ADVERTISEMENT

‌‘ಕಲಬುರಗಿಗೆ ಪ್ರಧಾನಿ ಕೊಡುಗೆ ಏನು?’

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ ಸೊರಕೆ ಪ್ರಶ್ನೆ

​ಪ್ರಜಾವಾಣಿ ವಾರ್ತೆ
Published 1 ಮೇ 2024, 15:38 IST
Last Updated 1 ಮೇ 2024, 15:38 IST
<div class="paragraphs"><p>ವಿನಯಕುಮಾರ್‌ ಸೊರಕೆ</p></div>

ವಿನಯಕುಮಾರ್‌ ಸೊರಕೆ

   

ಕಲಬುರಗಿ: ‌‘ಕಲಬುರಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಚ್ಚುಮೆಚ್ಚಿನ ಕ್ಷೇತ್ರ. ಆಗಾಗ ಇಲ್ಲಿಗೆ ಭೇಟಿ ಕೊಡುತ್ತಾರೆ. ಆದರೆ, ಕಲಬುರಗಿಗೆ ಏನು ಕೊಡುಗೆ ಕೊಟ್ಟಿದ್ದಾರೆ’ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ ಸೊರಕೆ ‌ಪ್ರಶ್ನಿಸಿದರು. 

ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ADVERTISEMENT

‘ಮಲ್ಲಿಕಾರ್ಜುನ ಖರ್ಗೆ ಕೊಡುಗೆ ಈ ಭಾಗಕ್ಕೆ ಅಪಾರವಾಗಿದೆ. 371(ಜೆ) ಜಾರಿ, ಇಎಸ್‌ಐ ಆಸ್ಪತ್ರೆ ಸ್ಥಾಪನೆ, ಕೇಂದ್ರೀಯ ವಿಶ್ವವಿದ್ಯಾಲಯವನ್ನು ಈ ಭಾಗಕ್ಕೆ ಅವರು ತಂದಿದ್ದಾರೆ. ಇದೀಗ ಅವರು ಎಐಸಿಸಿ ಅಧ್ಯಕ್ಷರಾಗಿದ್ದು, ಕಲಬುರಗಿ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿರುವ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸುವ ಮೂಲಕ ಅವರ ಕೈಬಲಪಡಿಸಬೇಕು’ ಎಂದು ಕೋರಿದರು.

‘ಉಳುವವನೇ ಭೂಮಿಯ ಒಡೆಯ ಕಾಯ್ದೆ ಜಾರಿ ಮೂಲಕ ಬಡವರಿಗೆ ಭೂ ಒಡೆತನ ನೀಡಿದ್ದು ಕಾಂಗ್ರೆಸ್‌ ಪಕ್ಷ. ನಮ್ಮ ಪಕ್ಷದ ನಿಲುವು ಭೂ ಒಡೆತನ ಕೊಡುವುದಾಗಿದ್ದರೆ, ಬಿಜೆಪಿಯವರು ಸದಾನಂದಗೌಡ ಮುಖ್ಯಮಂತ್ರಿಯಾಗಿದ್ದ ವೇಳೆ ಸರ್ಕಾರಿ ಜಾಗ ಅತಿಕ್ರಮಣ ಮಾಡಿಕೊಂಡಿರುವ ಬಡವರಿಗೆ ಜೈಲು ಶಿಕ್ಷೆ ಕೊಡಬೇಕು ಎಂಬ ಕಾಯ್ದೆ ಜಾರಿಗೊಳಿಸಿದರು. ಇದೇ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ಇರುವ ವ್ಯತ್ಯಾಸ’ ಎಂದು ವಿಶ್ಲೇಷಿಸಿದರು.

