ADVERTISEMENT

ಕಲಬುರಗಿ: ಎಂಎಲ್‌ಸಿ ಸುನಿಲ್ ವಲ್ಲ್ಯಾಪುರ ಮನೆಯಲ್ಲಿ ಸಿಐಡಿ ಶೋಧ

​ಪ್ರಜಾವಾಣಿ ವಾರ್ತೆ
Published 19 ಅಕ್ಟೋಬರ್ 2024, 22:23 IST
Last Updated 19 ಅಕ್ಟೋಬರ್ 2024, 22:23 IST
ಸಿಐಡಿ ಅಧಿಕಾರಿಗಳು ಶನಿವಾರ ದಾಳಿ ಮಾಡಿದ್ದ ವಿಧಾನ ಪರಿಷತ್‌ ಸದಸ್ಯ ಸುನಿಲ್ ವಲ್ಲ್ಯಾಪುರ ಅವರಿಗೆ ಸೇರಿದ ಕಲಬುರಗಿಯ ಸಂತೋಷ ಕಾಲೊನಿಯ ಮನೆ
ಪ್ರಜಾವಾಣಿ ಚಿತ್ರ
ಸಿಐಡಿ ಅಧಿಕಾರಿಗಳು ಶನಿವಾರ ದಾಳಿ ಮಾಡಿದ್ದ ವಿಧಾನ ಪರಿಷತ್‌ ಸದಸ್ಯ ಸುನಿಲ್ ವಲ್ಲ್ಯಾಪುರ ಅವರಿಗೆ ಸೇರಿದ ಕಲಬುರಗಿಯ ಸಂತೋಷ ಕಾಲೊನಿಯ ಮನೆ ಪ್ರಜಾವಾಣಿ ಚಿತ್ರ   

ಕಲಬುರಗಿ: ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ ಹಣ ದುರ್ಬಳಕೆ ಪ್ರಕರಣ ಸಂಬಂಧ ವಿಧಾನ ಪರಿಷತ್ ಸದಸ್ಯ ಸುನಿಲ್ ವಲ್ಲ್ಯಾಪುರ ಅವರ ಮನೆ ಮೇಲೆ ಸಿಐಡಿ ಅಧಿಕಾರಿಗಳು ಶನಿವಾರ ದಾಳಿ ನಡೆಸಿ, ದಾಖಲೆಗಳ ಶೋಧ ನಡೆಸಿದರು.

ನಿಗಮದಲ್ಲಿನ ₹ 12 ಕೋಟಿ ದುರ್ಬಳಕೆ ಆರೋಪದಡಿ ಕಾಳಗಿ ಪೊಲೀಸ್‌ ಠಾಣೆಯಲ್ಲಿ (2022) ಪ್ರಕರಣ ದಾಖಲಾಗಿತ್ತು. ಇದರಲ್ಲಿ ಸುನಿಲ್ ವಲ್ಲ್ಯಾಪುರ ಅವರ ಪುತ್ರ ವಿನಯ್ ವಲ್ಲ್ಯಾಪುರ ಅವರ ಹೆಸರೂ ಕೇಳಿಬಂದಿತ್ತು. ನಕಲಿ ಫಲಾನುಭವಿಗಳನ್ನು ಸೃಷ್ಟಿಸಿ ನಿಗಮದ ಹಣವನ್ನು ವಿನಯ್ ಅವರು ತಮ್ಮ ಒಡೆತನದ ಸೋಮನಾಥೇಶ್ವರ ಎಂಟರ್‌ಪ್ರೈಸಸ್‌ಗೆ ವರ್ಗಾವಣೆ ಮಾಡಿಕೊಂಡಿದ್ದಾರೆ ಎಂಬ ಆರೋಪವಿದೆ.

ಸಿಐಡಿ ತನಿಖಾ ಅಧಿಕಾರಿ ಅಸ್ಲಾಂ ಪಾಷಾ ಹಾಗೂ ನಾಲ್ವರು, ಕೋರ್ಟ್‌ನ ಸರ್ಚ್ ವಾರೆಂಟ್‌ನೊಂದಿಗೆ ಸಂತೋಷ ಕಾಲೊನಿಯಲ್ಲಿನ ವಲ್ಲ್ಯಾಪುರ ಅವರ ಮನೆ ಪ್ರವೇಶಿಸಿದರು. ಮನೆಯ ಇಂಚಿಂಚು ಜಾಲಾಡಿದರು. ದಾಖಲೆ ಪತ್ರಗಳು, ಕಂಪ್ಯೂಟರ್‌ಗಳ ತಪಾಸಣೆಯೂ ನಡೆಸಿದರು.

ADVERTISEMENT

ಸದನದಲ್ಲಿ ಕೇಳಿದ್ದಕ್ಕೆ ಮನೆಗೆ ಬಂದಿದ್ದಾರೆ: ‘ಕೋಟ ಶ್ರೀನಿವಾಸ ಪೂಜಾರಿ ಸಚಿವರಾಗಿದ್ದಾಗ ಭೋವಿ ಅಭಿವೃದ್ಧಿ ನಿಗಮದಲ್ಲಿನ ಅವ್ಯವಹಾರದ ಬಗ್ಗೆ ಸದನದಲ್ಲಿ ಪ್ರಶ್ನೆ ಎತ್ತಿದ್ದೇ ನಾನು. ಈಗ ನನ್ನ ಮನೆಗೆ ಬಂದು ಶೋಧ ಮಾಡುತ್ತಿದ್ದಾರೆ. ಇದರಲ್ಲಿ ನನ್ನ ಹಾಗೂ ನನ್ನ ಮಗನ ತಪ್ಪಿಲ್ಲ. ತನಿಖೆಗೆ ಎಲ್ಲ ರೀತಿಯ ಸಹಕಾರ ಕೊಡುತ್ತೇನೆ’ ಎಂದು ಸುನಿಲ್ ವಲ್ಲ್ಯಾಪುರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.