್ತೆ ಕೆಲಸ ನೀಡಿದರೆ 100 ದಿನಗಳು ಮುಗಿದು ಬೇಸಿಗೆಯಲ್ಲಿ ಕೆಲಸ ಸಿಗುವುದಿಲ್ಲ ಎನ್ನುವ ಆತಂಕ ಕೂಲಿಕಾರರದ್ದು.

‘40 ಅಥವಾ ಅದಕ್ಕಿಂತ ಕಡಿಮೆ ದಿನಗಳ ಕೆಲಸ ಮಾಡಿದ ಕೂಲಿಕಾರರಿಗೆ ತುರ್ತಾಗಿ ಕೆಲಸ ಕೊಡಬೇಕು. ತಾಲ್ಲೂಕಿನ ಗ್ರಾಮ ಪಂಚಾಯಿತಿಗಳಲ್ಲಿ ನರೇಗಾ ಕೆಲಸ ಸ್ಥಗಿತವಾಗಿದೆ. ಸರ್ಕಾರ ಘೋಷಿಸಿದಂತೆ ಹೆಚ್ಚುವರಿ 50 ದಿನಗಳ ಕೆಲಸದ ಆದೇಶವನ್ನು ಹೊರಡಿಸಬೇಕು’ ಎನ್ನುತ್ತಾರೆ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಸಾಯಬಣ್ಣ ಗುಡುಬಾ.

ಚಿತ್ತಾಪುರ ತಾಲ್ಲೂಕಿನ ದಂಡೋತಿ ಗ್ರಾಮದ ಮಹೆಮೂದ್ ಪಠಾಣ್ ಅವರ ಜಮೀನಿನ ಬೆಳೆಗಳು ತೇವಾಂಶದ ಕೊರತೆಯಿಂದ ಕುಂಠಿತವಾದ ಬೆಳವಣಿಗೆ

ಬರ ಬೆಳೆ ಹಾನಿಯಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬರದ ದುಷ್ಪರಿಣಾಮವನ್ನು ಎರಡು ವರ್ಷ ಎದುರಿಸಬೇಕಾಗುತ್ತದೆ.

-ಮಹಾದೇವ ಮುಗುಟಾ ಇಟಗಾ ಗ್ರಾಮದ ರೈತ

ನರೇಗಾ ಯೋಜನೆಯಡಿ ಕೆಲಸ ಕೇಳಿದವರಿಗೆ ಕೆಲಸ ಕೊಡಲಾಗುತ್ತಿದೆ. ಬರ ಘೋಷಣೆಯಿಂದ ಹೆಚ್ಚುವರಿ 50 ದಿನ ಕೆಲಸ ನೀಡುವ ಆದೇಶ ಇನ್ನೂ ಬಂದಿಲ್ಲ.

-ನೀಲಗಂಗಾ ಬಬಲಾದ ತಾ.ಪಂ ಇಒ

34 ತೊಟ್ಟಿಗಳ ಅವಶ್ಯ

ತಾಲ್ಲೂಕಿನ 22 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 37347 ಜಾನುವಾರು 43895 ಕುರಿ ಮತ್ತು ಮೇಕೆಗಳಿವೆ. ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲು 34 ತೊಟ್ಟಿಗಳ ಅಗತ್ಯವಿದೆ. ಈಗ ಇರುವ ತೊಟ್ಟಿಗಳಿಗೆ ನೀರು ಪೂರೈಕೆ ವ್ಯವಸ್ಥೆಯಿಲ್ಲ. ಬೇಸಿಗೆಯಲ್ಲಿ ಜಾನುವಾರುಗಳಿಗೆ ನೀರಿನ ಸಮಸ್ಯೆ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ ಎಂಬುದು ರೈತರ ಆತಂಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.