ADVERTISEMENT

ಕಾಂಗ್ರೆಸ್‌ಗೆ ವಿರೋಧ ಪಕ್ಷದ ಸ್ಥಾನಮಾನವೂ ಸಿಗಲ್ಲ: ಪ್ರಲ್ಹಾದ ಜೋಶಿ

ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ ಪರ ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 23 ಮೇ 2024, 15:41 IST
Last Updated 23 ಮೇ 2024, 15:41 IST
<div class="paragraphs"><p>ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಅಂಗವಾಗಿ ಕಲಬುರಗಿಯ ಎನ್‌.ವಿ. ಸೊಸೈಟಿಯ ಸಂಗಮೇಶ್ವರ ಸಭಾಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಿಜೆಪಿಯ ಪ್ರಚಾರ ಸಭೆಯನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಿದರು.  </p></div>

ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ ಅಂಗವಾಗಿ ಕಲಬುರಗಿಯ ಎನ್‌.ವಿ. ಸೊಸೈಟಿಯ ಸಂಗಮೇಶ್ವರ ಸಭಾಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಿಜೆಪಿಯ ಪ್ರಚಾರ ಸಭೆಯನ್ನು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಉದ್ಘಾಟಿಸಿದರು.

   

ಕಲಬುರಗಿ: ‘ಕಾಂಗ್ರೆಸ್‌ ಪಕ್ಷಕ್ಕೆ ಇತಿಶ್ರೀ ಹಾಡಲು ದೇಶದ ಸಾಮಾನ್ಯ ಮತದಾರರರು ತೀರ್ಮಾನಿಸಿದ್ದು, ಕಾಂಗ್ರೆಸ್‌ ಸತತ 3ನೇ ಸಲವೂ ಅಧಿಕೃತ ವಿರೋಧ ಪಕ್ಷವೂ ಆಗುವುದಿಲ್ಲ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವ್ಯಂಗ್ಯವಾಡಿದರು.

ನಗರದ ನೂತನ ವಿದ್ಯಾಲಯದ ಸಂಗಮೇಶ್ವರ ಸಭಾಭವನದಲ್ಲಿ ವಿಧಾನ ಪರಿಷತ್‌ ಈಶಾನ್ಯ ಪದವೀಧರರ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ ಪರ ಗುರುವಾರ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ADVERTISEMENT

‘ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷದ ಸ್ಥಾನಮಾನ ಪಡೆಯಲು ಕನಿಷ್ಠ 54 ಸೀಟುಗಳನ್ನು ಗೆಲ್ಲಬೇಕಾಗುತ್ತದೆ. ಕಾಂಗ್ರೆಸ್‌ಗೆ ಅಷ್ಟು ಸೀಟು ಬರುವುದು ಅನುಮಾನ. ಆದರೆ, ಕೇಂದ್ರದಲ್ಲಿ ಬಿಜೆಪಿ 370 ಸ್ಥಾನಗಳನ್ನು ಗೆಲ್ಲಲಿದ್ದು, ಸತತ ಮೂರನೇ ಬಾರಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ರಚಿಸಲಿದೆ. ಕರ್ನಾಟಕದಲ್ಲಿ ಬಿಜೆಪಿ–ಜೆಡಿಎಸ್‌ ಮೈತ್ರಿಕೂಟ ಕನಿಷ್ಠ 24 ಸ್ಥಾನಗಳನ್ನು ಗೆಲ್ಲಲಿದೆ’ ಎಂದು ವಿಶ್ವಾಸವ್ಯಕ್ತಪಡಿಸಿದರು.

ವಿದ್ಯಾವಂತರಾದ ಪದವೀಧರರ ಮತದಾರು ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿ ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿಯ ಅಮರನಾಥ ಪಾಟೀಲ ಅವರಿಗೆ ಮೊದಲ ಪಾಶಸ್ತ್ಯದ ಮತ ನೀಡಬೇಕು.
ಪ್ರಲ್ಹಾದ ಜೋಶಿ, ಕೇಂದ್ರ ಸಚಿವ

‘ಈ ದೇಶದಲ್ಲಿ ಹಿಂದೂಗಳು ಬಹುಸಂಖ್ಯಾತರೆಂಬ ಕಾರಣಕ್ಕೆ ಈ ದೇಶದಲ್ಲಿ ಜಾತ್ಯತೀತತೆ ಎಂಬುದು ಉಳಿದಿದೆ’ ಎಂದ ಜೋಶಿ ಪ್ರತಿಪಾದಿಸಿದರು.

