ADVERTISEMENT

ಕಲಬುರಗಿ | ಫಿಫಾ ಮನ್ನಣೆಯ ಫುಟ್‌ಬಾಲ್‌ ಅಂಗಣ ನಿರ್ಮಾಣ

ಮಲ್ಲಪ್ಪ ಪಾರೇಗಾಂವ
Published 6 ನವೆಂಬರ್ 2023, 5:46 IST
Last Updated 6 ನವೆಂಬರ್ 2023, 5:46 IST
<div class="paragraphs"><p>ಫಿಫಾ ಪರೀಕ್ಷಿತ ಕೃತಕ ಹುಲ್ಲು ಹಾಸನ್ನು ಅಳವಡಿಸುತ್ತಿರುವುದು</p></div>

ಫಿಫಾ ಪರೀಕ್ಷಿತ ಕೃತಕ ಹುಲ್ಲು ಹಾಸನ್ನು ಅಳವಡಿಸುತ್ತಿರುವುದು

   

ಕಲಬುರಗಿ: ಫಿಫಾದಿಂದ ಮಾನ್ಯತೆ ಪಡೆದ ಸಿಂಥೆಟಿಕ್‌ ಟರ್ಫ್‌ ಫುಟ್‌ಬಾಲ್‌ ಅಂಗಣ ನಗರದಲ್ಲಿ ನಿರ್ಮಾಣವಾಗಿದ್ದು, ಜಿಲ್ಲೆಯ ಫುಟ್‌ಬಾಲ್‌ ಪ್ರಿಯರಲ್ಲಿ ಸಂತಸ ಮನೆಮಾಡಿದೆ. ಇದು ಪ್ರತಿಭೆಗಳಿಗೆ ಉತ್ತೇಜನ ನೀಡಲಿದೆ.

ಇದು ರಾಜ್ಯದ ಮೂರನೇ ಫುಟ್‌ಬಾಲ್‌ ಅಂಗಣವಾಗಿದ್ದು, ಒಂದು ಬೆಂಗಳೂರು ಹಾಗೂ ಇನ್ನೊಂದು ಬಳ್ಳಾರಿಯಲ್ಲಿ ಇವೆ.

ADVERTISEMENT

ನಗರದ ವೀರೇಂದ್ರ ಪಾಟೀಲ ಬಡಾವಣೆಯಲ್ಲಿ ಸುಮಾರು ₹ 3 ಕೋಟಿ ವೆಚ್ಚದ ಫುಟ್‌ಬಾಲ್‌ ಅಂಗಣ ನಿರ್ಮಾಣ ಕಾಮಗಾರಿ ಮುಗಿದಿದೆ. ಸದ್ಯ ಅಂಗಣ ನಿರ್ಮಾಣವಾಗಿದ್ದು, ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್‌ ಖರ್ಗೆ ಅವರು ಅಂತಿಮ ಹಂತದ ಸಿದ್ಧತೆಗಳನ್ನು ವೀಕ್ಷಿಸಿದ್ದು, ಶೀಘ್ರದಲ್ಲೇ ಲೋಕಾರ್ಪಣೆಗೊಳ್ಳಲಿದೆ.

ಕೆಕೆಆರ್‌ಡಿಬಿಯು, ಈ ಭಾಗದಲ್ಲಿ ಫುಟ್‌ಬಾಲ್‌ ಆಟವನ್ನು ಅಭಿವೃದ್ಧಿಗೊಳಿಸಲು 2020–21ನೇ ಸಾಲಿನಲ್ಲಿ ₹3 ಕೋಟಿ ಅನುದಾನ ಮೀಸಲಿರಿಸಿತ್ತು. ಆದರೆ ಎರಡು ವರ್ಷಗಳ ಹಿಂದೆಯೇ ನಿರ್ಮಾಣವಾಗಬೇಕಿದ್ದ ಫುಟ್‌ಬಾಲ್‌ ಅಂಗಣ ಕೆಲ ತಾಂತ್ರಿಕ ಸಮಸ್ಯೆಗಳಿಂದಾಗಿ ಸ್ಥಗಿತಗೊಂಡಿತ್ತು. ಬಳಿಕ ಹಿಂದಿನ ಜಿಲ್ಲಾಧಿಕಾರಿ ಯಶವಂತ ಗುರುಕರ್‌ ಅವರು ಸಮಸ್ಯೆಗಳನ್ನು ನಿವಾರಿಸಿ ಕಾಮಗಾರಿಗೆ ಚಾಲನೆ ನೀಡಿದ್ದರು. ಈಗ ಕಾಮಗಾರಿ ಪೂರ್ಣಗೊಂಡಿದ್ದು, ಪೆವಿಲಿಯನ್‌, ಗ್ಯಾಲರಿ, ಫ್ಲಡ್‌ಲೈಟ್‌ ವ್ಯವಸ್ಥೆ ಸೇರಿದಂತೆ ಸಣ್ಣಪುಟ್ಟ ಕೆಲಸಗಳು ಬಾಕಿಯಿವೆ.

