ಕಲಬುರಗಿ: ‘ನಿಧನ ಹೊಂದಿದ ನೌಕರರ ಕುಟುಂಬದವರು ವಿಮಾ ಪರಿಹಾರದ ಹಣವನ್ನು ಮಕ್ಕಳ ಶಿಕ್ಷಣಕ್ಕೆ ಬಳಸಬೇಕು’ ಎಂದು ಸಾರಿಗೆ, ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಸಲಹೆ ನೀಡಿದರು.
ನಗರದ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿ ಆಂತರಿಕ ಗುಂಪು ವಿಮಾ ಯೋಜನೆಯಡಿ ನೋಂದಾಯಿಸಿಕೊಂಡು ಸೇವಾ ಅವಧಿಯಲ್ಲಿ ನಿಧನ ಹೊಂದಿದ 14 ಜನ ನೌಕರರ ನಾಮನಿರ್ದೇಶಿತರಿಗೆ ತಲಾ ₹10 ಲಕ್ಷ ಪರಿಹಾರದ ಚೆಕ್ ವಿತರಿಸಿ ಮಾತನಾಡಿ, ‘ಗುಂಪು ವಿಮೆ ಉತ್ತಮ ಯೋಜನೆಯಾಗಿದೆ. ದೇಶದಲ್ಲಿಯೇ ಮೊದಲ ಬಾರಿಗೆ ಇದನ್ನು ರೂಪಿಸಿದ ಅಧಿಕಾರಿಗಳ ಕಾರ್ಯ ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ ಮಾತನಾಡಿ, ‘ಆಂತರಿಕ ಗುಂಪು ಯೋಜನೆಯಡಿ ನೋಂದಾಯಿಸಿಕೊಂಡ ನೌಕರರಿಂದ ಪ್ರತಿ ತಿಂಗಳು ₹200 ಮತ್ತು ಸಂಸ್ಥೆಯು ನೌಕರರ ಪರವಾಗಿ ಪ್ರತಿ ತಿಂಗಳು ₹210 ಕಂತು ಪಾವತಿಸುತ್ತದೆ. ವಿಮಾ ಯೋಜನೆಯ ಸದಸ್ಯರು ನಿಧನರಾದರೆ ₹10 ಲಕ್ಷ ವಿಮಾ ಪರಿಹಾರದ ಜೊತೆಗೆ ಇತರ ಸೌಲಭ್ಯಗಳನ್ನು ನೀಡಲಾಗುತ್ತದೆ’ ಎಂದರು.
ಬೀದರ್ ವಿಭಾಗದ ಐವರು, ವಿಜಯಪುರದ ನಾಲ್ವರು, ಕಲಬುರಗಿಯ ಇಬ್ಬರು ಹಾಗೂ ರಾಯಚೂರು ವಿಭಾಗದ ಮೂವರು ನೌಕರರ ನಾಮನಿರ್ದೇಶಿತರಿಗೆ ತಲಾ ₹10 ಲಕ್ಷದಂತೆ ಒಟ್ಟು ₹1.40 ಕೋಟಿ ಪರಿಹಾರದ ಚೆಕ್ ವಿತರಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.