ADVERTISEMENT

ಯಾರಿಂದಲೂ ಸಂವಿಧಾನ ಬದಲಿಸಲು ಸಾಧ್ಯವಿಲ್ಲ: ಬಿ.ಆರ್‌.ಪಾಟೀಲ

ಸಂವಿಧಾನ ದಿನಾಚರಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2024, 15:52 IST
Last Updated 26 ನವೆಂಬರ್ 2024, 15:52 IST
ಸಂವಿಧಾನ ದಿನದ ಪ್ರಯುಕ್ತ ನಡೆದ ಮೆರವಣಿಗೆಗೆ ಗಣ್ಯರು ಹಸಿರು ನಿಶಾನೆ ತೋರಿಸಿದರು
ಸಂವಿಧಾನ ದಿನದ ಪ್ರಯುಕ್ತ ನಡೆದ ಮೆರವಣಿಗೆಗೆ ಗಣ್ಯರು ಹಸಿರು ನಿಶಾನೆ ತೋರಿಸಿದರು   

ಕಲಬುರಗಿ: ‘ಸಂವಿಧಾನವನ್ನು ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ’ ಎಂದು ಮುಖ್ಯಮಂತ್ರಿ ಸಲಹೆಗಾರ ಬಿ.ಆರ್‌.ಪಾಟೀಲ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಮಹಾನಗರ ಪಾಲಿಕೆ, ಸಮಾಜ ಕಲ್ಯಾಣ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ನಗರದ ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಆಡಳಿತ ಮಾಡಲು ಸಂವಿಧಾನ ಬೇಕಾಗಿತ್ತು. ಬಾಬಾ ಸಾಹೇಬರು ಎಲ್ಲ ದೇಶಗಳನ್ನು ಸುತ್ತಿ ಸಂವಿಧಾನಗಳನ್ನು ಓದಿ ಅರ್ಥ ಮಾಡಿಕೊಂಡು ಬಲಿಷ್ಠವಾದ ಸಂವಿಧಾನ ರಚಿಸಿದ್ದಾರೆ’ ಎಂದರು. 

ADVERTISEMENT

‘ಸಂವಿಧಾನವೇ ನಮ್ಮ ಧರ್ಮಗ್ರಂಥ. ಸಂವಿಧಾನವನ್ನು ನಮಗೆ ನಾವೇ ಸಮರ್ಪಿಸಿಕೊಂಡಿದ್ದೇವೆ. ಸಂವಿಧಾನದಿಂದ ನಾವು ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಪಡೆದುಕೊಳ್ಳಬಹುದು’ ಎಂದು ಹೇಳಿದರು. 

‘ನ್ಯಾಯಾಂಗ ನಮ್ಮ ಸಂವಿಧಾನದ ರಕ್ಷಣೆ ಮಾಡುತ್ತಿದೆ. ನ್ಯಾಯಾಂಗ ಒಂದೇ ಈಗ ನಂಬಿಕೆ ಉಳಿಸಿಕೊಂಡಿದೆ. ಮೊದಲು ನ್ಯಾಯಮೂರ್ತಿಗಳ ಬಗ್ಗೆ ಯಾರೂ ಮಾತನಾಡುತ್ತಿರಲಿಲ್ಲ. ಈಗ ಎಲ್ಲರೂ ಮಾತನಾಡುತ್ತಿದ್ದಾರೆ’ ಎಂದು ಹೇಳಿದರು.

ಶಾಸಕ ಎಂ.ವೈ.ಪಾಟೀಲ ಮಾತನಾಡಿ, ‘ಅಂಬೇಡ್ಕರ್ ಅವರು ಎಲ್ಲರಿಗಾಗಿ ಸಂವಿಧಾನ ರಚಿಸಿದ್ದಾರೆ’ ಎಂದರು.

ಮೇಯರ್ ಯಲ್ಲಪ್ಪ ನಾಯಕೊಡಿ ಮಾತನಾಡಿ, ‘ಮಕ್ಕಳಿಗೆ ಪ್ರತಿದಿನ ಸಂವಿಧಾನ ಬೋಧಿಸಬೇಕು. ಸಂವಿಧಾನವನ್ನು ನಾವು ಭದ್ರವಾಗಿ ಕಾಪಾಡಿಕೊಂಡು ಹೋಗಬೇಕು’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ತಿಪ್ಪಣಪ್ಪ ಕಮಕನೂರ ಮಾತನಾಡಿ, ‘ಭಾರತ ದೇಶ ಎಂದರೆ ಸಂವಿಧಾನ’ ಎಂದರು.

