ADVERTISEMENT

ರಾಜ್ಯದಲ್ಲಿ ಮುಂದುವರಿದ ವರ್ಷಧಾರೆ | ಸಿಂಧನೂರು, ಹುಲಿಗಿಯಲ್ಲಿ ಭಾರಿ ಮಳೆ

ನಿರಂತರ ಮಳೆ: ಯಾದಗಿರಿ ಜಿಲ್ಲೆಯಲ್ಲಿ ಗೋಡೆ ಕುಸಿದು ವೃದ್ಧೆ ಸಾವು

​ಪ್ರಜಾವಾಣಿ ವಾರ್ತೆ
Published 18 ಅಕ್ಟೋಬರ್ 2024, 22:53 IST
Last Updated 18 ಅಕ್ಟೋಬರ್ 2024, 22:53 IST
ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ಹುಲಿಗಿ ಸಂಪರ್ಕಿಸುವ ರಸ್ತೆಗೆ ನುಗ್ಗಿರುವ ನೀರಿನಲ್ಲಿಯೇ ಸಾಗಿದ ಪ್ರಯಾಣಿಕರು
ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ಹುಲಿಗಿ ಸಂಪರ್ಕಿಸುವ ರಸ್ತೆಗೆ ನುಗ್ಗಿರುವ ನೀರಿನಲ್ಲಿಯೇ ಸಾಗಿದ ಪ್ರಯಾಣಿಕರು   

ಕಲಬುರಗಿ: ಕಲ್ಯಾಣ ಕರ್ನಾಟಕದ ರಾಯಚೂರು, ಕೊಪ್ಪಳ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುಂದುವರಿದಿದ್ದು, ಸತತ ಮಳೆಗೆ ಮನೆಯ ಗೋಡೆ ಕುಸಿದು ಯಾದಗಿರಿ ಜಿಲ್ಲೆ ಗುರುಮಠಕಲ್ ತಾಲ್ಲೂಕಿನ ಚಿಂತನಹಳ್ಳಿಯಲ್ಲಿ ವೃದ್ಧೆಯೊಬ್ಬರು ಮೃತಪಟ್ಟಿದ್ದಾರೆ.

ಗುಂಜಲಮ್ಮ ಚಂದಪ್ಪ ಅಮ್ಮಣ್ಣೋರ (58) ಮೃತಪಟ್ಟಿದ್ದು, ಚಂದ್ರಮ್ಮ ಅವರ ಸಹೋದರ ಚಂದ್ರಪ್ಪನಿಗೆ ಗಾಯಗಳಾಗಿವೆ. 

ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ ಭಾರಿ ಮಳೆಗೆ ಹಳ್ಳಕೊಳ್ಳಗಳು ತುಂಬಿ ಹರಿದಿದ್ದು, ರಾಯಚೂರು ರಸ್ತೆಯಲ್ಲಿರುವ ಹಳ್ಳದ ಸೇತುವೆ ಪಕ್ಕದಲ್ಲಿ ನೀರು ಉಕ್ಕಿ ಹರಿದು ಸಾರ್ವಜನಿಕರಿಗೆ ತೊಂದರೆಯಾಯಿತು.

ADVERTISEMENT

ಕೊಪ್ಪಳ ತಾಲ್ಲೂಕಿನ ಹುಲಿಗಿ ಭಾಗದಲ್ಲಿರುವ ಭತ್ತದ ಗದ್ದೆಯ ನೀರೆಲ್ಲ ರಸ್ತೆಯ ಮೇಲೆಯೇ ಹರಿದಿದ್ದರಿಂದ ಸವಾರರು ಪರದಾಡಿದರು. ಗುರುವಾರ ರಾತ್ರಿಯಿಂದ ಶುಕ್ರವಾರ ನಸುಕಿನವರೆಗೆ ಸಿಡಿಲಿನ ಆರ್ಭಟದೊಂದಿಗೆ ಮಳೆ ಸುರಿದಿದೆ. ಕನಕಗಿರಿ ತಾಲ್ಲೂಕಿನಲ್ಲಿ ಒಟ್ಟು 95 ಎಕರೆ ಭತ್ತದ ಬೆಳೆ ಹಾನಿಯಾಗಿದೆ. ತಾಲ್ಲೂಕಿನ ಜೀರಾಳ ಕಲ್ಗುಡಿ, ಚಿಕ್ಕಡಂಕನಲ್, ಆಕಳಕುಂಪಿ, ಉಮಳಿ ಕಾಟಾಪುರ, ಕಲಕೇರಿ, ಗೊರವಿ ಹಂಚಿನಾಳ ಗ್ರಾಮದಲ್ಲಿ ಭತ್ತ, ಹುಲಿಹೈದರ ಭಾಗದಲ್ಲಿ ತೊಗರಿ ಬೆಳೆ ಹಾನಿಯಾಗಿದೆ.

