ಕಲಬುರಗಿ: ‘ಎಲ್ಲರಿಗೂ ಮನೆ, ವಿದ್ಯಾಭ್ಯಾಸ, ಕೆಲಸ, ಸಮಾಜವಾದ ನಿರ್ಮಾಣ ಭಗತ್ ಸಿಂಗ್ ಅವರ ಕನಸಾಗಿತ್ತು’ ಎಂದು ರಾಜ್ಯ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ ಗಿರೀಶ ತುಮಕೂರು ಹೇಳಿದರು.
ನಗರದ ಕನ್ನಡಭವನದಲ್ಲಿ ನಡೆದ ಕಟ್ಟಡ ಕಾರ್ಮಿಕರ ಕಲಬುರಗಿ ಜಿಲ್ಲೆಯ 4ನೇ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದಿನ ಸರ್ಕಾರಗಳು ಬಂಡವಾಳಶಾಹಿಗಳ ಪರ ಇವೆ. ಕಟ್ಟಡ ಕಾರ್ಮಿಕರಿಗೆ 19 ಸೌಲಭ್ಯಗಳು ಇವೆ. ಮಂಡಳಿಯಲ್ಲಿ 48 ಲಕ್ಷ ಜನ ನೋಂದಣಿಯಾಗಿದ್ದಾರೆ. ಇದರಲ್ಲಿ ಬಹುತೇಕರು ನಕಲಿ ಇದ್ದಾರೆ. ಇದರಿಂದಾಗಿ ಸೌಲಭ್ಯಗಳು ಅರ್ಹ ಕಾರ್ಮಿಕರಿಗೆ ಸಿಗುತ್ತಿಲ್ಲ. ಹೀಗಾಗಿ ನಕಲಿ ಕಾರ್ಮಿಕರನ್ನು ಅಧಿಕಾರಿಗಳು ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಕಲಬುರಗಿ ಪ‍್ರಾದೇಶಿಕ ಉಪಕಾರ್ಮಿಕ ಆಯುಕ್ತ ವೆಂಕಟೇಶ್ ಶಿಂಧಿಹಟ್ಟಿ ಮಾತನಾಡಿ, ‘ಎಐಟಿಯುಸಿ ಪ್ರಬುದ್ಧವಾಗಿ ನಡೆದುಕೊಳ್ಳುವ ಸಂಘಟನೆ, ಕಾರ್ಮಿಕರೇ ನಿಜವಾದ ಆಧಾರ ಸ್ತಂಭಗಳು. ಕಲ್ಯಾಣ ಕರ್ನಾಟಕದಲ್ಲಿ ಸುಮಾರು 15 ಲಕ್ಷ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕಾರ್ಮಿಕರಿದ್ದಾರೆ. ಕಲಬುರಗಿ ಜಿಲ್ಲೆಯಲ್ಲಿ 3.75 ಲಕ್ಷ ಕಾರ್ಮಿಕರಿದ್ದಾರೆ. 24 ಕಾರ್ಮಿಕ ಕಾನೂನುಗಳಿದ್ದು, ಎಲ್ಲವೂ ಸಂಘಟಿತ ಕಾರ್ಮಿಕರಿಗೆ ಸಂಬಂಧಿಸಿದವು ಎಂದು ಮಾಹಿತಿ ನೀಡಿದರು.
ಸಿಪಿಐ ಜಿಲ್ಲಾ ಕಾರ್ಯದರ್ಶಿ ಮಹೇಶಕುಮಾರ ರಾಠೋಡ ಮಾತನಾಡಿ, ‘ಸರ್ಕಾರಗಳು ಕಾರ್ಮಿಕರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿವೆ. ಮಂಡಳಿಯಲ್ಲಿ ಅಸಲಿ ಕಾರ್ಮಿಕರು ಇರಬೇಕು. ಆದರೆ ನಕಲಿಗಳೇ ಹೆಚ್ಚಾಗಿದ್ದಾರೆ. ಭಾರತೀಯ ಕಮ್ಯುನಿಸ್ಟ್ ಪಕ್ಷ ಕಾರ್ಮಿಕರಿಗೆ ಸದಾ ಬೆಂಬಲ ನೀಡುತ್ತದೆ. ಶಾಸನ ಸಭೆಗಳಲ್ಲಿ ಕಾರ್ಮಿಕರ ಧ್ವನಿ ಮೊಳಗಬೇಕು. ನಕಲಿ ಕಾರ್ಮಿಕರನ್ನು ಹೊರಹಾಕಬೇಕು. ಚಳವಳಿ ವಿಸ್ತಾರಗೊಳ್ಳಬೇಕು’ ಎಂದು ಹೇಳಿದರು.
