ಕಲಬುರ್ಗಿ: ದೇಶದಾದ್ಯಂತ ಜನರು ಕೊರೊನಾ ಸೋಂಕಿನಿಂದ ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸದ್ದಿಲ್ಲದೇ ರೈಲ್ವೆ ಖಾಸಗೀಕರಣಕ್ಕೆ ಕೈ ಹಾಕಿದ್ದು, ಕೂಡಲೇ ಈ ಪ್ರಕ್ರಿಯೆಯಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಕಾರ್ಮಿಕ ಸಂಘಟನೆ ಮುಖಂಡರು ಮತ್ತು ಕಾರ್ಯಕರ್ತರು ಸೋಮವಾರ ಇಲ್ಲಿನ ರೈಲ್ವೆ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಸಿಪಿಎಂ ಮುಖಂಡ ಮಾರುತಿ ಮಾನಪಡೆ, ‘ರೈಲ್ವೆ ಸೇರಿದಂತೆ ಲಾಭದಲ್ಲಿರುವ ಹಲವು ಸರ್ಕಾರಿ ಸ್ವಾಮ್ಯದ ಸಂಸ್ಥೆ, ಉದ್ದಿಮೆಗಳನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕಾರ್ಪೊರೇಟ್ ಸಂಸ್ಥೆಗಳಿಗೆ ಹಸ್ತಾಂತರ ಮಾಡುತ್ತಿದೆ. ವಿದೇಶಿ ಕಾರ್ಪೊರೇಟ್ ಧಣಿಗಳನ್ನು ಕೆಂಪು ಹಾಸು ಹಾಸಿ ಸ್ವಾಗತಿಸುತ್ತಿದೆ’ ಎಂದು ಆರೋಪಿಸಿದರು.
‘ಈಗಾಗಲೇ ದೇಶದ ಪ್ರಮುಖ 109 ರೈಲ್ವೆ ನಿಲ್ದಾಣಗಳ ಮೂಲಕ 151 ಲಾಭದಾಯಕ ರೈಲುಗಳನ್ನು ಖಾಸಗಿಯವರಿಗೆ ನಡೆಸಲು ಅನುಮತಿ ನೀಡಲಾಗಿದೆ. ರೈಲ್ವೆ ಎಂಬುದು ಭಾರತೀಯರ ಪಾಲಿಗೆ ಹಾಗೂ ಭಾರತದ ಆರ್ಥಿಕತೆ ಪಾಲಿಗೆ ಜೀವನಾಡಿ. ಅದನ್ನು ಖಾಸಗಿಯವರಿಗೆ ಒಪ್ಪಿಸುವುದೆಂದರೆ ದೇಶದ ನರನಾಡಿಯೇ ಸ್ತಬ್ದಗೊಂಡಂತೆ’ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ರೈಲ್ವೆಯನ್ನೇ ನಂಬಿಕೊಂಡಿರುವ ಲಕ್ಷಾಂತರ ಕಾರ್ಮಿಕರಿಗೆ ಕೆಲಸ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಇಂತಹ ಜನವಿರೋಧಿ, ಕಾರ್ಮಿಕ ವಿರೋಧಿ ನೀತಿಯನ್ನು ಕೂಡಲೇ ಕೈಬಿಡಬೇಕು’ ಎಂದು ಒತ್ತಾಯಿಸಿದರು.
ಕಲಬುರ್ಗಿಯಲ್ಲಿ ಮಂಜೂರಾಗಿದ್ದ ವಿಭಾಗೀಯ ಕಚೇರಿಯನ್ನು ಕೂಡಲೇ ಆರಂಭಿಸಬೇಕು ಎಂದರು.ನಂತರ ರೈಲ್ವೆ ವ್ಯವಸ್ಥಾಪಕರಿಗೆ ಮನವಿಪತ್ರ ಸಲ್ಲಿಸಿದರು. ಸಿಐಟಿಯು ಜಿಲ್ಲಾ ಘಟಕದ ಸಂಚಾಲಕ ನಾಗಯ್ಯ ಜಿ. ಸ್ವಾಮಿ, ಗೌರಮ್ಮ ಪಾಟೀಲ, ಸಿದ್ದಲಿಂಗ ಪಾಳಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.