ಪ್ರಾಧ್ಯಾಪಕ ವಿಜಯಕುಮಾರ ಎಚ್.ಸಾಲಿಮನಿ ವಿಶೇಷ ಉಪನ್ಯಾಸ ನೀಡಿ, ‘ಬಾಬಾ ಸಾಹೇಬರು ಸಂವಿಧಾನದಲ್ಲಿ ಬರೆದಿರುವ ಒಂದೊಂದು ಅಕ್ಷರದಲ್ಲಿಯೂ ಅವರ ಆತ್ಮ ಅಡಗಿದೆ’ ಎಂದು ಹೇಳಿದರು.

ಇದೇ ವೇಳೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಶಿವಶರಣಪ್ಪ ಮುಳೆಗಾಂವ ಸಂವಿಧಾನದ ಪೀಠಿಕೆ ಬೋಧಿಸಿದರು.

ಸಂವಿಧಾನ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.

ಇದಕ್ಕೂ ಮೊದಲು ಜಗತ್ ವೃತ್ತದಿಂದ ಎಸ್.ಎಂ.ಪಂಡಿತ ರಂಗಮಂದಿರದವರೆಗೆ ಮೆರವಣಿಗೆ ನಡೆಯಿತು.

ಶಾಸಕ ಅಲ್ಲಮಪ್ರಭು ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಮಹಾನಗರ ಪಾಲಿಕೆ ಉಪ ಆಯುಕ್ತ ಅವಿನಾಶ ಶಿಂಧೆ, ಸಮಾಜ ಕಲ್ಯಾಣ ಇಲಾಖೆ ಹೆಚ್ಚುವರಿ ನಿರ್ದೇಶಕ ಎಂ.ಎಸ್.ಅಲ್ಲಾಬಕಾಷ್, ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಡಿ.ಜಿ.ಸಾಗರ, ಪಾಲಿಕೆ ಸ್ಥಾಯಿ ಸಮಿತಿ ಸದಸ್ಯ ಸಚಿನ್ ಶಿರವಾಳ ಸೇರಿದಂತೆ ಹಲವರು ಹಾಜರಿದ್ದರು.

ಕಲಬುರಗಿ ನಗರದ ಎಸ್‌.ಎಂ.ಪಂಡಿತ ರಂಗಮಂದಿರದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು
ಕಲಬುರಗಿ ಹೊರವಲಯದ ಕೇಂದ್ರ ಕಾರಾಗೃಹದಲ್ಲಿ ಸಂವಿಧಾನ ದಿನದ ಅಂಗವಾಗಿ ಪೀಠಿಕೆ ಬೋಧಿಸಲಾಯಿತು

ಕಾರಾಗೃಹದಲ್ಲಿ ಸಂವಿಧಾನ ದಿನ ಆಚರಣೆ

ಕಲಬುರಗಿ: ನಗರ ಹೊರವಲಯದ ಕೇಂದ್ರ ಕಾರಾಗೃಹದಲ್ಲಿ ಮಂಗಳವಾರ ಸಂವಿಧಾನ ದಿನ ಆಚರಿಸಲಾಯಿತು. ಕಾರಾಗೃಹದ ಮುಖ್ಯ ಅಧೀಕ್ಷಕಿ ಅನಿತಾ ಆರ್. ಅವರು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.

ಸಂವಿಧಾನದ ಪೀಠಿಕೆ ಬೋಧಿಸಲಾಯಿತು. ಪ್ರಭಾರ ಅಧೀಕ್ಷಕ ಬಿ.ಸುರೇಶ ಸಹಾಯಕ ಅಧೀಕ್ಷಕ ಚನ್ನಪ್ಪ ಸಹಾಯಕ ಆಡಳಿತಾಧಿಕಾರಿ ಭೀಮಾಶಂಕರ ಡಾಂಗೆ ಜೈಲರ್‌ಗಳಾದ ಸುನಂದ ವಿ. ಸಾಗರ ಶಿಕ್ಷಕ ನಾಗರಾಜ ಮುಲಗೆ ಹಾಗೂ ಸಿಬ್ಬಂದಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.