‘ಸಂಸತ್ತಿನಲ್ಲಿ ಈ ಭಾಗದ ಸಮಸ್ಯೆಗಳನ್ನು ಎತ್ತಬಲ್ಲ ಸ್ವರವನ್ನೇ ಹತ್ತಿಕ್ಕಲು ಬಿಜೆಪಿ ಯತ್ನಿಸುತ್ತಿದೆ. ಮುಂದಿನ ಸಲ ಚುನಾವಣೆ ನಡೆಯುತ್ತದೆಯೋ ಇಲ್ಲವೇ ಎಂಬ ಅನುಮಾನ ಕಾಡುತ್ತಿದೆ. ಸಂವಿಧಾನವನ್ನೇ ಬದಲಿಸುವ, ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವ ಪ್ರಕ್ರಿಯೆಯಲ್ಲಿ ಬಿಜೆಪಿ ತೊಡಗಿದೆ. ಒಂದು ರಾಷ್ಟ್ರ, ಒಂದು ಧರ್ಮ, ಒಂದು ಭಾಷೆ, ಒಂದು ಚುನಾವಣೆ... ಇವೆಲ್ಲವೂ ನಮ್ಮ ಸಂವಿಧಾನಕ್ಕೆ ವಿರುದ್ಧವಾಗಿವೆ. ಈ ದೃಷ್ಟಿಯಲ್ಲಿ ದೇಶದಲ್ಲಿ ಸಂವಿಧಾನ ಉಳಿಸಲು, ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ಈ ಚುನಾವಣೆ ಮಹತ್ವದ್ದಾಗಿದೆ’ ಎಂದರು.

‘10 ವರ್ಷಗಳಲ್ಲಿ ದೇಶದಲ್ಲಿ ಅಚ್ಛೆ ದಿನಗಳು ಬಂದಿವೆಯಾ‌‌’ ಎಂದು ಪ್ರಶ್ನಿಸಿದ ಸೊರಕೆ, ದೇಶದಲ್ಲಿ ಬಡತನ, ನಿರುದ್ಯೋಗ ಪ್ರಮಾಣ 2014ಕ್ಕೂ ಮುನ್ನ ಎಷ್ಟಿತ್ತು? 2024ರಲ್ಲಿ ಎಷ್ಟಿದೆ ಎಂಬುದನ್ನು ಅಂಕಿ–ಅಂಶ ಸಹಿತ ವಿವರಿಸಿದರು.

‘ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕದೊಂದಿಗೆ ಬಿಜೆಪಿ ಮಲತಾಯಿ ಧೋರಣೆ ಅನುಸರಿಸುತ್ತಿದೆ. ರಾಜ್ಯದಿಂದ ₹4.5 ಲಕ್ಷ ಕೋಟಿ ತೆರಿಗೆ ಸಂಗ್ರಹಿಸುವ ಕೇಂದ್ರ ಸರ್ಕಾರ, ಅದರಲ್ಲಿ ನಮಗೆ ₹50 ಸಾವಿರ ಕೋಟಿ ಬರಬೇಕು. ಆದರೆ, ಬರೀ ₹13 ಸಾವಿರ ಕೋಟಿ ಕೊಡುತ್ತಾರೆ. ಮೇಕೆದಾಟು, ಕೃಷ್ಣಾ ಮೇಲ್ದಂಡೆ ಯೋಜನೆ, ಮಹದಾಯಿ ಯೋಜನೆಗೆ ಸರಿಯಾಗಿ ಸ್ಪಂದಿಸದೇ ಅನ್ಯಾಯ ಮಾಡಿದೆ. ಭದ್ರಾ ಯೋಜನೆಗೆ ಘೋಷಿಸಿರುವ ಹಣ ಇನ್ನೂ ಬಿಡುಗಡೆಯಾಗಿಲ್ಲ’ ಎಂದು ಟೀಕಿಸಿದರು.

‌‘ಇ.ಡಿ., ಐಟಿ, ಸಿಬಿಐ ಮೂಲಕ ವಿರೋಧ ಪಕ್ಷಗಳನ್ನು ದಮನ ಮಾಡುವ ಕೆಲಸ ಬಿಜೆಪಿ ಮಾಡುತ್ತಿದೆ. ಇವೆಲ್ಲವೂ ಪ್ರಜಾಪ್ರಭುತ್ವ ವಿರೋಧಿ ನಡೆಗಳು. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ, ಸಂವಿಧಾನ ಉಳಿಯಬೇಕಿದ್ದರೆ, ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಗೆಲ್ಲುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಅಶೋಕ, ವಿಧಾನ ಪರಿಷತ್ ಮಾಜಿ ಸದಸ್ಯ ಡೇವಿಡ್‌ ಸಿಮಿಯೋನ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು.