ಜಿಲ್ಲೆಯಲ್ಲಿ ಸೂಕ್ತ ಫುಟ್‌ಬಾಲ್‌ ಅಂಗಣ ಇಲ್ಲದಿರುವುದರಿಂದ ಅಭ್ಯಾಸ ಹಾಗೂ ತರಬೇತಿ ಎರಡಕ್ಕೂ ಅಡಚಣೆಯಾಗಿತ್ತು. ಈಗ ಅಂತರರಾಷ್ಟ್ರೀಯ ಗುಣಮಟ್ಟದ ಅಂಗಣ ನಿರ್ಮಾಣವಾಗಿದ್ದು ಹೊಸ ಪ್ರತಿಭೆಗಳಿಗೆ ಉತ್ತಮ ವೇದಿಕೆಯಾಗಲಿದೆ
ಮಂಜುನಾಥ, ಉಪಾಧ್ಯಕ್ಷ, ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ

ಜಿಲ್ಲೆಯಲ್ಲಿ ಆರಂಭದಲ್ಲಿ ಫುಟ್‌ಬಾಲ್‌ ಬಗ್ಗೆ ಹೆಚ್ಚು ಜಾಗೃತಿ ಇರಲಿಲ್ಲ. ಇಎಸ್‌ಐ ಆಸ್ಪತ್ರೆ ಹಿಂದಿರುವ ಮಣ್ಣಿನ ಅಂಗಣದಲ್ಲಿಯೇ ಆಸಕ್ತರಿಗೆ ಫುಟ್‌ಬಾಲ್‌ ಅಭ್ಯಾಸ ಹಾಗೂ ತರಬೇತಿ ನೀಡಲಾಗುತ್ತಿತ್ತು. ಈಗಲೂ ಅಲ್ಲಿಯೇ ತರಬೇತಿ ಹಾಗೂ ಅಭ್ಯಾಸ ನಡೆಯುತ್ತಿದೆ. ಅಲ್ಲದೆ ಜಿಲ್ಲೆಯಲ್ಲಿ ಅಂತರರಾಷ್ಟ್ರೀಯ, ರಾಷ್ಟ್ರೀಯ ಮಟ್ಟದ ಫುಟ್‌ಬಾಲ್‌ ಆಟಗಾರರೂ ಇದ್ದಾರೆ. ಇತ್ತೀಚೆಗೆ ಸ್ವಿಡನ್‌ನಲ್ಲಿ ನಡೆದ 13 ವರ್ಷದೊಳಗಿನವರ ಫುಟ್‌ಬಾಲ್‌ ವಿಶ್ವಕಪ್‌ ಟೂರ್ನಿಗೆ ಜಿಲ್ಲೆಯ ಪ್ರತಿಭೆ ಸಯ್ಯದ್‌ ರಾಫೆ ಭಾರತವನ್ನು ಪ್ರತಿನಿಧಿಸಿದ್ದಾರೆ. ಇಮ್ತಿಯಾಜ್‌ ಅವರು ರಾಷ್ಟ್ರಮಟ್ಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಿದ್ದಾರೆ. ಉಳಿದಂತೆ ಮುಂಬೈ ಫುಟ್‌ಬಾಲ್‌ ಲೀಗ್‌ ಸೇರಿದಂತೆ ವಿವಿಧ ಲೀಗ್‌ಗಳಲ್ಲಿಯೂ ಜಿಲ್ಲೆಯ ಆಟಗಾರರು ಸಕ್ರಿಯರಾಗಿದ್ದಾರೆ.

