ಚಿಂಚೋಳಿ: ಪಟ್ಟಣದಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕಟ್ಟಡ ಕಳಪೆ ಕಾಮಗಾರಿಯಿಂದ ಗೋಡೆಗಳಲ್ಲಿ ಬಿರುಕು ಬಿಡುತ್ತಿದೆ ಎಂದು ವಿದ್ಯಾರ್ಥಿಗಳು ಆತಂಕ ವ್ಯಕ್ತ ಪಡಿಸಿದ್ದಾರೆ.
ನೆಲಮಹಡಿಯ 4 ಕೊಠಡಿಯನ್ನು ಕರ್ನಾಟಕ ಹೌಸಿಂಗ್ ಬೋರ್ಡ್ ನಿರ್ಮಿಸಿದರೆ ಅದರ ಪಕ್ಕದಲ್ಲಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮ 4 ಕೊಠಡಿ ನಿರ್ಮಿಸಿದೆ. ಈ ಕಟ್ಟಡದ ಮೇಲೆ ಪ್ರಥಮ ಮಹಡಿ ಹಾಗೂ ದ್ವೀತೀಯ ಮಹಡಿಯಲ್ಲಿ ಸುಮಾರು 10ಕ್ಕೂ ಹೆಚ್ಚು ಕೊಠಡಿಗಳನ್ನು ಹೈದರಾಬಾದ ಕರ್ನಾಟಕ ಅಭಿವೃದ್ಧಿ ಮಂಡಳಿಯ ನೆರವಿನಲ್ಲಿ ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಗಮಕಳೆದ ವರ್ಷ ನಿರ್ಮಿಸಿದೆ.
ಪ್ರಥಮ ಮಹಡಿಯ ಗೋಡೆ ಹಾಗೂ ದ್ವೀತಿಯ ಮಹಡಿಯ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ವಿಚಿತ್ರ ಎಂದರೆ ಕೊಠಡಿಯ ಕಾರಿಡಾರ್‌ಗೆ ಹಾಕಿದ ಛತ್ತಿನ ಕಾಲಂನಲ್ಲಿ ಬಿರುಕು ಕಾಣಿಸಿಕೊಂಡಿದ್ದು ಕಳಪೆ ಗುಣಮಟ್ಟದ ಕಾಮಗಾರಿಗೆ ಕನ್ನಡಿಯಾಗಿದೆ ಎಂದು ದೂರುತ್ತಾರೆ, ವಿದ್ಯಾರ್ಥಿಗಳು. ಇದರಿಂದ ಕೊಠಡಿಯ ಗೋಡೆಗಳು ತೇವ ಹಿಡಿದುಕೊಂಡು ನೀರು ಜಿನುಗುತ್ತಿವೆ. ಇಡಿ ಕೊಠಡಿಯಲ್ಲಿ ನೀರು ನಿಂತಿತ್ತು ಎಂದು ವಿದ್ಯಾರ್ಥಿ ಪುಟ್ಟರಾಜ ತಿಳಿಸಿದರು.
ಕಟ್ಟಡ ಬಿರುಕು ಬಿಡುತ್ತಿರುವುದರಿಂದ ಪ್ರಾಂಶುಪಾಲರು ಕಟ್ಟಡ ತಮ್ಮ ವಶಕ್ಕೆ ಪಡೆದುಕೊಂಡಿಲ್ಲ.
ಕಟ್ಟಡದ ತಾಂತ್ರಿಕತೆ ಕುರಿತು ಲೋಕೋಪಯೋಗಿ ಇಲಾಖೆಗೆ ಮತ್ತು ಕಟ್ಟಡ ನಿರ್ಮಾಣಕ್ಕೆ ಅನುದಾನ ನೀಡಿದ ಹೈಕ ಅಭಿವೃದ್ಧಿ ಮಂಡಳಿಗೆ ಪ್ರಾಂಶುಪಾಲರು ಪತ್ರ ಬರೆದರೂ ಮಂಡಳಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಪ್ರಾಂಶುಪಾಲ ಡಾ. ಸಂಗಪ್ಪ ಮಾಮನಶೆಟ್ಟಿ ಅಸಹಾಯಕತೆ ವ್ಯಕ್ತಪಡಿಸಿದರು.
ಅತ್ಯಂತ ಫಲವತ್ತಾದ ಆಳದವರೆಗೆ ಕಪ್ಪು ಮಣ್ಣು ಹೊಂದಿರುವ ಹೊಲದಲ್ಲಿ ಕಟ್ಟಡ ನಿರ್ಮಿಸಲಾಗಿದೆ. ಇದರಿಂದ ಈ ಹಿಂದೆಯೇ ಬಿರುಕು ಬಿಟ್ಟಿತ್ತು. ಈಗ ಪ್ರಥಮ ಮತ್ತು ದ್ವಿತೀಯ ಮಹಡಿಯಲ್ಲೂ ಬಿಡುಕು ಕಾಣಿಸುತ್ತಿದೆ.
