ಚಿಂಚೋಳಿ: ಪುರಸಭೆ ವ್ಯಾಪ್ತಿಯ ಚಂದಾಪುರದ ಗಾಂಧಿಚೌಕ ಬಳಿ ಗ್ರಂಥಾಲಯ ಕಟ್ಟಡ ನಿರ್ಮಿಸಲಾಗಿದೆ. ವಿಪರ್ಯಾಸವೆಂದರೆ ಇಲ್ಲಿ ಗ್ರಂಥಾಲಯವೇ ಇಲ್ಲ. ಆದರೆ ಕಟ್ಟಡದ ಮೇಲೆ ಸಾರ್ವಜನಿಕ ಗ್ರಂಥಾಲಯ ಇಲಾಖೆ, ಜಿಲ್ಲಾ ಕೇಂದ್ರ ಗ್ರಂಥಾಲಯ ಶಾಖೆ ಚಿಂಚೋಳಿ ಎಂದು ಬೋರ್ಡ್ ಬರೆಯಲಾಗಿದೆ.
ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಒಂದು ಗ್ರಂಥಾಲಯ ಚಿಂಚೋಳಿ ಪಟ್ಟಣದಲ್ಲಿದೆ. ಇಲ್ಲಿ 2 ವರ್ಷದ ಹಿಂದಷ್ಟೆ ಹೊಸ ಕಟ್ಟಡ ನಿರ್ಮಿಸಲಾಗಿದೆ. ಆದರೆ ಇಲ್ಲಿ ಗ್ರಂಥಾಲಯವಿಲ್ಲದಿದ್ದರೂ ಕಟ್ಟಡ ನಿರ್ಮಿಸಿದ್ದು ಕಂಡು ಸಾರ್ವಜನಿಕರು ಹುಬ್ಬೇರಿಸುವಂತಾಗಿದೆ.
ಕೆಕೆಆರ್‌ಡಿಬಿ 2021-22ನೇ ಸಾಲಿನ ಅನುದಾನದಲ್ಲಿ ಅಂದಾಜು ₹32 ಲಕ್ಷ ವೆಚ್ಚದಲ್ಲಿ ಐದು ಕೋಣೆಗಳ ಗ್ರಂಥಾಲಯ ಕಟ್ಟಡ ನಿರ್ಮಿಸಲಾಗಿದೆ. ಆದರೆ ಈಗ ಕಟ್ಟಡ ಬಳಕೆಯಿಲ್ಲದೇ ಅನಾಥವಾಗಿದೆ.
ಚಿಂಚೋಳಿ ಚಂದಾಪುರ ಅವಳಿ ಪಟ್ಟಣಗಳು ಸೇರಿಸಿ ಪುರಸಭೆ ಸೃಜಿಸಲಾಗಿದ್ದು, ಚಂದಾಪುರದಲ್ಲಿ ಪೊಲೀಸ್ ಠಾಣೆ, ಬಸ್ ನಿಲ್ದಾಣ ಮತ್ತು ನ್ಯಾಯಾಲಯ ಹೊರತುಪಡಿಸಿದರೆ ಬಹುತೇಕ ಎಲ್ಲಾ ಸರ್ಕಾರಿ ಕಚೇರಿಗಳು, ಅಧಿಕಾರಿಗಳ ಮತ್ತು ಸಿಬ್ಬಂದಿಗಳ ವಸತಿಗೃಹಗಳು ಹಾಗೂ ಸಾರ್ವಜನಿಕರ ಸಾವಿರಾರು ಮನೆಗಳಿವೆ. ಇಲ್ಲಿ ಸುಮಾರು 10ಸಾವಿರಕ್ಕೂ ಹೆಚ್ಚು ಜನಸಂಖ್ಯೆಯಿದೆ. ಪ್ರಯುಕ್ತ ಇಲ್ಲಿ ಗ್ರಂಥಾಲಯದ ಅಗತ್ಯವಿದೆ. ಆದರೆ ಈ ಕಟ್ಟಡ ಗ್ರಂಥಾಲಯ ಇಲಾಖೆಯ ನಿಯಮದಂತೆ ನಿರ್ಮಾಣಗೊಂಡಿಲ್ಲ ಎಂಬ ಮಾತು ಕೇಳಿ ಬಂದಿದೆ.
ಚಿಂಚೋಳಿಯಲ್ಲಿ ಒಂದು ಗ್ರಂಥಾಲಯ ಶಾಖೆಯಿದ್ದು ಅದು ಓದುಗರಿಲ್ಲದೇ ಭಣಗುಡುತ್ತಿದೆ. ಅದನ್ನು ಚಂದಾಪುರಕ್ಕೆ ಸ್ಥಳಾಂತರಿಸಿದರೆ ಓದುಗರು ಸಿಗಬಹುದು ಇಲ್ಲವೇ ಹೊಸದಾಗಿ ಇಲ್ಲಿ ಗ್ರಂಥಾಲಯ ಮಂಜೂರು ಮಾಡಿಸಿ ಜನರಿಗೆ ಕಟ್ಟಡ ಉಪಯೋಗವಾಗುವಂತೆ ಮಾಡಬೇಕು. ಇಲ್ಲವಾದರೆ ಈ ಭಾಗದ ಅಭಿವೃದ್ಧಿಗೆ ವರವಾದ ಕೆಕೆಡಿಬಿಯ ಅನುದಾನವೂ ವ್ಯರ್ಥವಾದಂತಾಗಲಿದೆ.
ಇದು ಪುರಸಭೆಯ ಎಡವಟ್ಟೋ ಅಥವಾ ಕೆಕೆಆರ್‌ಡಿಬಿಯ ಯಡವಟ್ಟೋ ಗೊತ್ತಿಲ್ಲ. ಆದರೆ ಸಂಬಂಧಪಟ್ಟವರು ಈ ಕಟ್ಟಡ ಸಾರ್ವಜನರಿಕರಿಗೆ ಬಳಕೆಯಾಗುವಂತೆ ಮಾಡಲು ಅಗತ್ಯ ಕ್ರಮಕೈಗೊಳ್ಳಬೇಕು. ಕಟ್ಟಡಕ್ಕೆ ಬಳಿದ ಬಣ್ಣ ಕಿತ್ತಿ ಹೋಗುತ್ತಿದ್ದು ಒಂದೇ ಮಳೆಗಾಲಕ್ಕೆ ಇದರ ಸ್ಥಿತಿ ಹೀಗಾದರೆ ಮುಂದೆ ಹೇಗೆ ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.
ಚಂದಾಪುರದಲ್ಲಿ ಗ್ರಂಥಾಲಯ ಕಟ್ಟಡ ನಿರ್ಮಾಣಗೊಂಡಿರುವುದು ನನ್ನ ಗಮನಕ್ಕೆ ಬಂದಿದೆ ಆದರೆ ಇಲ್ಲಿ ಗ್ರಂಥಾಲಯವಿಲ್ಲದಿರುವ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ ಖರ್ಗೆ ಅವರ ಗಮನಕ್ಕೆ ತಂದು ಗ್ರಂಥಾಲಯ ಮಂಜೂರಾತಿಗೆ ಪ್ರಯತ್ನಿಸುವೆಆನಂದ ಟೈಗರ್ ಚಿಂಚೋಳಿ ಪುರಸಭೆ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.