ಆಟಗಾರರ ಹರ್ಷ

‘ನಗರದಲ್ಲಿ 300ಕ್ಕೂ ಹೆಚ್ಚು ಫುಟ್‌ಬಾಲ್‌ ಆಟಗಾರರಿದ್ದೇವೆ. ಆದರೆ ಮೈದಾನವೇ ಇರಲಿಲ್ಲ. ಹೀಗಾಗಿ ಗುಲಬರ್ಗಾ ವಿವಿಯ ಮಣ್ಣಿನ ಅಂಗಣದಲ್ಲಿಯೇ ಆಡುತ್ತಿದ್ದೆವು. ಇದರಿಂದಾಗಿ ಗಾಯಗೊಂಡು ಅಭ್ಯಾಸಕ್ಕೆ ತೊಂದರೆಯಾಗುತ್ತಿತ್ತು. ಈಗ ಹೊಸ ಫುಟ್‌ಬಾಲ್‌ ಮೈದಾನ ನಿರ್ಮಾಣವಾಗಿದ್ದು, ಹೊಸ ಹುರುಪು ಬಂದಂತಾಗಿದೆ’ ಎಂದು ಫುಟ್‌ಬಾಲ್‌ ಆಟಗಾರರು ಹರ್ಷ ವ್ಯಕ್ತಪಡಿಸಿದರು.

‘ಫಿಫಾ ಮಾರ್ಗಸೂಚಿಯಂತೆ ಅಂಗಣ ನಿರ್ಮಾಣ ಮಾಡಲಾಗಿದೆ. ಕೃತಕ ಹುಲ್ಲುಹಾಸು ಫಿಫಾ ಪರೀಕ್ಷಿತವಾಗಿದ್ದು, ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಬಳಸುವಂತಹದ್ದಾಗಿದೆ. ಈ ಹುಲ್ಲುಹಾಸನ್ನು ಸೂಕ್ತವಾಗಿ ನಿರ್ವಹಿಸಿದರೆ, ಸುಮಾರು 10 ವರ್ಷ ಅಥವಾ ಅದಕ್ಕೂ ಹೆಚ್ಚು ವರ್ಷ ಹಾನಿ ಆಗುವುದಿಲ್ಲ. ಮುಂದಿನ ಐದು ವರ್ಷಗಳವರೆಗೆ ಗುತ್ತಿಗೆದಾರ ಕಂಪನಿಯೇ ಅಂಗಣದ ನಿರ್ವಹಣೆ ಮಾಡಲಿದೆ’ ಎಂದು ಪಿಡಬ್ಲ್ಯುಡಿ ಎಇಇ ಎಸ್‌.ಎಸ್‌.ಪಟ್ಟಣಶೆಟ್ಟಿ ಹಾಗೂ ಎಇ ಶಶಿಕಾಂತ ಕಮಲಾಪುರಕರ ಮಾಹಿತಿ ನೀಡಿದರು.

ಮೂಲಸೌಲಭ್ಯ ಇಲ್ಲದಿರುವಾಗಲೇ ಜಿಲ್ಲೆಯ ಫುಟ್‌ಬಾಲ್‌ ಪಟುಗಳು ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ. ಹೊಸ ಅಂಗಣ ನಿರ್ಮಾಣದಿಂದ ಇನ್ನಷ್ಟು ಉತ್ತೇಜನ ನೀಡಿದಂತಾಗಿದೆ
ಶಿವು, ಎಐಎಫ್‌ಎಫ್‌ ರೆಫರಿ

ಜಿಲ್ಲೆಯ ಫುಟ್‌ಬಾಲ್‌ಗೆ ಜೀವ ತುಂಬಿದ್ದು ಐಪಿಎಸ್‌ ಅಧಿಕಾರಿ ಯಡಾ ಮಾರ್ಟಿನ್‌. ಅವರು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆಯನ್ನು ಹುಟ್ಟು ಹಾಕುವ ಮೂಲಕ ಜಿಲ್ಲೆಯ ಪ್ರತಿಭೆಗಳನ್ನು ಪೋಷಿಸಿದರು. ಇದರೊಂದಿಗೆ ಜಿಲ್ಲೆಯ ಫುಟ್‌ಬಾಲ್‌ನಲ್ಲಿ ಹೊಸ ಅಧ್ಯಾಯವೊಂದು ಆರಂಭವಾಯಿತು. ಆಗ ನಗರದಲ್ಲಿ ಕೇವಲ 4 ಫುಟ್‌ಬಾಲ್‌ ಕ್ಲಬ್‌ಗಳಿದ್ದವು. ಈಗ 14 ಫುಟ್‌ಬಾಲ್‌ ಕ್ಲಬ್‌ಗಳು ತಲೆಯೆತ್ತಿವೆ. ಜತೆಗೆ ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ ವತಿಯಿಂದ, ನಗರದಲ್ಲಿರುವ ಶಾಲೆಗಳಲ್ಲಿರುವ ಮಕ್ಕಳಿಗೂ ಫುಟ್‌ಬಾಲ್‌ ತರಬೇತಿ ನೀಡಲಾಗುತ್ತಿದೆ ಎಂದು ಜಿಲ್ಲಾ ಫುಟ್‌ಬಾಲ್‌ ಸಂಸ್ಥೆ ಉಪಾಧ್ಯಕ್ಷ ಮಂಜುನಾಥ ತಿಳಿಸಿದರು.

