ADVERTISEMENT

‘ಸಮುದಾಯಗಳ ಬಲವರ್ಧನೆಗೆ ಸಮಾವೇಶ ಅಗತ್ಯ’

ಮುನ್ನೂರುರೆಡ್ಡಿ ಸಮಾಜದ ಸಮಾವೇಶ; 125ಕ್ಕೂ ಹೆಚ್ಚು ವಧು–ವರರು ಭಾಗಿ

​ಪ್ರಜಾವಾಣಿ ವಾರ್ತೆ
Published 20 ಮೇ 2024, 5:34 IST
Last Updated 20 ಮೇ 2024, 5:34 IST
<div class="paragraphs"><p>ಕಲಬುರಗಿಯ ಶಿರಡಿ ಸಾಯಿಬಾಬಾ ಮಂದಿರದ ಸಭಾ ಭವನದಲ್ಲಿ ಭಾನುವಾರ ಜಿಲ್ಲಾ ಮುನ್ನೂರುರೆಡ್ಡಿ ಸಮಾಜದ ವಧು–ವರರ ಸಮಾವೇಶ ನಡೆಯಿತು</p></div>

ಕಲಬುರಗಿಯ ಶಿರಡಿ ಸಾಯಿಬಾಬಾ ಮಂದಿರದ ಸಭಾ ಭವನದಲ್ಲಿ ಭಾನುವಾರ ಜಿಲ್ಲಾ ಮುನ್ನೂರುರೆಡ್ಡಿ ಸಮಾಜದ ವಧು–ವರರ ಸಮಾವೇಶ ನಡೆಯಿತು

   

–ಪ್ರಜಾವಾಣಿ ಚಿತ್ರ

ಕಲಬುರಗಿ: ‘ಸಮುದಾಯಗಳು ತಮ್ಮ ನೆಲೆಗಟ್ಟು ತಿಳಿದುಕೊಳ್ಳಲು, ಸಮಸ್ಯೆಗಳ ಬಗ್ಗೆ ಮೆಲುಕು ಹಾಕಲು ಸಮಾವೇಶಗಳು ಅಗತ್ಯ’ ಎಂದು ಗುಲಬರ್ಗಾ ವಿಶ್ವವಿದ್ಯಾಲಯದ ಹಿಂದಿ ಅಧ್ಯಯನ ವಿಭಾಗದ ಮುಖ್ಯಸ್ಥೆ ಪ್ರೊ. ಪರಿಮಳಾ ಅಂಬೇಕರ್‌ ಹೇಳಿದರು.

ADVERTISEMENT

ಜೇವರ್ಗಿ ರಸ್ತೆಯ ಶಿರಡಿ ಸಾಯಿಬಾಬಾ ಮಂದಿರದ ಸಭಾಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಜಿಲ್ಲಾ ಮುನ್ನೂರುರೆಡ್ಡಿ ಸಮಾಜದ ವಧು–ವರರ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಸಮುದಾಯಗಳನ್ನು ಬಲಗೊಳಿಸಲು ಈ ರೀತಿಯ ಸಮಾವೇಶಗಳು ಅಗತ್ಯ. ಸಮುದಾಯದ ಅಸ್ತಿತ್ವಕ್ಕಾಗಿ ಸಮಸ್ಯೆಗಳ ಬಗ್ಗೆ ಗಮನಹರಿಸಬೇಕು. ಎಲ್ಲ ಸಮುದಾಯಗಳಂತೆ ಮುನ್ನೂರರೆಡ್ಡಿ ಸಮುದಾಯದಲ್ಲೂ ವಧುಗಳ ಸಂಖ್ಯೆ ಕಡಿಮೆಯಾಗುತ್ತಿದೆ. ವಧು–ವರರು ಪಾಲಕರ ಸಮಕ್ಷಮದಲ್ಲಿ ಸಂಗಾತಿಗಳನ್ನು ಹುಡುಕಿಕೊಳ್ಳಬೇಕೆ ವಿನಃ ಯಾವುದೇ ವೆಬ್‌ಸೈಟ್‌ನಲ್ಲಿ ಅಲ್ಲ. ಇಲ್ಲಿ ಸೇರಿರುವ ವಧು–ವರರಿಗೆ ವರ್ಷದಲ್ಲಿಯೇ ಕಂಕಣಭಾಗ್ಯ ಕೂಡಿ ಬರಲಿ‘ ಎಂದು ಹಾರೈಸಿದರು.

ಜಿಲ್ಲಾ ಮುನ್ನೂರರೆಡ್ಡಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೊ. ಸೀತಾರಾಮ ಮುನ್ನೂರ ಮಾತನಾಡಿ, ‘ಪ್ರಸ್ತುತ ದಿನಗಳಲ್ಲಿ ಜಾತಿಗೊಂದು ಮ್ಯಾಟ್ರಿಮೊನಿ ಸೃಷ್ಟಿಯಾಗಿವೆ. ಆದರೆ ಅಲ್ಲಿ ಸಮಂಜಸವಾದ ವಧು–ವರರು ಸಿಗುತ್ತಿಲ್ಲ. ಪಾಲಕರ ಸಮಕ್ಷಮದಲ್ಲಿ ಈ ರೀತಿಯ ವೇದಿಕೆಯೇ ವಧು–ವರರಿಗೆ ಸೂಕ್ತ’ ಎಂದು ಹೇಳಿದರು.

