ADVERTISEMENT

ಕಲ್ಯಾಣ ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿ ಹಾಸ್ಟೆಲ್ ನಿರ್ಮಾಣ: ಈಶ್ವರ ಖಂಡ್ರೆ

ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರ ವಸತಿನಿಲಯ ಕಟ್ಟಡ ಉದ್ಘಾಟನೆ: ಈಶ್ವರ ಖಂಡ್ರೆ

​ಪ್ರಜಾವಾಣಿ ವಾರ್ತೆ
Published 16 ಜೂನ್ 2024, 15:36 IST
Last Updated 16 ಜೂನ್ 2024, 15:36 IST
ಕಲಬುರಗಿಯಲ್ಲಿ ಭಾನುವಾರ ನಡೆದ ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರ ವಸತಿ ನಿಲಯ ಕಟ್ಟಡದ ಉದ್ಘಾಟನಾ ಕಾರ್ಯಕ್ರಮಕ್ಕೆ ಸಚಿವರಾದ ಶರಣಬಸಪ್ಪ ದರ್ಶನಾಪುರ, ಈಶ್ವರ ಖಂಡ್ರೆ ಚಾಲನೆ ನೀಡಿದರು. ಸಚಿವರು, ಶಾಸಕರು, ಗಣ್ಯರು ಉಪಸ್ಥಿತರಿದ್ದರು
ಕಲಬುರಗಿಯಲ್ಲಿ ಭಾನುವಾರ ನಡೆದ ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರ ವಸತಿ ನಿಲಯ ಕಟ್ಟಡದ ಉದ್ಘಾಟನಾ ಕಾರ್ಯಕ್ರಮಕ್ಕೆ ಸಚಿವರಾದ ಶರಣಬಸಪ್ಪ ದರ್ಶನಾಪುರ, ಈಶ್ವರ ಖಂಡ್ರೆ ಚಾಲನೆ ನೀಡಿದರು. ಸಚಿವರು, ಶಾಸಕರು, ಗಣ್ಯರು ಉಪಸ್ಥಿತರಿದ್ದರು   

ಕಲಬುರಗಿ: ‘ವೀರಶೈವ ಲಿಂಗಾಯತ ವಿದ್ಯಾರ್ಥಿಗಳಿಗಾಗಿ ಕಲ್ಯಾಣ ಕರ್ನಾಟಕದ ಪ್ರತಿಯೊಂದು ಜಿಲ್ಲೆಯಲ್ಲಿ ಕನಿಷ್ಠ 200 ವಿದ್ಯಾರ್ಥಿಗಳ ಸಾಮರ್ಥ್ಯದ ವಸತಿ ನಿಲಯದ ಕಟ್ಟಡ ನಿರ್ಮಾಣ ಮಾಡಲಾಗುವುದು’ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಸಚಿವ ಈಶ್ವರ ಖಂಡ್ರೆ ಹೇಳಿದರು.

ನಗರದಲ್ಲಿ ಭಾನುವಾರ ನಡೆದ ವೀರಶೈವ ಲಿಂಗಾಯತ ವಿದ್ಯಾರ್ಥಿನಿಯರ ವಸತಿ ನಿಲಯದ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಮ್ಮದು ಜ್ಞಾನ ಆಧಾರಿತ ಸಮಾಜವಾಗಿದ್ದು, ವಿದ್ಯಾರ್ಥಿನಿಯರ ಉನ್ನತ ಶಿಕ್ಷಣಕ್ಕೆ ಅಗತ್ಯವಾದ ನೆರವು ಕಲ್ಪಿಸುವುದು ಸಮಾಜದ ಮುಖಂಡರ ಕರ್ತವ್ಯವಾಗಿದೆ. ಸಮುದಾಯದಲ್ಲಿ ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳು ವಸತಿ ಕಾರಣಕ್ಕಾಗಿ ಉನ್ನತ ಶಿಕ್ಷಣದಿಂದ ದೂರ ಉಳಿಯಬಾರದು. ಈ ನಿಟ್ಟಿನಲ್ಲಿ ರಾಜ್ಯದ 20 ಜಿಲ್ಲೆಗಳಲ್ಲಿ ವಿದ್ಯಾರ್ಥಿನಿಲಯಗಳ ನಿರ್ಮಾಣದ ಯೋಜನೆ ಹಾಕಿಕೊಂಡಿದ್ದೇವೆ’ ಎಂದರು.

