ADVERTISEMENT

ಮೊಂಡುತನ ಹೇಳಿಕೆ ಸರಿಯಲ್ಲ: ಸಿದ್ದಲಿಂಗ ಶ್ರೀ ವಿರುದ್ಧ ಲಚ್ಚಪ್ಪ ಜಮಾದಾರ ಅಸಮಾಧಾನ

ಆಂದೋಲಾ ಸಿದ್ದಲಿಂಗ ಸ್ವಾಮೀಜಿ ವಿರುದ್ಧ ಮುಖಂಡರ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 13:08 IST
Last Updated 30 ಜೂನ್ 2024, 13:08 IST
ಲಚ್ಚಪ್ಪ ಜಮಾದಾರ
ಲಚ್ಚಪ್ಪ ಜಮಾದಾರ   

ಕಲಬುರಗಿ: ‘ಘತ್ತರಗಾ ಭಾಗ್ಯವಂತಿ ದೇವಸ್ಥಾನದ ಸೌಂದರ್ಯೀಕರಣ ಕಾಮಗಾರಿಗೆ ಸಂಬಂಧಿಸಿದ್ದಂತೆ ಕೆಎಎಸ್‌ ಹಿರಿಯ ಶ್ರೇಣಿ ಅಧಿಕಾರಿ ಭೀಮಾಶಂಕರ ತೆಗ್ಗಳ್ಳಿ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡುವ ಭರದಲ್ಲಿ ಆಂದೋಲಾ ಸಿದ್ದಲಿಂಗ ಸ್ವಾಮೀಜಿ ತಾವೇ ತೀರ್ಪು ಕೊಟ್ಟಂತೆ ಮಾತನಾಡಿದ್ದಾರೆ. ಇದು ಖಂಡನೀಯ’ ಎಂದು ಕಾಂಗ್ರೆಸ್‌ ಮುಖಂಡ ಲಚ್ಚಪ್ಪ ಜಮಾದಾರ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಸ್ವಾಮೀಜಿಯಾದವರು ದಾರಿ ತಪ್ಪುವವರಿಗೆ ಮಾರ್ಗದರ್ಶನ ಮಾಡಿ ಅವರನ್ನು ಸರಿದಾರಿಗೆ ತರಬೇಕು. ಅದನ್ನು ಬಿಟ್ಟು ಆರೋಪವನ್ನೇ ಸತ್ಯ ಎಂದು ಬಿಂಬಿಸುವಂತೆ ಮಾತನಾಡಿರುವುದು ಅವರ ಮನದಲ್ಲಿರುವ ಕೆಟ್ಟತನ ಸೂಚಿಸುತ್ತದೆ’ ಎಂದರು.

‘ಆಂದೋಲಾ ಸ್ವಾಮೀಜಿ ಈ ಹಿಂದೆ ಅನೇಕ ಕಳ್ಳರನ್ನು ಜೊತೆಗಿಟ್ಟುಕೊಂಡಿದ್ದರು. ಹಲವು ಪ್ರಕರಣ ಹೊಂದಿರುವ ಆರೋಪಿಗಳನ್ನು ತಲೆ ಮೇಲೆ ಕೂರಿಸಿಕೊಂಡು ಶಾಸಕರನ್ನಾಗಿ ಮಾಡಲು ಹೊರಟ್ಟಿದ್ದರು. ಸಮಾಜ ಸುಧಾರಿಸುವ ಕೆಲಸ ಮಾಡುವುದು ಬಿಟ್ಟು, ಮೊಂಡುತನದ ಹೇಳಿಕೆ ಕೊಡುವುದಾದರೆ ಅವರನ್ನು ಗೂಂಡಾ ಸ್ವಾಮೀಜಿ ಎಂದು ಕರೆಯಬೇಕಾಗುತ್ತದೆ’ ಎಂದು ಎಚ್ಚರಿಸಿದರು.

ADVERTISEMENT

ಘತ್ತರಗಾ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಾಚಪ್ಪ ನೆಲೋಗಿ ಮಾತನಾಡಿ, ‘ಭೀಮಾಶಂಕರ ತೆಗ್ಗಳ್ಳಿ ವಿರುದ್ಧದ ಆರೋಪ ನಿರಾಧಾರ. ಆಂದೋಲಾ ಸ್ವಾಮೀಜಿ ಬೇಕಿದ್ದರೆ ದೇವಸ್ಥಾನಕ್ಕೆ ಭೇಟಿ ಕೊಟ್ಟು, ತೆಗ್ಗಳ್ಳಿ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿ ನೋಡಲಿ’ ಎಂದರು.

ಕಾರ್ಮಿಕ ಮುಖಂಡ ಸುನೀಲ ಮಾನಪಡೆ ಮಾತನಾಡಿ, ‘ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಪೇ(ಹಣ ಪಡೆಯುವುದು), ಪ್ರೆಸ್‌ಮೀಟ್‌(ಪ್ರತಿಕಾಗೋಷ್ಠಿ ನಡೆಸುವುದು) ಹಾಗೂ ಪ್ರಚಾರಕ್ಕೆ ಇಳಿದಿದ್ದಾರೆ. ಯಾರದೋ ಮಾತು ಕೇಳಿ ಆರೋಪಗಳನ್ನು ಮಾಡುತ್ತಿದ್ದಾರೆ. ಸ್ವಾಮೀಜಿ ಹಾಕಿದ ಕಾವಿಯನ್ನು ನಾವು ಗೌರವಿಸುತ್ತೇವೆ. ಅದರಲ್ಲಿ ಇದ್ದುಕೊಂಡು ವ್ಯವಹಾರ, ವ್ಯಾಪಾರ ಮಾಡುವುದು ಸಲ್ಲ. ಬೇಕಾದರೆ ಸ್ವಾಮೀಜಿ ಕಾವಿ ತೆಗೆದು ಖಾದಿ ಹಾಕಿ ರಾಜಕೀಯಕ್ಕೆ ಬರಲಿ’ ಎಂದು ಸಲಹೆ ನೀಡಿದರು.

ಸಿದ್ಧಾರ್ಥ ಬಸರಿಗಿಡ ಮಾತನಾಡಿ, ‘ಭೀಮಾಶಂಕರ ತೆಗ್ಗಳ್ಳಿ, ಶಂಕ್ರಣ್ಣ ವಣಿಕ್ಯಾಳ ಭ್ರಷ್ಟಾಚಾರ ಮಾಡಿದ್ದೆಯಾದರೆ, ಆಂದೋಲಾ ಸಿದ್ದಲಿಂಗ ಸ್ವಾಮೀಜಿ ಘತ್ತರಗಾ ಭಾಗ್ಯವಂತಿ ದೇವಿ ಪಾದ ಮುಟ್ಟಿ ಜನರಿಗೆ ಸತ್ಯ ಹೇಳಲಿ’ ಎಂದು ಸವಾಲು ಹಾಕಿದರು.

ಮನೋಹರ ಬಿಲ್ಲಾಡ ಹಾಗೂ ಘತ್ತರಗಾ ಗ್ರಾಮಸ್ಥ ಲಕ್ಷ್ಮಿಕಾಂತ ಸಿಂಗೆ ಮಾತನಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.