ತೇಜಸ್ವಿನಿ ಗೌಡ
ಕೆ.ಎಚ್.ಮುನಿಯಪ್ಪ

Cut-off box - ‘ಅನುಕೂಲಸಿಂಧು ರಾಜಕಾರಣ’ ‘ಕಳೆದ 10 ವರ್ಷಗಳಲ್ಲಿ ಒಂದೂ ಪತ್ರಿಕಾಗೋಷ್ಠಿ ನಡೆಸದ ಪ್ರಧಾನಿ ನರೇಂದ್ರ ಮೋದಿ ಅವರು ನಿಯಂತ್ರಿತ ಪ್ರಧಾನಿ ಸ್ಕ್ರಿಪ್ಟೆಡ್‌ ಪ್ರಧಾನಿ. ಅವರಿಗೆ ಜನರನ್ನು ಎದುರಿಸುವ ಧೈರ್ಯವಿಲ್ಲ‌’ ಎಂದು ಮಾಜಿ ಸಂಸದೆ ತೇಜಸ್ವಿನಿ ಗೌಡ ಟೀಕಿಸಿದರು. ‘ರಾಹುಲ್‌ ಅವರನ್ನು ಯುವರಾಜ’ ಎಂದು ಮೋದಿ ಟೀಕಿಸುತ್ತಾರೆ. ಸೋನಿಯಾ ರಾಣಿಯೂ ಅಲ್ಲ ರಾಹುಲ್‌ ಯುವರಾಜನೂ ಅಲ್ಲ. ಹವಾನಿಯಂತ್ರಿಸ ವ್ಯವಸ್ಥೆಯಲ್ಲಿ ಕುಳಿತು ನಿರ್ದೇಶಿತ ಪ‍ತ್ರಿಕಾಗೋಷ್ಠಿಗಳನ್ನು ನಡೆಸುವ ಜನರ ಬಳಿಯೇ ಹೋಗದೇ ಇರುವ ನೀವು ರಾಜಕುಮಾರ. 4 ಸಾವಿರ ಕಿಲೊ ಮೀಟರ್‌ಗಳನ್ನು ಪಾದಯಾತ್ರೆ ಮೂಲಕ ನಡೆಸಿದ ರಾಹುಲ್‌ ಗಾಂಧಿಯಲ್ಲ’ ಎಂದು ತಿರುಗೇಟು ನೀಡಿದರು. ‘ಬಿಜೆಪಿಯದ್ದು ಅನುಕೂಲಸಿಂಧು ರಾಜಕಾರಣ. ಡಬಲ್‌ ಎಂಜಿನ್‌ ಅಲ್ಲ ಡಬಲ್‌ ಸ್ಟ್ಯಾಂಡರ್‌(ಇಬ್ಬಗೆ ನೀತಿ) ಪಕ್ಷ. ದೇಶ ಮೊದಲು ಅಂದ ಬಿಜೆಪಿ ಬಳಿಕ ಪಕ್ಷ ಮೊದಲು ಅಂತು. ಇದೀಗ ಮೋದಿ ನಾಮಸ್ಮರಣೆ ಮಾಡುತ್ತಿದೆ. ಮೋದಿ ಹೆಸರೇ ಮತಗಳನ್ನು ಸೆಳೆಯುವಂತಿದ್ದರೆ 100 ಹಾಲಿ ಸಂಸದರಿಗೆ ಬಿಜೆಪಿ ಟಿಕೆಟ್‌ ನಿರಾಕರಿಸಿದ್ದು ಏಕೆ’ ಎಂದು ಪ್ರಶ್ನಿಸಿದರು. ‘ಸಂಸತ್ತಿನಲ್ಲಿ ಮಾತನಾಡುವ ಜನರ ಅಗತ್ಯವಿದೆ. ಮೌನಿಬಾಬಾಗಳು ಬೇಡ. ನ್ಯಾಯಯುತ ಅನುದಾನ ಅಭಿವೃದ್ಧಿ ಯೋಜನೆಗಳು ರಾಜ್ಯಕ್ಕೆ ಬರಬೇಕಾದರೆ ಮಾತನಾಡುವಂಥ ವಿದ್ಯಾಭ್ಯಾಸ ಇರುವಂಥವರನ್ನು ಸಂಸತ್ತಿಗೆ ಆರಿಸಿ ಕಳುಹಿಸಬೇಕಿದೆ. ಹೀಗಾಗಿ ಕಲಬುರಗಿ ಕ್ಷೇತ್ರದ ಜನರು ರಾಧಾಕೃಷ್ಣ ದೊಡ್ಡಮನಿ ಅವರಿಗೆ ಮತ ನೀಡಬೇಕು’ ಎಂದು ಕೋರಿದರು.