‘ನಮ್ಮ ಸಂಘ 1977ರಲ್ಲಿ ಪ್ರಾರಂಭವಾಯಿತು. ಆದರೆ ಇದೇ ಮೊದಲ ಬಾರಿಗೆ ವಧು–ವರರ ಸಮಾವೇಶ ಆಯೋಜಿಸಲಾಗಿದೆ. ನಮ್ಮ ಸಮುದಾಯ ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣದಲ್ಲಿ ನೆಲೆಸಿದೆ. ಸಮುದಾಯದವರು ಸಹಕರಿಸಿದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು‘ ಎಂದು ಅವರು ಹೇಳಿದರು.

ರಾಯಚೂರಿನ ಮಾಜಿ ಶಾಸಕ ಎ.ಪಾಪಾರೆಡ್ಡಿ ಮಾತನಾಡಿ, ‘ರಾಯಚೂರಿನಲ್ಲಿ 25 ಸಾವಿರ ಜನ ಸಮುದಾಯದವರಿದ್ದೇವೆ. ಅಲ್ಲಿ ನಮ್ಮನ್ನು ಮುನ್ನೂರುಕಾಪು ಎಂದು ಗುರುತಿಸುತ್ತಾರೆ. ಕಲ್ಯಾಣ ಕರ್ನಾಟಕದಲ್ಲಿ 371ಜೆ ಜಾರಿಯಾದಾಗಿನಿಂದ ನಮ್ಮ ಮಕ್ಕಳೂ ಎಂಬಿಬಿಎಸ್‌, ಎಂಜಿನಿಯರಿಂಗ್‌ ಓದುತ್ತಿದ್ದಾರೆ. ನಾವು ಜಿಲ್ಲೆಯಲ್ಲಿಯೇ ಹೆಣ್ಣು–ಗಂಡು ಕೊಡುಕೊಳ್ಳುವಿಕೆಯಿಂದ ಸಮುದಾಯದವರು ಒಂದೇ ಕುಟುಂಬದವರಿಂತಿದ್ದೇವೆ’ ಎಂದು ಹೇಳಿದರು.

ಕಲಬುರಗಿ ಜಿಲ್ಲಾ ಮುನ್ನೂರುರೆಡ್ಡಿ ಸಮಾಜದ ಅಧ್ಯಕ್ಷ ವಾಸುದೇವ ಪಾಟೀಲ, ‘ಒಂದೂವರೆ ವರ್ಷದಿಂದ ಈ ಕಾರ್ಯಕ್ರಮಕ್ಕೆ ಪ್ರಯತ್ನಿಸಿದ್ದೇವೆ. ನಿರೀಕ್ಷೆಗೂ ಮೀರಿ ಜನ ಬಂದಿದ್ದೀರಿ. ಪ್ರತಿಯೊಂದು ಕಾರ್ಯಕ್ರಮಕ್ಕೂ ಸಮುದಾಯದ ಎಲ್ಲರ ಬೆಂಬಲ ಅಗತ್ಯವಿದೆ‘ ಎಂದು ಹೇಳಿದರು.

ಸಮಾವೇಶಕ್ಕೆ 125ಕ್ಕೂ ಹೆಚ್ಚು ವಧು–ವರರು ಪಾಲಕರೊಂದಿಗೆ ಆಗಮಿಸಿದ್ದರು. ವೇದಿಕೆಗೆ ಬಂದು ತಮ್ಮ ಪರಿಚಯ ಮಾಡಿಕೊಂಡರು. ಕಾರ್ಯಕ್ರಮದಲ್ಲಿ ಸಮುದಾಯದ ಜಿಲ್ಲಾ ಗೌರವ ಅಧ್ಯಕ್ಷ ಡಾ. ನಾಗನಾಥ ಗಚ್ಚಿನಮನಿ, ಸಂಪರ್ಕಾಧಿಕಾರಿ ಶಂಕರರಾವರೆಡ್ಡಿ ಗ್ವಾನ್‌, ರಾಯಚೂರು ಮುನ್ನೂರುಕಾಪು ಸಮಾಜದ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಕಾಂಗ್ರೆಸ್‌ ಮುಖಂಡ ಜಿ.ಬಸವರಾಜರೆಡ್ಡಿ, ಚಿಂಚೋಳಿಯ ಶಿವರಾವ ಮಕಾಸಿ, ಸೇಡಂನ ಮುರುಗೇಂದ್ರರೆಡ್ಡಿ ಸೇರಿದಂತೆ ಸಮಾಜದ ಹಲವರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.