ಕಾಲುವೆ ವ್ಯವಸ್ಥೆ, ಫೆನ್ಸಿಂಗ್‌ ಅಳವಡಿಕೆ: ಮಳೆ ನೀರು ಹರಿದು ಹೋಗುವಂತೆ, ಅಂಗಣದ ಸುತ್ತಲೂ ನಾಲ್ಕೂ ಕಡೆ ಕಾಲುವೆ ವ್ಯವಸ್ಥೆ ಮಾಡಲಾಗಿದೆ. ಜತೆಗೆ ನಾಲ್ಕು ಕಡೆ ಸ್ಪಿಂಕ್ಲರ್‌ಗಳನ್ನು ಅಳವಡಿಸಲಾಗಿದ್ದು, ಬೇಸಿಗೆ ಸಮಯದಲ್ಲಿ ನೀರನ್ನು ಸಿಂಪಡಣೆ ಮಾಡುವ ಮೂಲಕ ಅಂಗಣದ ನಿರ್ವಹಣೆಗೆ ಸಹಾಯವಾಗುತ್ತದೆ. ಜತೆಗೆ ಒಂದು ಉತ್ತಮ ಸೌಲಭ್ಯಗಳಿರುವ ಡ್ರೆಸಿಂಗ್‌ ರೂಮ್‌ ಕೂಡ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಮೈದಾನದ ಸುತ್ತಲೂ ಫೆನ್ಸಿಂಗ್‌ ಅಳವಡಿಸಲಾಗಿದೆ.

ನಿರ್ಮಾಣ ಹೇಗಿತ್ತು?

ಅಂಗಣದ ಮೇಲ್ಪದರದಲ್ಲಿ ಒಂದರಿಂದ ಎರಡು ಅಡಿಯಷ್ಟು ಮಣ್ಣು ತೆಗೆದು, ಸಮತಟ್ಟು (ಲೆವೆಲಿಂಗ್) ಮಾಡಿಕೊಳ್ಳಲಾಯಿತು. ಹುಲ್ಲು, ಕಳೆ ಬೆಳೆಯದಂತೆ ರಾಸಾಯನಿಕ ಸಿಂಪಡಿಸಿ ನಿಷ್ಕ್ರಿಯಗೊಳಿಸಲಾಗಿದೆ. ಅದರ ಮೇಲೆ ಮರುಮ್‌ ಹಾಕಿ, ರೂಲರ್‌ ಮೂಲಕ ಮತ್ತೆ ಲೆವೆಲ್ಲಿಂಗ್‌ ಮಾಡಿಕೊಂಡು, ರಾಸಾಯನಿಕ ಸಿಂಪಡಣೆ ಮಾಡಲಾಗಿದೆ. ಬಳಿಕ 40 ಎಂ.ಎಂ., 20 ಎಂ.ಎಂ, 10 ಎಂ.ಎಂ. ಅಳತೆಯ ಮಿಶ್ರಣದ ಕಂಕರ್‌(ಖಡಿ) ಹಾಕಲಾಗಿದ್ದು, ನೀರು ಸಿಂಪಡಣೆ ಮಾಡಲಾಯಿತು.|

ಫುಟ್‌ಬಾಲ್‌ ಮೈದಾನ ನಿರ್ಮಾಣವಾಗಿರುವುದು ಬಹಳಷ್ಟು ಖುಷಿಯಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಪ್ರತಿಭೆಗಳು ಇನ್ನಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ.
ಇಮ್ತಿಯಾಜ್‌, ರಾಷ್ಟ್ರೀಯ ಫುಟ್‌ಬಾಲ್‌ ಆಟಗಾರ

