ಚಿತ್ತಾಪುರ: ಮನೆಯ ಜಾಗದ ಕುರಿತು ನಡೆದ ಹೊಡೆದಾಟ, ನೂಕಾಟದಲ್ಲಿ ವ್ಯಕ್ತಿಯೋರ್ವ ಕೊಲೆಯಾದ ಘಟನೆ ತಾಲ್ಲೂಕಿನ ಕರದಾಳ ಗ್ರಾಮದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.
ಗ್ರಾಮದ ರಾಜಪ್ಪ ದೇವಿಂದ್ರಪ್ಪ ಬಾನರ್ (45) ಎಂಬುವರು ಕೊಲೆಯಾದ ವ್ಯಕ್ತಿ. ಪ್ರಕರಣದಲ್ಲಿ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ. ಪ್ರಕರಣದ ಮುಖ್ಯ ಆರೋಪಿ ಚೆನ್ನಪ್ಪ ಬಾನರ್ ಎಂಬುವರನ್ನು ಪೊಲೀಸರು ಬುಧವಾರ ಸಂಜೆ ಬಂಧಿಸಿದ್ದಾರೆ.
ಮನೆಯ ಜಾಗದ ಕುರಿತು ಮಂಗಳವಾರ ರಾತ್ರಿ ಚೆನ್ನಪ್ಪ ಎಂಬುವರು ಮತ್ತು ರಾಜಪ್ಪನ ನಡುವೆ ಜಗಳ ಶುರುವಾಗಿ ಮಾತಿನ ತೀವ್ರ ವಾಗ್ವಾದ ನಡೆದು ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ಕೈಕೈ ಮಿಲಾಯಿಸಿ ಪರಸ್ಪರ ಹೊಡೆದಾಡಿ ನೂಕಾಟ ನಡೆಸುವಾಗ ಚೆನ್ನಪ್ಪ ಎಂಬುವರು ಇತರರೊಂದಿಗೆ ರಾಜಪ್ಪನಿಗೆ ನೂಕುತ್ತಾ ಹೊಡೆದಿದ್ದರಿಂದ ರಸ್ತೆಯಲ್ಲಿ ಬಿದ್ದ ರಾಜಪ್ಪ ಅವರು ಘಟನಾ ಸ್ಥಳದಲ್ಲೆ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಕೊಲೆ ಘಟನೆಗೆ ಸಂಬಂದಿಸಿದಂತೆ ಚೆನ್ನಪ್ಪ ಭೀಮಣ್ಣ, ಬಸಪ್ಪ ಭೀಮಣ್ಣ, ಭೀಮಣ್ಣ ಹಣಮಂತ, ನಾಗಮ್ಮ ಚೆನ್ನಪ್ಪ ಎಂಬುವರ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೊಲೆ ಘಟನೆಯ ಸುದ್ಧಿ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಅವರು ಬುಧವಾರ ಬೆಳಗ್ಗೆ ಗ್ರಾಮಕ್ಕೆ ಭೇಟಿ ನೀಡಿ ಕೊಲೆ ಘಟನೆಯ ಕುರಿತು ಸಮಗ್ರ ಮಾಹಿತಿ ಕಲೆ ಹಾಕಿದ್ದಾರೆ.
ಕೊಲೆಯಾದ ರಾಜಪ್ಪನ ಮೃತ ಶರೀರವನ್ನು ಪರೀಕ್ಷೆ ನಡೆಸಲು ರಾತ್ರಿಯೆ ಚಿತ್ತಾಪುರ ಸರ್ಕಾರಿ ಆಸ್ಪತ್ರೆಗೆ ತಂದು ಬುಧವಾರ ಶವ ಪರೀಕ್ಷೆ ನಡೆಸಿದ ನಂತರ ಶವವನ್ನು ಕುಟುಂಬಕ್ಕೆ ನೀಡಲಾಗಿದೆ.
ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ.
undefined undefined
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.