ADVERTISEMENT

ಕಾಂಗ್ರೆಸ್‌ ಪಕ್ಷವೇ ಮುಳುಗುತ್ತಿರುವ ಹಡಗು: ಬಾಲರಾಜ್ ಗುತ್ತೇದಾರ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2024, 15:07 IST
Last Updated 22 ಮಾರ್ಚ್ 2024, 15:07 IST
<div class="paragraphs"><p>ಬಾಲರಾಜ್ ಗುತ್ತೇದಾರ</p></div>

ಬಾಲರಾಜ್ ಗುತ್ತೇದಾರ

   

ಕಲಬುರಗಿ: ‘ದೇಶದಲ್ಲಿ ಕಾಂಗ್ರೆಸ್‌ ಪಕ್ಷ ಯಾವ ರೀತಿ ಮುಳುಗುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಯಾವ ಪಕ್ಷ ಮುಳುಗುತ್ತಿರುವ ಹಡಗು ಎಂಬುದು ಅವರಿಗೆ ಅರಿವಾಗಲಿದೆ’ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಬಾಲರಾಜ್ ಗುತ್ತೇದಾರ ಅವರು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ ಅವರ ‘ಜೆಡಿಎಸ್ ಪಕ್ಷ ಮುಳುಗುತ್ತಿರುವ ಹಡಗು’ ಹೇಳಿಕೆಗೆ ತಿರುಗೇಟು ನೀಡಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕುಟುಂಬ ರಾಜಕಾರಣದ ಪಕ್ಷ ಎಂದು ಕಾಂಗ್ರೆಸ್‌ನವರು ಜೆಡಿಎಸ್‌ಗೆ ಹೆಸರಿಡುತ್ತಿದ್ದರು. ದೇಶದಲ್ಲಿ ಕಾಂಗ್ರೆಸ್‌ನ ಟಿಕೆಟ್‌ ಹಂಚಿಕೆ ಪಟ್ಟಿ ನೋಡಿದರೆ ರಾಜಕಾರಣಿಗಳ ಸಂಬಂಧಿಕರೇ ಇದ್ದಾರೆ. ಅಲ್ಲದೇ, ಕಲಬುರಗಿ ಕ್ಷೇತ್ರದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣ ಅವರಿಗೆ ಟಿಕೆಟ್‌ ಕೊಡಲಾಗಿದೆ. ಮೊದಲು ತಮ್ಮ ಬೆನ್ನು ತಾವು ನೋಡಿಕೊಂಡು ಬೇರೆಯವರ ಬಗ್ಗೆ ಮಾತನಾಡಬೇಕು’ ಎಂದು ಹೇಳಿದರು.

ADVERTISEMENT

‘ಜೆಡಿಎಸ್ ಯಾವತ್ತೂ ಜಾತ್ಯತೀತ ಪಕ್ಷವಾಗಿರಲಿದೆ. ಕಾಂಗ್ರೆಸ್ ಪಕ್ಷವು ವೋಟ್‌ ಬ್ಯಾಂಕ್‌ಗಾಗಿ ಬಿಜೆಪಿಯನ್ನು ಸದಾ ಕೋಮುವಾದಿ ಪಕ್ಷ ಎಂದು ಬಿಂಬಿಸಿಕೊಂಡು ಬರುತ್ತಿದೆ. ಅದೇ ಮಹಾರಾಷ್ಟ್ರದಲ್ಲಿ ಶಿವಸೇನೆ ಜೊತೆ ಮೈತ್ರಿ ಮಾಡಿಕೊಳ್ಳುವಾಗ ನಿಮ್ಮ ಜಾತ್ಯತೀತ ಎಲ್ಲಿಗೆ ಹೋಗಿತ್ತು? ಆಗ ಶಿವಸೇನೆಯಲ್ಲಿನ ಕೋಮುವಾದಿ ಕಾಣಿಸಲಿಲ್ಲವೇ?’ ಎಂದು ಪ್ರಶ್ನಿಸಿದರು.

‘ಜೆಡಿಎಸ್ ಪಕ್ಷದ ಕುಡಿಯೇ ಎರಡು ಸಲ ಮುಖ್ಯಮಂತ್ರಿ ಆಗಿರುವುದನ್ನು ಕಾಂಗ್ರೆಸ್‌ನವರು ಮರೆಯಬಾರದು. ಇನ್ನು ನಮ್ಮ ಪಕ್ಷದ ಕಾರ್ಯಕರ್ತರಲ್ಲಿ ಯಾವುದೇ ರೀತಿಯ ಗೊಂದಲ ಇಲ್ಲ. ವರಿಷ್ಠರ ನಿರ್ಧಾರವನ್ನು ಎಲ್ಲ ಕಾರ್ಯಕರ್ತರು ಚಾಚೂ ತಪ್ಪದೇ ಪಾಲಿಸುತ್ತೇವೆ. ಬಿಜೆಪಿಯೊಂದಿಗೆ ಮೈತ್ರಿಯಂತೆ ಜಂಟಿಯಾಗಿಯೇ ಪ್ರಚಾರ ಮಾಡುತ್ತೇವೆ’ ಎಂದು ಹೇಳಿದರು.