ಯಾದಗಿರಿ ಜಿಲ್ಲೆ ಹುಣಸಗಿ ತಾಲ್ಲೂಕಿನ ಬಸವಸಾಗರ ಜಲಾಶಯಕ್ಕೆ ಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದಿಂದ 80 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಹೀಗಾಗಿ, ಬಸವಸಾಗರ ಜಲಾಶಯದ 20 ಕ್ರಸ್ಟ್‌ ಗೇಟ್ ತೆರೆದು 87 ಸಾವಿರ ಕ್ಯುಸೆಕ್ ನೀರನ್ನು ಕೃಷ್ಣಾ ನದಿಗೆ ಹರಿಬಿಡಲಾಗಿದೆ. ಪ್ರಸ್ತುತ ಜಲಾಶಯದಲ್ಲಿ 32.70 ಟಿಎಂಸಿ ಅಡಿಗಳಷ್ಟು ನೀರು ಸಂಗ್ರಹವಾಗಿದೆ.

ಕೊಪ್ಪಳ ಜಿಲ್ಲೆ ಕನಕಗಿರಿ ಸಮೀಪದ ಕಾಟಾಪುರ ಗ್ರಾಮದ ಹೊಲದಲ್ಲಿ ಭತ್ತದ ಬೆಳೆ ನೆಲಸಮವಾಗಿರುವುದು

ಮೊಸಳೆಗಳು ಪತ್ತೆ, ರಾಯಕಾಲುವೆ ಬಿರುಕು

ಹುಬ್ಬಳ್ಳಿ: ಬಳ್ಳಾರಿ, ವಿಜಯನಗರ, ಗದಗ ಮತ್ತು ಧಾರವಾಡ ಜಿಲ್ಲೆಯಲ್ಲಿ ಶುಕ್ರವಾರವೂ ಮಳೆಯಾಯಿತು.

ಹೊಸಪೇಟೆ ತಾಲ್ಲೂಕಿನ ಬೆನಕಾಪುರ ಮಾಗಣೆ ಪ್ರದೇಶದಲ್ಲಿ ಭಾರಿ ಮಳೆಯಿಂದ ರಾಯಕಾಲುವೆಯ ದಂಡೆ ಒಡೆದು 60 ಎಕರೆ ಭತ್ತದ ಗದ್ದೆಗೆ ಹಾನಿ ಯಾಗಿದೆ. ನಗರದ ರೈಲು ನಿಲ್ದಾಣದ ಬಳಿ 88 ಮುದ್ದಾಪುರ ಬೆಳಗೋಡದಲ್ಲಿ ನಿರ್ಮಾಣ ಹಂತ ದಲ್ಲಿರುವ ಒಳಚರಂಡಿ ಶುದ್ಧೀಕರಣ ಘಟಕದ ನೀರಿನ ಹೊಂಡದಲ್ಲಿ 10ಕ್ಕೂ ಹೆಚ್ಚು ಮೊಸಳೆಗಳು ಕಾಣಿಸಿವೆ.