‘ರಾಜ್ಯದಲ್ಲಿ ಗ್ಯಾರಂಟಿಗಳ ಹೊಡೆತದಲ್ಲಿ ರಾಜ್ಯದ ಜನರ ಜೀವಕ್ಕೇ ಗ್ಯಾರಂಟಿ ಇಲ್ಲದಂತಾಗಿದೆ. ಕಳೆದೊಂದು ವರ್ಷದಲ್ಲಿ ಒಂದು ಕಿಲೊ ಮೀಟರ್‌ ಕೂಡ ರಸ್ತೆ ಮಾಡಿಲ್ಲ. ಆಸ್ಪತ್ರೆಯಲ್ಲಿ ಔಷಧಗಳಿಲ್ಲ, ಡೀಸೆಲ್‌ ಇಲ್ಲದೇ ಬಸ್‌ಗಳು ರಸ್ತೆಯಲ್ಲಿ ನಿಲ್ಲುವಂತಾಗಿವೆ. ರಸ್ತೆ ಗುಂಡಿ ಮುಚ್ಚಲೂ ಕೂಡ ದುಡ್ಡಿಲ್ಲದ ದರಿದ್ರ ಸರ್ಕಾರ’ ಎಂದು ಟೀಕಿಸಿದರು.

‘ಸುಳ್ಳು, ಭ್ರಷ್ಟಾಚಾರ, ತುಷ್ಟೀಕರಣದ ಪರಾಕಾಷ್ಠೆಯ ಫಲವಾಗಿ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ನಾಲ್ಕು ತಿಂಗಳಲ್ಲಿ 438 ಕೊಲೆಗಳಾಗಿವೆ, 698 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೀಗಾಗಿ ಹತ್ಯೆ–ಆತ್ಮಹತ್ಯೆ ಹಾಗೂ ಅಭಿವೃದ್ಧಿ ಸಮಾಧಿಯು ರಾಜ್ಯ ಕಾಂಗ್ರೆಸ್‌ ಸರ್ಕಾರದ ಒಂದು ವರ್ಷದ ಸಾಧನೆಯಾಗಿದೆ’ ಎಂದು ವ್ಯಂಗ್ಯವಾಡಿದರು.

ಇದಕ್ಕೂ ಮುನ್ನ ಬಿಜೆಪಿ ಮುಖಂಡ ಸುರೇಶ ಸಜ್ಜನ, ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ ಮಾತನಾಡಿದರು. ನೂತನ ವಿದ್ಯಾಲಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಭಿಜಿತ್‌ ದೇಶಮುಖ ಸ್ವಾಗತಿಸಿದರು. ಗೌತಮ ಜಹಾಗಿರದಾರ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಸಕ ಬಸವರಾಜ ಮತ್ತಿಮಡು, ಕೆಕೆಆರ್‌ಡಿಬಿ ಮಾಜಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ, ಸುರೇಶ ಚೌಹಾಣ, ಬಾಬುರಾವ ಚೌಹಾಣ, ಸುಭಾಷ ಪಾಟೀಲ, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಜಿಲ್ಲಾ ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ರವೀಂದ್ರ ಟೆಂಗಳಿ, ಗಿರೀಶ ಗಲಗಲಿ ಸೇರಿದಂತೆ ಹಲವರು ವೇದಿಕೆಯಲ್ಲಿದ್ದರು.

ಕಲಬುರಗಿಯ ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನ ಸ್ಯಾಕ್‌ ಸಭಾಗಣದಲ್ಲಿ ಗುರುವಾರ ಬಿಜೆಪಿಯ ಪ್ರಚಾರ ಸಭೆಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮಾತನಾಡಿದರು –ಪ್ರಜಾವಾಣಿ ಚಿತ್ರ

‘ರಾಜಕೀಯವಾಗಿ ಕಾಂಗ್ರೆಸ್‌ ಮುಗಿಸಬೇಕಿದೆ’