ಕಾಲೇಜಿನಲ್ಲಿ 500ಕ್ಕೂ ಅಧಿಕ ವಿದ್ಯಾರ್ಥಿ–ವಿದ್ಯಾರ್ಥಿನಿಯರು ವ್ಯಾಸಂಗ ಮಾಡುತ್ತಿದ್ದಾರೆ.ಇವರಿಗೆ ಮೂಲ ಸೌಕರ್ಯ ಕಲ್ಪಿಸಲು ಹೈಕ ಅಭಿವೃದ್ಧಿ ಮಂಡಳಿ ನೀಡಿದ ಅನುದಾನದಿಂದ ಕಾಮಗಾರಿಯಲ್ಲಿ ಗುಣಮಟ್ಟದ ಕೊರತೆ ಕಂಡು ಬಂದಿರುವುದು ಅನುಮಾನಕ್ಕೆ ಆಸ್ಪದವಾಗಿದೆ.
ಮಂಡಳಿಯ ಕಾಮಗಾರಿಗಳ ಗುಣಮಟ್ಟ ದೃಢಿಕರಿಸಲು 3ನೇ ತಂಡದಿಂದ ಪರಿಶೀಲಿಸಲಾಗುತ್ತಿದೆ. ಆದರೆ 3ನೇ ತಣಡದ ಅಧಿಕಾರಿಗಳಿಗೆ ಹೆಸರಿಗಷ್ಟೆ ತಪಾಸಣೆ ಮಾಡುತ್ತಿದ್ದಾರೆ. ಅವರು ಭೃಷ್ಟರೊಂದಿಗೆ ಶಾಮೀಲಾದ ಸಂಶಯ ನಿಗಮದ ಕಾಮಗಾರಿಗಳ ಗುಣಮಟ್ಟವೇ ಸಾರುವಂತಿವೆ ಎನ್ನುತ್ತಾರೆ ಭೀಮಾ ಮಿಷನ್ ಅಧ್ಯಕ್ಷ ಭೀಮಶೆಟ್ಟಿ ಮುಕ್ಕಾ.
ಕಟ್ಟಡದ ನೆಲಮಹಡಿ ಸರಿಯಿಲ್ಲದ ಕಾರಣ ಕೆಲವು ಕಡೆ ಬಿರುಕು ಬಿಟ್ಟಿದೆ. ಇದರಿಂದ ಅಪಾಯವಿಲ್ಲ. ಪ್ಲಾಸ್ಟರ್‌ಗೆ ಬಳಸಿದ ಮರಳಿನಲ್ಲಿ ಮಣ್ಣು ಸೇರಿದ್ದರೆ ಬಿರುಕು ಬರುವ ಸಾಧ್ಯತೆಯಿದೆ ಎನ್ನುತ್ತಾರೆ ನಿಗಮದ ಸಹಾಯಕ ಎಂಜಿನಿಯರ್ ನಾಗನಾಥ್.
ಈ ಕಟ್ಟಡ ನಿರ್ಮಾಣ ಸಂದರ್ಭದಲ್ಲಿ 2 ವರ್ಷಗಳ ಹಿಂದೆ ಬಿರುಕು ಬಿಟ್ಟ ಕಟ್ಟಡ ಮೇಲೆ ಮತ್ತೊಂದು ಕಟ್ಟಡ ನಿರ್ಮಾಣ ಕುರಿತು ಪ್ರಜಾವಾಣಿಯಲ್ಲಿ ವರದಿ ಪ್ರಕಟಿಸಲಾಗಿತ್ತು. ಆಗ ಕಟ್ಟಡ ದುರಸ್ತಿ ಮಾಡಿದ ಗುತ್ತಿಗೆದಾರರು, ನಂತರ ತಾಂತ್ರಿಕ ಪರಿಣತಿ ಪಡೆದ ತಜ್ಞರ ತಂಡ ಬೆಂಗಳೂರಿನಿಂದ ಬಂದು ಕಟ್ಟಡ ಪರಿಶೀಲಿಸಿ ಪ್ರಥಮ ಹಾಗೂ ಮೊದಲ ಮಹಡಿಯಲ್ಲಿ ಕಟ್ಟಡ ನಿರ್ಮಾಣ ಮಾಡಬಹುದೆಂದು ತಜ್ಞರು ಅಭಿಪ್ರಾಯ ಪಟ್ಟಿದ್ದರು. ಇದನ್ನು ಆಧರಿಸಿ ಇಲ್ಲಿ ಕಟ್ಟಡ ನಿರ್ಮಿಸಲಾಗಿದೆ ಆದರೆ ಬಿರುಕು ಮಾತ್ರ ನಿಂತಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.