ADVERTISEMENT

‘ಕಲಬುರಗಿಯ ಹಾಸ್ಟೆಲ್‌ನಲ್ಲಿ ಉಚಿತ ಊಟದ ವ್ಯವಸ್ಥೆಯ ಬಗ್ಗೆ ಬೆಂಗಳೂರಿನ ಸಂಸ್ಥೆಯೊಂದರ ಜತೆಗೆ ಮಾತುಕತೆ ನಡೆದಿದ್ದು, ಅಂತಿಮ ಹಂತದಲ್ಲಿದೆ. ವಿದ್ಯಾರ್ಥಿನಿಯರ ಸುರಕ್ಷತೆಗೆ ಒತ್ತಕೊಟ್ಟು ಗುಣಮಟ್ಟದ ಊಟದ ವ್ಯವಸ್ಥೆ ಮಾಡಲಾಗುವುದು’ ಎಂದು ಹೇಳಿದರು.

‘500 ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತಹ ಹಾಸ್ಟೆಲ್ ನಿರ್ಮಾಣಕ್ಕೆ ಸಾಕಷ್ಟು ಜಮೀನು ಹಾಗೂ ಅನುದಾನ ಬೇಕಾಗುತ್ತದೆ. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗುವುದು. ಇದಕ್ಕೆ ಸಮುದಾಯದ ಮುಖಂಡರು ಸಹಕಾರ ನೀಡಬೇಕು’ ಎಂದರು.

ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಮಾತನಾಡಿ, ‘ಹಾಸ್ಟೆಲ್ ನಿರ್ಮಾಣದ ಮೂಲಕ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣ ಪೂರೈಸುವ ಅವಕಾಶ ಕಲ್ಪಿಸಲಾಗಿದೆ. ಕಾಯಕ ಮತ್ತು ದಾಸೋಹವನ್ನು ನಂಬಿಕೊಂಡು ಬಂದಿರುವ ನಮ್ಮ ಸಮುದಾಯವು ಉಚಿತ ಊಟದ ವ್ಯವಸ್ಥೆ ಮಾಡಬೇಕು. ಇದರ ಜತೆಗೆ 500 ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತಹ ಹಾಸ್ಟೆಲ್‌ ಕಟ್ಟಡ ನಿರ್ಮಾಣ ಮಾಡಲು ಎಲ್ಲರೂ ಕೈಜೋಡಿಸೋಣ’ ಎಂದರು.

ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಬಿ.ಆರ್.ಪಾಟೀಲ ಮಾತನಾಡಿ, ‘ಸಮುದಾಯದ ಯುವಕರು ದಾರಿ ತಪ್ಪಿ ಮನೆ, ಮಠ ಮಾರಿಕೊಳ್ಳುತ್ತಿದ್ದಾರೆ. ಅವರನ್ನು ಸರಿಯಾದ ದಾರಿಗೆ ತರುವಲ್ಲಿ ನಮ್ಮ ಹಾಗೂ ಮಠಾಧೀಶರ ಪಾತ್ರ ದೊಡ್ಡದಿದೆ’ ಎಂದರು.

‘ಹಳೆ ಮೈಸೂರು ಹಾಗೂ ಮುಂಬೈ ಕರ್ನಾಟಕ ಭಾಗದಲ್ಲಿ ತಮ್ಮ ತಾಯಿ–ತಂದೆ ಹೆಸರಿನಲ್ಲಿ ದಾನ ಮಾಡುವ ಪ್ರವೃತ್ತಿ ಇದೆ. ಆದರೆ, ನಮ್ಮ ಭಾಗದಲ್ಲಿ ಅಂತಹ ಪ್ರವೃತ್ತಿ ಕಂಡುಬರುತ್ತಿಲ್ಲ. ಸಮಾಜ ಕಟ್ಟುವಂತಹ ಕೆಲಸಗಳಿಗೆ ಎಲ್ಲರೂ ಪಕ್ಷಾತೀತವಾಗಿ ಸಹಕಾರ ಕೊಡಬೇಕು. ನೂರಾರು ವಿದ್ಯಾರ್ಥಿಗಳಿಗೆ ದೊಡ್ಡ ಹಾಸ್ಟೆಲ್ ನಿರ್ಮಾಣಕ್ಕೆ ಮುಖ್ಯಮಂತ್ರಿಗಳ ಮುಂದೆ ಪ್ರಸ್ತಾವ ಇರಿಸಬೇಕಿದೆ’ ಎಂದು ಹೇಳಿದರು.

