ADVERTISEMENT

ಪಾಲಿಕೆ ಸಾಮಾನ್ಯ ಸಭೆ: ಅರ್ಧಕ್ಕೇ ಬಿಟ್ಟ ಕಟ್ಟಡ ಕಾಮಗಾರಿ– ತನಿಖಾ ಸಮಿತಿ ರಚನೆ

ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಆಡಳಿತ ಪಕ್ಷದ ಸದಸ್ಯ ಸೈಯದ್ ಅಹ್ಮದ್ ಅವರಿಂದಲೇ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2024, 7:28 IST
Last Updated 30 ಅಕ್ಟೋಬರ್ 2024, 7:28 IST
ಕಲಬುರಗಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಸೈಯದ್ ಅಹ್ಮದ್ ಅವರು ಅರ್ಧಕ್ಕೇ ನಿಂತ ಕಾಮಗಾರಿಗಳ ಚಿತ್ರಗಳನ್ನು ಪ್ರದರ್ಶಿಸಿದರು
ಕಲಬುರಗಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕಾಂಗ್ರೆಸ್ ಸದಸ್ಯ ಸೈಯದ್ ಅಹ್ಮದ್ ಅವರು ಅರ್ಧಕ್ಕೇ ನಿಂತ ಕಾಮಗಾರಿಗಳ ಚಿತ್ರಗಳನ್ನು ಪ್ರದರ್ಶಿಸಿದರು   

ಕಲಬುರಗಿ: ನಗರದ ವಿವಿಧೆಡೆ ಕೋಟ್ಯಂತರ ವೆಚ್ಚದಲ್ಲಿ ಪಾಲಿಕೆಯ ಕಟ್ಟಡ ಕಾಮಗಾರಿಗಳನ್ನು ಕೈಗೊಂಡರೂ ಅವುಗಳನ್ನು ಕಾಲಮಿತಿಯಲ್ಲಿ ಕೈಗೊಳ್ಳದೇ ಇರುವುದರಿಂದ ಪಾಲಿಕೆಗೆ ವರಮಾನವೂ ಇಲ್ಲದೇ ಕೋಟ್ಯಂತರ ರೂಪಾಯಿ ನಷ್ಟವಾಗುತ್ತಿರುವ ಬಗ್ಗೆ ಮಂಗಳವಾರ ಇಲ್ಲಿ ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಬಿಸಿಯೇರಿದ ಚರ್ಚೆ ನಡೆಯಿತು.

ಆಡಳಿತಾರೂಢ ಕಾಂಗ್ರೆಸ್‌ ಸದಸ್ಯರೂ ಆದ ಮಾಜಿ ಮೇಯರ್ ಸೈಯದ್ ಅಹ್ಮದ್ ಅವರೇ ಪಾಲಿಕೆಯ ಅಧಿಕಾರಿಗಳ ನಿರ್ಲಕ್ಷ್ಯವನ್ನು ದಾಖಲೆಗಳ ಸಮೇತ ಬಿಚ್ಚಿಟ್ಟಿದ್ದರಿಂದ ಸ್ವಪಕ್ಷೀಯರೇ ಮುಜುಗರ ಅನುಭವಿಸಬೇಕಾಯಿತು. ಅಲ್ಲದೇ, ಕಾಮಗಾರಿಗಳು ಅರ್ಧಕ್ಕೆ ನಿಂತಿರುವ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಲು ತನಿಖಾ ಸಮಿತಿಯನ್ನು ರಚಿಸಲು ಮೇಯರ್ ಯಲ್ಲಪ್ಪ ನಾಯಕೊಡಿ ಅವರು ತೀರ್ಮಾನ ಕೈಗೊಂಡ ಬಳಿಕವಷ್ಟೇ ಸೈಯದ್ ಅಹ್ಮದ್ ಪಟ್ಟು ಸಡಿಲಿಸಿದರು.

ಸಭೆ ಆರಂಭವಾಗುತ್ತಿದ್ದಂತೆಯೇ ವಿಷಯ ಪ್ರಸ್ತಾಪಿಸಿದ ಸೈಯದ್ ಅಹ್ಮದ್ ಅವರು, ‘ಪಾಲಿಕೆಗೆ ಸೇರಿದ ನೂರಾರು ಕೋಟಿ ಮೊತ್ತದ ಆಸ್ತಿಯಲ್ಲಿ ವಾಣಿಜ್ಯ ಸಂಕೀರ್ಣ, ಹೂವಿನ ಮಾರುಕಟ್ಟೆ, ವಧಾಲಯ, ಬೀದಿ ಬದಿ ವ್ಯಾ‍ಪಾರಿಗಳು ಕುಳಿತುಕೊಳ್ಳುವ ಜಾಗ ಸೇರಿದಂತೆ ಹಲವು ಕಟ್ಟಡಗಳನ್ನು ನಿರ್ಮಿಸಲಾಗಿದೆ. ಅದರಲ್ಲಿ ಒಂಬತ್ತು ಕಾಮಗಾರಿಗಳು ಐದಾರು ವರ್ಷಗಳಾದರೂ ಮುಗಿದಿಲ್ಲ. ಕೆಲವೆಡೆ ಪಾಲಿಕೆಗೆ ಸೇರಿಲ್ಲದ ಜಾಗದಲ್ಲಿ ಕಾಮಗಾರಿ ನಡೆಸಿದ್ದರಿಂದ ಬಡಾವಣೆಯ ಮಾಲೀಕರು ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿದ್ದಾರೆ. ಕೆಲವೆಡೆ ಕಲಬುರಗಿ ಮಹಾನಗರ ಪಾಲಿಕೆ (ಕೆಎಂಪಿ) ಮಾಲ್‌ಗಳನ್ನು ಕಟ್ಟಿದ್ದರೂ ಅವುಗಳಿಗೆ ಮೂಲಸೌಕರ್ಯ ಒದಗಿಸದೇ ಇದ್ದುದರಿಂದ ವ್ಯಾಪಾರಿಗಳು ಬಂದಿಲ್ಲ. ಶರಣಬಸವೇಶ್ವರ ಕೆರೆಯ ಪಕ್ಕದ ಕಾಮಗಾರಿಯನ್ನೂ ಪೂರ್ಣಗೊಳಿಸಿಲ್ಲ. ಒಂದು ಕಾಮಗಾರಿ ಪೂರ್ಣಗೊಳಿಸಲು ಸಹ ಹಣವಿಲ್ಲದ ಸಂದರ್ಭದಲ್ಲಿ ಏಕಕಾಲಕ್ಕೆ ಬೇರೆ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವ ಅಗತ್ಯವೇನಿತ್ತು ಎಂದು ಸೈಯದ್ ಅಹ್ಮದ್ ಅವರು ಪಾಲಿಕೆಯ ಅಧಿಕಾರಿಗಳನ್ನು ಪ್ರಶ್ನಿಸಿದರು.