‘ವೈದ್ಯಕೀಯ ಶಿಕ್ಷಣ ಸಚಿವರ ತವರು ಜಿಲ್ಲೆಯ ಜಿಮ್ಸ್‌ ಆಸ್ಪತ್ರೆಯಲ್ಲಿಯೇ ಎ.ಸಿ ಕೆಟ್ಟುಹೋಗಿ ರೋಗಿಗಳೇ ಮನೆಯಿಂದ ಫ್ಯಾನ್‌ ತಂದು ಆರೈಕೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಇದೆ. ಸರ್ಕಾರ ಕೂಡಲೇ ಜಿಮ್ಸ್‌ ನಿರ್ದೇಶಕರನ್ನು ಅಮಾನತು ಮಾಡಬೇಕು’ ಎಂದು ಆಗ್ರಹಿಸಿದರು.

‘ಜಿಲ್ಲೆಯಲ್ಲಿ ಹಗಲು ರಾತ್ರಿ ಎನ್ನದೆ ಮರಳು ಅಕ್ರಮ ಸಾಗಣೆ ನಡೆಯುತ್ತಿದೆ. ನೀತಿ ಸಂಹಿತೆ ಇದ್ದರೂ ರಾಯಲ್ಟಿ ಇಲ್ಲದೇ ರಾಜಾರೋಷವಾಗಿ ವಾಹನಗಳಲ್ಲಿ ಮರಳು ಸಾಗಣೆ ಆಗುತ್ತಿದೆ. ರಸ್ತೆಗಳು ಹದಗೆಟ್ಟಿವೆ. ಅಭಿವೃದ್ಧಿ ಶೂನ್ಯವಾಗಿದೆ’ ಎಂದು ಟೀಕಿಸಿದರು.

‘ಸೇಡಂ ತಾಲ್ಲೂಕಿನ ಶ್ರೀ ಸಿಮೆಂಟ್‌ ಕಂಪನಿ ಎದುರು ರೈತರು ಭೂ ಪರಿಹಾರಕ್ಕಾಗಿ ಒಂದೂವರೆ ವರ್ಷದಿಂದ ಧರಣಿ ನಡೆಸುತ್ತಿದ್ದಾರೆ. ಜಿಲ್ಲಾಡಳಿತ ಹಾಗೂ ಸಚಿವರು ರೈತರ ಸಮಸ್ಯೆಗೆ ಕಿವಿಗೊಡುತ್ತಿಲ್ಲ. ಇನ್ನು ಕಂಪನಿಯಿಂದ 430 ಎಕರೆ ಕಾಯ್ದಿಟ್ಟ ಅರಣ್ಯ ಪ್ರದೇಶ ಒತ್ತುವರಿಯಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಆಗ್ರಹಿಸಿದರು.

ಜೆಡಿಎಸ್ ಮುಖಂಡರಾದ ರಾಜು ಬಡದಾಳ, ಪ್ರವಿಣ ಜಾಧವ, ಮಲ್ಲಿಕಾರ್ಜುನ ಸಂಗಾಣಿ, ಬೈಲಪ್ಪ ಪಟ್ಟೇದಾರ, ಸಾಗರ ರಾಠೋಡ, ಮಾರುತಿ ಹಾಜರಿದ್ದರು.

‘ಪತ್ರ ಬರೆದರಷ್ಟೇ ಸಾಲದು; ಒತ್ತಡ ಹೇರಿ’

‘ಭೀಮಾ ನದಿಗೆ ಉಜನಿ ಜಲಾಶಯ ಅಥವಾ ಆಲಮಟ್ಟಿ ಅಣೆಕಟ್ಟೆಯಿಂದ ನೀರು ಹರಿಸುವಂತೆ ಆಗ್ರಹಿಸಿ ಜೆಡಿಎಸ್ ಪಕ್ಷದ ರಾಜ್ಯ ಪ್ರದಾನ ಕಾರ್ಯದರ್ಶಿ ಶಿವಕುಮಾರ ನಾಟಿಕಾರ ಅವರು ಅಫಜಲಪುರ ಪಟ್ಟಣದಲ್ಲಿ 8 ದಿನಗಳಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಸ್ವಾಮೀಜಿಗಳು ಗಣ್ಯರು ಸತ್ಯಾಗ್ರಹ ಸ್ಥಳಕ್ಕೆ ಬಂದು ಬೆಂಬಲ ಸೂಚಿಸುತ್ತಿದ್ದಾರೆ. ನಾಟಿಕಾರ ಅವರ ಆರೋಗ್ಯ ಹದಗೆಟ್ಟರೂ ಸಚಿವರಾಗಲಿ ಡಿ.ಸಿ.ಯವರಾಗಲಿ ಭೇಟಿ ನೀಡಿಲ್ಲ. ಸಿಎಂ ಅವರು ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆದರಷ್ಟೇ ಸಾಲದು; ಒತ್ತಡ ಹೇರಿ ನೀರು ಬಿಡಿಸಬೇಕು’ ಎಂದು ಬಾಲರಾಜ್‌ ಗುತ್ತೇದಾರ ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.