ನಂತರದಲ್ಲಿ ವೆಟ್‌ಮಿಕ್ಸ್‌(ಸಿಮೆಂಟ್‌ ಮಿಶ್ರಿತ ಖಡಿ ಹಾಗೂ ಮರಳು) ಮೊದಲ ಹಾಗೂ 2ನೇ ಪದರವಾಗಿ ಅಳವಡಿಸಲಾಗಿದೆ. ಇದೇ ವೇಳೆ ನಿರಂತರವಾಗಿ ಮಳೆ ಸುರಿದರೂ ಅಂಗಣ ಹಾನಿಗೊಳಗಾಗದಂತೆ ತಡೆಯಲು, ನೆಲದಲ್ಲಿಯೇ ನೀರು ಹೀರಿಕೊಳ್ಳುವಂತಹ (ಪರ್ಕೋಲೇಷನ್‌ ಪೈಪ್‌ ಅಳವಡಿಕೆ) ವ್ಯವಸ್ಥೆ ಅಳವಡಿಸಲಾಗಿದೆ. ಮಳೆ ನೀರು, ಈ ಪೈಪ್‌ಗಳ ಮೂಲಕ ಕಾಲುವೆಗೆ ಹರಿದು, ಹೊರಹೋಗುವಂತೆ ವ್ಯವಸ್ಥೆ ಮಾಡಲಾಗಿದೆ. ಹೀಗಾಗಿ ಅಂಗಣಕ್ಕೆ ಹಾನಿಯಾಗುವುದಿಲ್ಲ.

ಬಳಿಕ ಎಂ.ಸ್ಯಾಂಡ್‌ ಅಳವಡಿಸಲಾಗಿದ್ದು, ವೆಟ್‌ಮಿಕ್ಸ್‌ನಲ್ಲಿ ಅವಕಾಶ(ಖಾಲಿ ಜಾಗ)ಗಳನ್ನು ಮುಚ್ಚಲಾಗಿದೆ. ಈ ಹಂತದಲ್ಲಿ 10 ಎಂ.ಎಂ ರಬ್ಬರ್‌ ಹಾಸು(ಟರ್ಫ್‌) ಅಳವಡಿಸಲಾಯಿತು. ಅಂತಿಮ ಹಂತದಲ್ಲಿ, ಕೃತಕ ಹುಲ್ಲುಹಾಸನ್ನು ಅಳವಡಿಸಲಾಗುತ್ತದೆ. ಈ ಹುಲ್ಲು ಹಾಸಿನ ಮೇಲೆ ಸಿಲಿಕಾಸ್ಯಾಂಡ್‌ ಹರಡಲಾಗಿದೆ. ಅಂತಿಮವಾಗಿ ಆಟ ಆಡುವಾಗ ಆಟಗಾರರು ಹುಲ್ಲು ಹಾಸಿನ ಮೇಲೆ ಬಿದ್ದರೆ ಗಾಯಗಳಾಗಬಾರದು ಎಂಬ ಕಾರಣಕ್ಕೆ ಎಸ್‌ಬಿಆರ್‌(ಸ್ಟೈರೀನ ಬೀಟಾಡಿನ್‌ ರಬ್ಬರ್‌ )ಅನ್ನು ಹರಡಲಾಗಿದೆ ಎಂದು ಪಿಡಬ್ಲ್ಯುಡಿ ಎಇಇ ಎಸ್‌.ಎಸ್‌.ಪಟ್ಟಣಶೆಟ್ಟಿ ಹಾಗೂ ಎಇ ಶಶಿಕಾಂತ ಕಮಲಾಪುರಕರ ಮಾಹಿತಿ ನೀಡಿದರು.

ಕ್ರೀಡಾಂಗಣದ ಒಟ್ಟು ವಿಸ್ತೀರ್ಣಸಿಂಥೆಟಿಕ್‌ ಟರ್ಫ್‌ ವಿಸ್ತೀರ್ಣ 110x109 ಮೀ.90x70 ಮೀ.

ಫುಟ್‌ಬಾಲ್‌ ಅಂಗಣ ನಿರ್ಮಾಣ ಕಾರ್ಯದ ಆರಂಭಿಕ ಹಂತ

ಫಿಫಾ ಪರೀಕ್ಷಿತ ಕೃತಕ ಹುಲ್ಲು ಹಾಸನ್ನು ಅಳವಡಿಸುತ್ತಿರುವುದು

ಕಲಬುರಗಿಯ ವೀರೇಂದ್ರ ಪಾಟೀಲ ಬಡಾವಣೆಯಲ್ಲಿನ ಫುಟ್‌ಬಾಲ್‌ ಮೈದಾನ   –ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್‌
ಕಲಬುರಗಿಯ ವೀರೇಂದ್ರ ಪಾಟೀಲ ಬಡಾವಣೆಯಲ್ಲಿನ ಫುಟ್‌ಬಾಲ್‌ ಮೈದಾನ –ಪ್ರಜಾವಾಣಿ ಚಿತ್ರ/ ತಾಜುದ್ದೀನ್‌ ಆಜಾದ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.