ADVERTISEMENT

ಕಲಬುರಗಿ: ಜೈಲುಹಕ್ಕಿಗಳ ಬಾನುಲಿ ಕೇಂದ್ರ

ಕಲಬುರಗಿ ಕೇಂದ್ರ ಕಾರಾಗೃಹದಲ್ಲಿ ಕೈದಿಗಳಿಗಾಗಿಯೇ ಆರಂಭವಾಗಲಿದೆ ರೆಡಿಯೊ, ಕೈದಿಗಳೇ ಈ ರೆಡಿಯೊ ಜಾಕಿಗಳು

​ಪ್ರಜಾವಾಣಿ ವಾರ್ತೆ
Published 23 ಜನವರಿ 2022, 5:22 IST
Last Updated 23 ಜನವರಿ 2022, 5:22 IST
ಪಿ.ಎಸ್. ರಮೇಶ
ಪಿ.ಎಸ್. ರಮೇಶ   

ಕಲಬುರಗಿ: ‘ಕೈದಿಗಳ ಮನ ಪರಿವರ್ತನೆ ಮಾಡುವ ಉದ್ದೇಶದಿಂದ ರಾಜ್ಯದ ಎಲ್ಲ ಕೇಂದ್ರ ಕಾರಾಗೃಹಗಳಲ್ಲೂ ಸಮುದಾಯ ಬಾನುಲಿ ಕೇಂದ್ರ ತೆರೆಯಬೇಕು ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಪ್ರವೀಣ್‌ ಸೂದ್‌ ಅವರು ನಿರ್ದೇಶನ ನೀಡಿದ್ದಾರೆ. ಅದರಂತೆ, ಕಲಬುರಗಿಯ ಕಾರಾಗೃಹದಲ್ಲಿಯೂ ಇದರ ಸಿದ್ಧತೆ ಮಾಡಿಕೊಳ್ಳಲಾಗಿದೆ’ ಎಂದು ಕಾರಾಗೃಹ ಅಧೀಕ್ಷಕ ಪಿ.ಎಸ್. ರಮೇಶ ತಿಳಿಸಿದರು.

‘ಈಗಾಗಲೇ ಬೆಂಗಳೂರು ಹಾಗೂ ಮೈಸೂರಿನ ಕಾರಾಗೃಹಗಳಲ್ಲಿ ಸಮುದಾಯ ಬಾನುಲಿ ಕೇಂದ್ರ ತೆರೆಯಲಾಗಿದೆ. ಅಲ್ಲಿ ಕೈದಿಗಳಿಗಾಗಿಯೇ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಉನ್ನತ ಶಿಕ್ಷಣ ಪಡೆದ ಹಾಗೂ ಕಲಾತ್ಮಕವಾಗಿ ಮಾತನಾಡಬಲ್ಲ, ಹಾಡಬಲ್ಲ ಕೆಲವು ಕೈದಿಗಳನ್ನು ಆಯ್ಕೆ ಮಾಡಿಕೊಂಡು ‘ರೆಡಿಯೊ ಜಾಕಿ’ ತರಬೇತಿ ನೀಡಲಾಗಿದೆ. ಅವರ ಮೂಲಕ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ, ಇತರ ಕೈದಿಗಳಲ್ಲೂ ಮನ ಪರಿವರ್ತನೆ ಮಾಡುವ ಕೆಲಸ ನಡೆದಿದೆ. ಇದೇ ಮಾದರಿಯ ಬಾನುಲಿ ಇನ್ನು ಕೆಲವು ದಿನಗಳಲ್ಲಿ ಕಲಬುರಗಿ ಕೇಂದ್ರ ಕಾರಾಗೃಹದಲ್ಲೂ ಆರಂಭವಾಗಲಿದೆ’ ಎಂದು ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

ಗೃಹಸಚಿವ ಅರಗ ಜ್ಞಾನೇಂದ್ರ ಅವರು ಬೆಂಗಳೂರು ಕಾರಾಗೃಹಕ್ಕೆ ಈಚೆಗೆ ಭೇಟಿ ನೀಡಿದ ಸಂದರ್ಭದಲ್ಲಿ, ಅಲ್ಲಿನ ಬಾನುಲಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಅದೇ ಮಾದರಿಯನ್ನು ಎಲ್ಲೆಡೆಯೂ ತೆರೆಯುವಂತೆ ಸಚಿವರು ಸೂಚನೆ ನೀಡಿದ್ದಾರೆ. ಕೋವಿಡ್‌ ಕಾರಣಕ್ಕೆ ತುಸು ವಿಳಂಬವಾಗಿದೆ.

ADVERTISEMENT

ರೆಡಿಯೊಗಾಗಿ ಈಗಾಗಲೇ ಆರು ಕೈದಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅವರಿಗೆ ಬೆಂಗಳೂರಿನ ಏಜೆನ್ಸಿಯೊಂದರ ಮೂಲಕ ತರಬೇತಿ ಕೊಡಿಸಲು ಉದ್ದೇಶಿಸಲಾಗಿದ್ದು, ಮುಂದಿನ ವಾರವೇ ತರಬೇತಿ ಆರಂಭವಾಗಲಿದೆ. ಬಾನುಲಿ ಕೇಂದ್ರಕ್ಕೆ ಬೇಕಾದ ಮೂಲಸೌಕರ್ಯ, ತಾಂತ್ರಿಕ ಸಲಕರಣೆ ಹಾಗೂ ಕೊಠಡಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.

ನಾಟಕ, ಹಾಡು, ಕತೆ ಹೇಳುವುದು, ಉಪನ್ಯಾಸ, ಹಾಸ್ಯ ಮುಂತಾದ ಕಾರ್ಯಕ್ರಮಗಳನ್ನು ದಿನದ ಇಂತಿಷ್ಟು ಗಂಟೆಯಂತೆ ಪ್ರಸಾರ ಮಾಡಲು ನಿರ್ಧರಿಸಲಾಗಿದೆ. ವಿಶೇಷವಾಗಿ ಈ ಬಾನುಲಿಯು ಜೈಲಿನ ಒಳಗೆ ಪ್ರಸಾರವಾಗುತ್ತದೆ. ಹೊರಗಿನ ವ್ಯಕ್ತಿಗಳಿಂದ ಆಗಾಗ ಕಾರ್ಯಕ್ರಮ, ಉಪ‍ನ್ಯಾಸ ಮಾಲೆಯನ್ನೂ ಏರ್ಪಡಿಸುವ ಉದ್ದೇಶವಿದೆ ಎನ್ನುವುದು ಜೈಲಿನ ಅಧೀಕ್ಷಕರ ಮಾಹಿತಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.