ಸಂಘಟನೆಯ ರಾಜ್ಯ ಕಾರ್ಯದರ್ಶಿ, ಕಾರವಾರದಿಂದ ಆಗಮಿಸಿದ್ದ ಜಿ.ಎನ್.ರೇವಣಕರ್ ಮಾತನಾಡಿ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಕುಸಿಯುತ್ತಿವೆ. ವಿದ್ಯಾವಂತರ ವಲಸೆ ದೇಶಕ್ಕೆ ಮಾರಕವಾಗಿದೆ. ಹಲವಾರು ಸಂಸ್ಥೆಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಈ ಬಗ್ಗೆ ಚಿಂತನೆ ನಡೆಯಬೇಕು ಎಂದರು.
ಗುಲಬರ್ಗಾ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷ ನಾರಾಯಣ ರೂಗಿ, ಕಾರ್ಮಿಕ ಸಂಘಟನೆಗೆ ಶುಭ ಕೋರಿ ಎರಡು ದಿನಗಳ ಸಮ್ಮೇಳನ ಯಶಸ್ವಿಯಾಗಲಿ ಎಂದು ಹಾರೈಸಿದರು.
ಸಂಘದ ಕಾರ್ಯಾಧ್ಯಕ್ಷ ಪೀರಜಾದೆ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಎಐಟಿಯುಸಿ ಜಿಲ್ಲಾಧ್ಯಕ್ಷ ಎಚ್.ಎಚ್.ಪತಕಿ, ಕಾರ್ಯದರ್ಶಿ ಹಣಮಂತರಾಯ ಅಟ್ಟೂರ, ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ, ಪದ್ಮಾವತಿ ಎನ್. ಮಾಲಿಪಾಟೀಲ, ಸುಭಾಶ ಎನ್. ಬಳೂರ್ಗಿ, ಮಾನಪ್ಪಾ ಎಸ್. ಕಟ್ಟಿಮನಿ, ರವಿಕುಮಾರ್, ತಿಪ್ಪಣ್ಣ, ತಿಮ್ಮಣ್ಣ ಸೇರಿದಂತೆ ಹಲವರು ಇದ್ದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಜೇವರ್ಗಿ ಕ್ರಾಸ್‌ನಿಂದ ಕನ್ನಡ ಭವನದವರೆಗೆ ರ್‍ಯಾಲಿ ನಡೆಯಿತು. ನೂರಾರು ಸಂಖ್ಯೆಯಲ್ಲಿ ಕಟ್ಟಡ ಕಟ್ಟುವ ಮತ್ತು ಕಲ್ಲು ಒಡೆಯುವ ಕಾರ್ಮಿಕರು ಭಾಗಿಯಾಗಿದ್ದರು.
ದೇಶದಲ್ಲಿ ಕೂತು ಉಣ್ಣುವವರು ದುಡಿಯುವವರು ಎಂಬ ಎರಡು ರೀತಿಯ ಜನರಿದ್ದಾರೆ. ದುಡಿಯುವ ಕೈಗಳಿಗೆ ಅಧಿಕಾರ ಸಿಗಲಿ. ಮುಂದಿನ ದಿನಗಳಲ್ಲಿ 3 ವರ್ಷಕ್ಕೊಮ್ಮೆ ಸಮ್ಮೇಳನ ನಡೆಸಲಾಗುವುದು.- ಪ್ರಭುದೇವ ಯಳಸಂಗಿ, ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಕಲಬುರಗಿ
ಫಲಾನುಭವಿಗಳಿಗೆ ಆದೇಶ ಪತ್ರ ವಿತರಣೆ
ಕಾರ್ಯಕ್ರಮದಲ್ಲಿ ಮಂಡಳಿಯ ಫಲಾನುಭವಿಗಳಿಗೆ ಪರಿಹಾರ ಹಣದ ಮಂಜೂರಾತಿ ಆದೇಶ ಪತ್ರ ನೀಡಲಾಯಿತು. ಪತಿಯನ್ನು ಕಳೆದುಕೊಂಡ ಕಸ್ತೂರಿಬಾಯಿ ಮತ್ತು ಸವಿತಾ ಎಂಬುವವರಿಗೆ ತಲಾ ₹75000 ಪ್ರೀತಿ ಎಂಬುವವರ ಹೆರಿಗೆಗಾಗಿ ₹20000 ಹಣಮಂತ ಹಿತ್ತಲಶಿರೂರ ಮತ್ತು ಭೀಮರಾಯ ಆನೂರ ಅವರಿಗೆ ತಲಾ ₹50000 ಮದುವೆ ಧನಸಹಾಯ ಮಂಜೂರಾತಿ ಆದೇಶ ಪತ್ರ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.