ಕಾಳಗಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಕಾಳಗಿ ತಾಲ್ಲೂಕು ಘಟಕದ 2024-2029ರ ವರೆಗಿನ 5 ವರ್ಷದ ಅವಧಿಗಾಗಿ ಇದೇ 28ರಂದು ಚುನಾವಣೆ ನಡೆಯಲಿದೆ.
ಚುನಾವಣೆಯಲ್ಲಿ ಪ್ರೌಢಶಾಲಾ ಶಿಕ್ಷಕರ ಕೇವಲ 2 ಸ್ಥಾನಗಳಿಗೆ 5 ಜನ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದು ತೀವ್ರ ಪೈಪೋಟಿ ಏರ್ಪಟ್ಟಿದೆ.
ವಿವಿಧ ಇಲಾಖೆಯ ಒಟ್ಟು 25 ಪ್ರತಿನಿಧಿಗಳ ಸ್ಥಾನಕ್ಕೆ 16 ಇಲಾಖೆಗಳಿಂದ ಒಟ್ಟು 34 ಜನರು ನಾಮಪತ್ರ ಸಲ್ಲಿಸಿ, ಕೊನೆಗಳಿಗೆಯಲ್ಲಿ ಸೋಮವಾರ 6 ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿದಿದ್ದಾರೆ. ಪರಿಣಾಮ ಪ್ರೌಢಶಾಲಾ ಶಿಕ್ಷಕರ 2 ಸ್ಥಾನ ಹೊರತುಪಡಿಸಿ ಇನ್ನುಳಿದ 15 ಇಲಾಖೆಗಳ 23 ಸ್ಥಾನಗಳಿಗೆ ಅಭ್ಯರ್ಥಿಗಳು ಅವಿರೋಧ ಆಯ್ಕೆಯಾಗಿದ್ದಾರೆ. ಆದರೆ ಕಾಳಗಿ, ಕೋಡ್ಲಿ, ಬೆಡಸೂರ, ನಿಪ್ಪಾಣಿ ಮತ್ತು ಹೆಬ್ಬಾಳ ಸರ್ಕಾರಿ ಪ್ರೌಢಶಾಲೆಯಿಂದ ಸ್ಪರ್ಧಿಸಿದ ರಮೇಶ ರಾಠೋಡ, ಬಾದಶಾ ಅಲ್ದಿ, ನಾಗಣ್ಣಾ ಸೇರಿ, ಚಂದ್ರಕಾಂತ ತಳವಾರ ಮತ್ತು ಬಾಬರ ಪಟೇಲ್ ಹೀಗೆ ಒಟ್ಟು 5 ಜನ ಶಿಕ್ಷಕರು ಯಾವುದೇ ಕಾರಣಕ್ಕೂ ತ್ಯಾಗ ಮಾಡದೆ ‘ಯಾರೇನು ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ’ ಭರ್ಜರಿ ಪ್ರಚಾರದೊಂದಿಗೆ ಚುನಾವಣೆಗೆ ಧುಮುಕಿದ್ದಾರೆ.
ಈ ಅಭ್ಯರ್ಥಿಗಳು ಪರಸ್ಪರ ಒಮ್ಮತದೊಂದಿಗೆ ಕೂಡಿಕೊಂಡಿದ್ದೇಯಾದರೆ ಈ 2 ಸ್ಥಾನವು ಅವಿರೋಧ ಆಯ್ಕೆಯಾಗಿ ಮತದಾನದ ಅವಶ್ಯಕತೆ ಬೀಳುತ್ತಿರಲಿಲ್ಲ. ಇಡೀ ತಾಲ್ಲೂಕು ಘಟಕವೇ ಅವಿರೋಧ ಆಯ್ಕೆಯಾದಂತಾಗಿ ಮುಂದೆ ಅಧ್ಯಕ್ಷ, ಉಪಾಧ್ಯಕ್ಷ ಮತ್ತಿತರ ಪದಾಧಿಕಾರಿಗಳ ಆಯ್ಕೆಯು ಸಹ ‘ಅವಿರೋಧ’ ದಾರಿ ಅನುಸರಿಸುವುದರಲ್ಲಿ ಯಾವುದೇ ಅನುಮಾನ ಇರಲಿಲ್ಲ.
ಆದರೆ ಶಿಕ್ಷಕರ ಮನೋಭಾವದ ಕೊರತೆಯ ಬಿಗಿಪಟ್ಟಿನಿಂದ ಅವರಿಗಾಗಿಯೇ ಸೋಮವಾರ (ಅ.28) ಚುನಾವಣೆ ನಡೆಯಲಿದ್ದು, ಕಾಳಗಿ ಸರ್ಕಾರಿ ಪ್ರೌಢಶಾಲೆಯ ಮತಗಟ್ಟೆಯಲ್ಲಿ ಬೆಳಿಗ್ಗೆ 9ರಿಂದ ಸಂಜೆ 4ರವರೆಗೆ 28 ಸರ್ಕಾರಿ ಪ್ರೌಢಶಾಲೆಗಳ 192 ಶಿಕ್ಷಕರು ಹಕ್ಕು ಚಲಾಯಿಸಲಿದ್ದಾರೆ. ಮತದಾನ ಮುಗಿದ ಬಳಿಕ ಆ ದಿನವೇ ಮತ ಎಣಿಕೆ ನಡೆಯಲಿದ್ದು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಚುನಾವಣಾಧಿಕಾರಿ ಅಣಿವೀರಪ್ಪ ನಾಗೂರ ತಿಳಿಸಿದ್ದಾರೆ.
ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ಎಲ್ಲರೂ ಕೂಡಿ ಒಮ್ಮತದ ನಿರ್ಧಾರ ತೆಗೆದುಕೊಂಡರೆ ಅವಿರೋಧ ಆಯ್ಕೆಯಾಗಿ ನೌಕರರ ಸಂಘಕ್ಕೆ ಕೀರ್ತಿ ಬರುತ್ತಿತ್ತು-ಶರಣಗೌಡ ಪಾಟೀಲ ಅಧ್ಯಕ್ಷ ರಾಜ್ಯ ಸರ್ಕಾರಿ ನೌಕರರ ಸಂಘ ತಾಲ್ಲೂಕು ಘಟಕ ಕಾಳಗಿ
ನಾನು ಸತತ ಪ್ರಯತ್ನ ಮಾಡಿದೆ. ಇಬ್ಬರು ಶಿಕ್ಷಕರು ಹಿಂದೆ ಸರಿಯಲು ತಯಾರಿದ್ದರು. ಆದರೆ ಒಬ್ಬರು ಸಿದ್ಧರಿರಲಿಲ್ಲ. ಹಾಗಾಗಿ ಚುನಾವಣೆ ಅನಿವಾರ್ಯವಾಗಿದೆ.ಶಿವಕುಮಾರ ಶಾಸ್ತ್ರಿ ಅಧ್ಯಕ್ಷ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘ ತಾಲ್ಲೂಕು ಘಟಕ ಕಾಳಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.