‘ಕುರಿಯೊಂದನ್ನು ಹಿಡಿದಿದ್ದ ಮೊಸಳೆಯು ಕುರಿಗಾಹಿಗೂ ಕಚ್ಚಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ. ಹೊಂಡದಲ್ಲಿನ ನೀರು ಖಾಲಿ ಮಾಡಿಸಿ, ಮೊಸಳೆಗಳನ್ನು ಬೇರೆಡೆಗೆ ಸಾಗಿಸಬೇಕು’ ಎಂದು ನಿವಾಸಿ ಭರಮಲಿಂಗನಗೌಡ ಅವರು ಅರಣ್ಯ ಅಧಿಕಾರಿಗಳಿಗೆ ಒತ್ತಾಯಿಸಿದ್ದಾರೆ.

ಕೊಟ್ಟೂರು ಮತ್ತು ಹರಪನಹಳ್ಳಿ ತಾಲ್ಲೂಕಿನಲ್ಲಿ ಕೆಲ ಮನೆಗಳಿಗೆ ಹಾನಿಯಾಗಿದೆ. ತುಂಗಭದ್ರಾ ಜಲಾಶಯದ ಒಳಹರಿವಿನ ಪ್ರಮಾಣ ಮತ್ತೆ ಹೆಚ್ಚಳವಾಗಿದ್ದು, 17 ಗೇಟ್‌ ತೆರೆದು 50 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದೆ.

ಬಳ್ಳಾರಿ ಜಿಲ್ಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 1.54 ಸೆ.ಮೀ ಮಳೆಯಾಗಿದ್ದು ಒಟ್ಟು 11 ಮನೆಗಳಿಗೆ ಭಾಗಶಃ ಹಾನಿಯಾಗಿವೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ಪಟ್ಟಣ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ರಭಸದ ಮಳೆ ಸುರಿಯಿತು. ಗದಗ ಜಿಲ್ಲೆಯ ರೋಣ ತಾಲ್ಲೂಕಿನಲ್ಲೂ ಮಳೆಯಾಗಿದೆ.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪ ವಿಭಾಗ ಹಾಗೂ ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಕೃಷ್ಣಾ ಹಾಗೂ ಉಪನದಿಗಳಲ್ಲಿ ನೀರಿನ ಹರಿವು ಹೆಚ್ಚಳವಾಗಿದೆ  ನಿಪ್ಪಾಣಿ ತಾಲ್ಲೂಕಿನ ದೂಧಗಂಗಾ ನದಿಯ ಬಾರವಾಡ-ಕುನ್ನೂರು ಕಿರು ಸೇತುವೆಯು ಜಲಾವೃತಗೊಂಡು ವಾಹನಗಳ ಸಂಚಾರ ಸ್ಥಗಿತವಾಗಿದೆ. ಮಳೆ ನೀರಿನಿಂದ ಸೋಯಾಬಿನ್, ಹತ್ತಿ, ಶೇಂಗಾ, ಗೋವಿನ ಜೋಳ, ಈರುಳ್ಳಿ, ತರಕಾರಿ ಸೇರಿ ವಿವಿಧ ಬೆಳೆಗಳು ಜಲಾವೃತ ಆಗಿವೆ.

ಶವ ಪತ್ತೆ; ಯುವಕ ನಾಪತ್ತೆ

ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲ್ಲೂಕಿನ ನೊಗನಿಹಾಳ ಗ್ರಾಮದ ಬಳಿ ಘಟಪ್ರಭಾ ನದಿಯಲ್ಲಿ ಕೊಚ್ಚಿಹೋಗಿದ್ದ ಸುರೇಶ ಗುಂಡಪ್ಪ ಬಡಿಗೇರ (54) ಅವರ ಶವ ಶುಕ್ರವಾರ ಸಂಜೆ ಪತ್ತೆಯಾಗಿದೆ.

ಬೈಲಹೊಂಗಲ ತಾಲ್ಲೂಕಿನ ನೇಸರಗಿ ಗ್ರಾಮದ ಬಳಿ ಬುಧವಾರ ಸಂಜೆ ಹಳ್ಳಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದ ಕರಡಿಗುದ್ದಿ ಗ್ರಾಮದ ಯಲ್ಲಪ್ಪ ಡಿ. ಬೋರಣ್ಣವರ ಅವರ ಸುಳಿವು ಇನ್ನೂ ಸಿಕ್ಕಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.