‘ದೇಶದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಎಷ್ಟು ಬೇಗ ರಾಜಕೀಯವಾಗಿ ಮುಗಿಸುತ್ತೇವೆಯೋ ಅಷ್ಟು ದೇಶಕ್ಕೆ ಒಳ್ಳೆಯದಾಗುತ್ತದೆ. ಕಾಂಗ್ರೆಸ್‌ನವರು ದೇಶಕ್ಕೆ ಬಹಳ ಅನ್ಯಾಯ ಮಾಡಿದ್ದಾರೆ. ಇಲ್ಲದಿದ್ದರೆ ಭಾರತ ಎಂದೋ ಜಗತ್ತಿನ ಅತಿದೊಡ್ಡ ಶಕ್ತಿಯಾಗುತ್ತಿತ್ತು’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದರು. ನಗರದ ಪಿಡಿಎ ಎಂಜಿನಿಯರಿಂಗ್‌ ಕಾಲೇಜಿನ ಸ್ಯಾಕ್‌ ಸಭಾಂಗಣದಲ್ಲಿ ಅಮರನಾಥ ಪಾಟೀಲ ಪರ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು. ‘1952ರಿಂದ ಯುಪಿಎ ಅವಧಿಯ ತನಕ ಕಾಂಗ್ರೆಸ್‌ ಭ್ರಷ್ಟಾಚಾರದಲ್ಲೇ ಮುಳುಗಿತ್ತು. ಆ ಕುರಿತು ನಾವು ಹೊರಡಿಸಿದ ಶ್ವೇತ ಪತ್ರದಲ್ಲಿ ಪ್ರಸ್ತಾಪಿಸಿದ್ದೇವು. ಆದರೂ ಕಾಂಗ್ರೆಸ್‌ನ ಯಾರೊಬ್ಬರೂ ಕನಿಷ್ಠ ಅದನ್ನು ಅಲ್ಲಗಳೆಯುವ ಕೆಲಸ ಮಾಡಿಲ್ಲ. ಕಾಂಗ್ರೆಸ್‌ ಪಕ್ಷ ಭೂತಕಾಲದ ಪಕ್ಷವಾಗುವ ನಿಟ್ಟಿನಲ್ಲಿ ದಾಪುಗಾಲಿಟ್ಟಿದೆ’ ಎಂದರು. ವಿಧಾನ ಪರಿಷತ್‌ ಸದಸ್ಯರೂ ಆಗಿರುವ ಎಚ್‌ಕೆಇ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಶೀಲ್‌ ನಮೋಶಿ ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ ಮಾತನಾಡಿದರು.

‘ಸರ್ಕಾರ ಶ್ವೇತಪತ್ರ ಹೊರಡಿಸಲಿ’

‘371(ಜೆ) ಜಾರಿಯ ಹೊರತಾಗಿಯೂ ಕಲ್ಯಾಣ ಕರ್ನಾಟಕದ ಏಳೂ ಜಿಲ್ಲೆಗಳ ಸಾಮಾಜಿಕ ಆರ್ಥಿಕ ಹಾಗೂ ಔದ್ಯೋಗಿಕವಾಗಿ ಹಿಂದುಳಿದೆ. ಇಲ್ಲಿನ ಸ್ಥಿತಿಗತಿಯ ಕುರಿತು ರಾಜ್ಯ ಸರ್ಕಾರ ಅಧ್ಯಯನ ನಡೆಸುವ ಅಗತ್ಯವಿದೆ’ ಎಂದು ಈಶಾನ್ಯ ಪದವೀಧರ ಕ್ಷೇತ್ರದ ಬಿಜೆಪಿ ಉಸ್ತುವಾರಿಯೂ ಆಗಿರುವ ವಿಧಾನ ಪರಿಷತ್ ಸದಸ್ಯ ಎನ್‌.ರವಿಕುಮಾರ್‌ ಅಭಿಪ್ರಾಯಪಟ್ಟರು. ನಗರದ ನೂತನ ವಿದ್ಯಾಲಯದ ಸಂಗಮೇಶ್ವರ ಸಭಾಭವನದಲ್ಲಿ ಅವರು ಮಾತನಾಡಿದರು. ‘371(ಜೆ) ಜಾರಿಯಾದ ಬಳಿಕ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಶಿಕ್ಷಣ ಹಾಗೂ ಉದ್ಯೋಗದ ಬೇಡಿಕೆ ಈಡೇರಿದೆಯೇ ಎಂಬುದರ ಕುರಿತು ರಾಜ್ಯ ಸರ್ಕಾರವು ಶ್ವೇತ ಪತ್ರ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.