ಶರಣಬಸವೇಶ್ವರ ಸಂಸ್ಥಾನದ 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ, ವೀರಮಹಾಂತ ಶಿವಾಚಾರ್ಯ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ಎಂ.ವೈ. ಪಾಟೀಲ, ಅಲ್ಲಮಪ್ರಭು ಪಾಟೀಲ, ಶರಣಗೌಡ ಕಂದಕೂರ, ವಿಧಾನ ಪರಿಷತ್ ಸದಸ್ಯ ಶಶೀಲ್‌ ಜಿ.ನಮೋಶಿ,  ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಮಾಜಿ ಶಾಸಕರಾದ ರಾಜಕುಮಾರ ಪಾಟೀಲ ತೇಲ್ಕೂರ, ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ಶರಣಕುಮಾರ ಮೋದಿ, ಮಹಾಸಭಾದ ಮಹಿಳಾ ಘಟಕದ ಅಧ್ಯಕ್ಷೆ ಡಾ. ಸುಧಾ ಹಾಲಕಾಯಿ ಸೇರಿ ಹಲವರು ಉಪಸ್ಥಿತರಿದ್ದರು.

ಕಷ್ಟದಲ್ಲಿ ಇರುವ ಸಮಾಜದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಕಟ್ಟಿದ್ದೇವೆ. ನಮ್ಮ ಶಕ್ತಿಗೆ ಅನುಸಾರವಾಗಿ ಸಮಾಜದ ಕೆಲಸಕ್ಕೆ ಕೈಜೋಡಿಸುವುದು ಅವಶ್ಯವಿದೆ
- ಶರಣಬಸಪ್ಪ ದರ್ಶನಾಪುರ ಸಣ್ಣ ಕೈಗಾರಿಕೆ ಸಚಿವ
ಪ್ರತ್ಯೇಕ ಧರ್ಮ ಪ್ರಸ್ತಾಪದ ಬದಲಿಗೆ ಅಲ್ಪಸಂಖ್ಯಾತರ ಸ್ಥಾನ ಮಾನವನ್ನು ಇರಿಸಿಕೊಂಡು ಡಿಪ್ಲೊಮೆಟಿಕ್ ಹೋರಾಟ ಮಾಡಿ ಪಡೆದರೆ ನಮ್ಮ ಮಕ್ಕಳಿಗೆ ಅನುಕೂಲ ಆಗುತ್ತದೆ
- ಬಿ.ಆರ್.ಪಾಟೀಲ ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ
‘ಕೇಂದ್ರ ಒಬಿಸಿ ಪಟ್ಟಿಗೆ ಸೇರಿಸಲು ತಾರ್ಕಿಕ ಅಂತ್ಯ’
‘ವೀರಶೈವ ಲಿಂಗಾಯತರ ಸಮುದಾಯದ ಎಲ್ಲ ಪಂಗಡಗಳನ್ನು ಕೇಂದ್ರ ಸರ್ಕಾರದ ಒಬಿಸಿ ಮೀಸಲಾತಿ ಪಟ್ಟಿಗೆ ಸೇರಿಸಲು ಎಲ್ಲರೂ ಒಗ್ಗೂಡಿ ಹೋರಾಟ ಮಾಡಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಬೇಕು’ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು. ‘ಸಮಾಜದಲ್ಲಿ ಬಹಳಷ್ಟು ಸಿರಿವಂತರಿದ್ದು ವೈಯಕ್ತಿಕವಾಗಿ ಪ್ರಬಲರೂ ಆಗಿದ್ದೇವೆ. ಆದರೆ ಸಾಮೂಹಿಕವಾಗಿ ಬಹಳ ದುರ್ಬಲರಾಗಿದ್ದೇವೆ. ನಮ್ಮಲ್ಲಿನ ಕಚ್ಚಾಟ ಭಿನ್ನಾಭಿಪ್ರಾಯ ಹೊಟ್ಟೆ ಕಿಚ್ಚು ಕಾಲೆಳೆಯುವ ಪ್ರವೃತ್ತಿಯನ್ನು ಬಿಟ್ಟು ಒಗ್ಗಟ್ಟು ಪ್ರದರ್ಶಿಸಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.