Cut-off box - ‘ಬಿಜೆಪಿಯಿಂದ ಸೇಡಿನ ರಾಜಕಾರಣ’ ‘ರಾಜಕೀಯ ಮಾಡುವವರಿಗೆ ದೇಶದ ಹಿತಾಸಕ್ತಿ ಇರಬೇಕು. ಆದರೆ ಬಿಜೆಪಿ ರಾಜ್ಯ ಸರ್ಕಾರಕ್ಕೆ ಅಕ್ಕಿ ಕೊಡುವ ವಿಷಯದಲ್ಲಿ ಸೇಡಿನ ರಾಜಕಾರಣ ಮಾಡಿತು’ ಎಂದು ಆಹಾರ ಮತ್ತು ನಾಗರಿಕ ಇಲಾಖೆಯ ಸಚಿವ ಕೆ.ಎಚ್.ಮುನಿಯಪ್ಪ ಟೀಕಿಸಿದರು. ನಗರದ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ‘ಕೇಂದ್ರ ಸರ್ಕಾರದ ಬಳಿ 2 ಲಕ್ಷಕ್ಕೂ ಅಧಿಕ ಟನ್‌ ಅಕ್ಕಿ ಇತ್ತು. ಆದರೆ ದಾಸ್ತಾನಿರುವ ಅಕ್ಕಿ ಕೇಳಿದರೂ ಕಾಂಗ್ರೆಸ್‌ ಸರ್ಕಾರಕ್ಕೆ ಲಾಭವಾಗುತ್ತದೆ ಎಂದು ಕೊಡಲಿಲ್ಲ. ಬಳಿಕ ಅದನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಿತು ಅದರಲ್ಲಿ ಪ್ರತಿ ಕೆ.ಜಿಗೆ ₹19 ಮಾತ್ರವೇ ಕೇಂದ್ರದ ಬೊಕ್ಕಸಕ್ಕೆ ಸೇರಿತು. ನಮಗೆ ಅಕ್ಕಿಕೊಟ್ಟಿದ್ದರೆ ಪ್ರತಿ ಕೆ.ಜಿಗೆ ₹34 ಹಣ ಕೇಂದ್ರದ ಬೊಕ್ಕಸಕ್ಕೆ ಹೋಗುತ್ತಿತ್ತು’ ಎಂದು ಪ್ರತಿಪಾದಿಸಿದರು. ‘ಕೇಂದ್ರ ಬಿಜೆಪಿ ಸರ್ಕಾರ 10 ವರ್ಷಗಳಲ್ಲಿ ಏನೂ ಮಾಡಿಲ್ಲ. ಯುಪಿಎ ಅವಧಿಯಲ್ಲಿ ಬಡವರ ಹಸಿವು ನೀಗಿಸಲು ನಾವು ಆಹಾರ ಭದ್ರತಾ ಕಾಯ್ದೆ ಉದ್ಯೋಗ ನೀಡಲು ನರೇಗಾದಂಥ ಯೋಜನೆಗಳ್ನು ಜಾರಿಗೊಳಿಸಿದ್ದೆವು. ಈಗ ಚುನಾವಣೆಯಲ್ಲಿ ಗೆದ್ದರೆ ಸಾಲಮನ್ನಾ ಸೇರಿದಂತೆ ಮತ್ತೆ ಐದು ಯೋಜನೆಗಳನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ. ದೇಶ ಸುಭಿಕ್ಷವಾಗಿರಲು ಪ್ರಜಾಪ್ರಭುತ್ವ ವ್ಯವಸ್ಥೆ ಸಂವಿಧಾನ ಉಳಿಸಲು ಈ ಸಲ ಕಾಂಗ್ರೆಸ್‌ ಅಭ್ಯರ್ಥಿ ರಾಧಾಕೃಷ್ಣ ದೊಡ್ಡಮನಿ ಅವರನ್ನು ಬೆಂಬಲಿಸಬೇಕು’ ಎಂದು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.