ಅಫಜಲಪುರ: ‘ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿ ಜಾರಿಗೆ ತರುತ್ತೇವೆ ಎನ್ನುವುದು ಕಾಂಗ್ರೆಸ್ ಸರ್ಕಾರದ ನೀತಿ ಸರಿಯಲ್ಲ. ಒಂದು ವೇಳೆ ಸದಾಶಿವ ಆಯೋಗ ಜಾರಿಗೊಳಿಸಿದರೆ ಬಂಜಾರ್ ಸಮಾಜ ಮುಂಬರುವ ಚುನಾವಣೆಗಳಲ್ಲಿ ಕಾಂಗ್ರೆಸ್‌ಗೆ ತಕ್ಕ ಪಾಠ ಕಲಿಸುತ್ತದೆ’ ಎಂದು ಆಖಿಲ ಭಾರತ ಬಂಜಾರ ಸೇವಾ ಸಮೀತಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಸಚಿವ ಬಾಬುರಾವ ಚವ್ಹಾಣ ಹೇಳಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,‘ಸದಾಶಿವ ಆಯೋಗದ ವರದಿಯಿಂದ ಬಂಜಾರ, ಭೋವಿ, ಕೊರಚ, ಕೊರಮ ಸೇರಿ ವಿವಿಧ ಸಮುದಾಯಗಳಿಗೆ ಮರಣ ಶಾಸನ ಬರೆದಂತೆ ಆಗಲಿದೆ. ಸಚಿವ ಮುನಿಯಪ್ಪ ಅವರೆ ಖುದ್ಧಾಗಿ ಸದಾಶಿವ ಆಯೋಗ ವರದಿಯನ್ನು ಅನುಷ್ಠಾನಗೊಳಿಸಲು ಸಚಿವರು ಪ್ರತಿಭಟನೆ ಮಾಡಲು ಕುಮ್ಮಕ್ಕು ನೀಡುವುದು, ಸಂವಿಧಾನ ವಿರೋಧಿ ಚಟುವಟಿಕೆ. ಸರ್ಕಾರದಲ್ಲಿ ಜವಾಬ್ದಾರಿಯುತ ಸ್ತಾನದಲ್ಲಿದ್ದು ಇಂತಹ ಹೇಳಿಕೆ ನೀಡುವುದು ಸರಿಯಲ್ಲ’ ಎಂದರು.
‘ಸಮುದಾಯದ ಜನರಿಗೆ ಜಾಗೃತಿ ಮೂಡಿಸಲು ಮುಂದಿನ ದಿನಗಳಲ್ಲಿ ಪ್ರತಿ ತಾಲ್ಲೂಕು ಮಟ್ಟದಲ್ಲಿ ಬಂಜಾರ ಸೇವಾ ಸಮಿತಿ ರಚಿಸಲಾಗುವುದು. ಸರ್ಕಾರ ಈಗಾಗಲೇ ಕಂದಾಯ ಗ್ರಾಮಗಳಾಗಿ ಘೋಷಣೆ ಮಾಡಿವೆ. ಅವುಗಳಿಗೆ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕು’ ಎಂದರು.
‘ಆಯೋಗದ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಇಲ್ಲಿಯವರೆಗೂ ಮಾತನಾಡದೆ ಇರುವುದು ಬೇಸರ ಮೂಡಿಸಿದೆ ಎಂದು ಹೇಳಿದರು.
ಪ್ರಶಾಂತ್ ರಾಠೋಡ್, ಸಂಜೀವ ರಾಠೋಡ್, ಯಾಕೂಬ್ ತಾಂಬೋಳಿ ಪತ್ರಿಕಾಗೋಷ್ಠಿಯಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.