ADVERTISEMENT

2016–17ನೇ ಸಾಲಿನಲ್ಲಿ ಐದು ಎಕರೆ ವಿಸ್ತೀರ್ಣದಲ್ಲಿ ಹಾಗರಗಾ ರಸ್ತೆಯಲ್ಲಿ ಮಟನ್ ಮಾರ್ಕೆಟ್ ಕಾಮಗಾರಿ ಆರಂಭಗೊಂಡಿದ್ದರೂ ಇನ್ನೂ ಮುಗಿದಿಲ್ಲ. ಸೂಪರ್ ಮಾರ್ಕೆಟ್‌ನಲ್ಲಿ ಹೂವಿನ ವ್ಯಾಪಾರಿಗಳಿಗೆ ತಾತ್ಕಾಲಿಕ ಶೆಡ್‌ಗಳನ್ನು ಹಾಕಿಕೊಡಲಾಗಿದ್ದು, ಅಲ್ಲಿ ಅವುಗಳನ್ನು ಹಂಚಿಕೆ ಮಾಡಲಾಗಿಲ್ಲ. ಮಕ್ತುಂಪುರದಲ್ಲಿ ಮಾಲ್ ಕಟ್ಟಲಾಗಿದ್ದು, 120 ವ್ಯಾಪಾರಿಗಳಿಗೆ ಮಳಿಗೆಗಳನ್ನು ನೀಡಬಹುದಿತ್ತು. ಅದನ್ನೂ ಪೂರ್ಣಗೊಳಿಸಿಲ್ಲ. ಅಲ್ಲಿ ಅಕ್ರಮ ಚಟುವಟಿಕೆಗಳ ತಾಣವಾಗಿದೆ. ಕಣ್ಣಿ ಮಾರ್ಕೆಟ್ ಬಳಿ ತನ್ನದಲ್ಲದ ಜಾಗದಲ್ಲಿ ಬೀದಿ ಬದಿ ವ್ಯಾಪಾರಿಗಳ ಕಟ್ಟೆಗಳನ್ನು ನಿರ್ಮಿಸಿದ್ದು, ಅದನ್ನೂ ಹಂಚಿಕೆ ಮಾಡಿಲ್ಲ. ಇದನ್ನು ನೋಡಿದರೆ ಎಸ್‌ಎಫ್‌ಸಿ ಅನುದಾನವನ್ನು ಬೇಕಾಬಿಟ್ಟಿಯಾಗಿ ಬಳಕೆ ಮಾಡಿರುವುದು ಕಂಡು ಬರುತ್ತದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ದನಿಗೂಡಿಸಿದ ವಿರೋಧ ಪಕ್ಷದ ನಾಯಕ ಸಚಿನ್ ಹೊನ್ನಾ, ಸದಸ್ಯರಾದ ವಿಶಾಲ ದರ್ಗಿ, ವಿಜಯಕುಮಾರ ಸೇವಲಾನಿ, ಶಿವಾನಂದ ಪಿಸ್ತಿ ಅವರು ಇದರಲ್ಲಿ ಎಷ್ಟು ಖರ್ಚಾಗಿದೆ. ಕಾಮಗಾರಿ ವಿಳಂಬವೇಕೆ ಆಗಿದೆ ಎಂಬುದನ್ನು ಪತ್ತೆ ಹಚ್ಚಲು ತನಿಖಾ ಸಮಿತಿ ರಚಿಸಬೇಕು ಎಂದು ಒತ್ತಾಯಿಸಿದರು.

ಮೇಯರ್ ಯಲ್ಲಪ್ಪ ನಾಯಕೊಡಿ ಮಾತನಾಡಿ, ‘ಮಾರುಕಟ್ಟೆಯಲ್ಲಿರುವ ಒಂದು ಕಟ್ಟಡವನ್ನೇ ಪೂರ್ಣಗೊಳಿಸಿದ್ದರೆ ಪಾಲಿಕೆಗೆ ಶಾಶ್ವತ ವರಮಾನ ಬರುತ್ತಿತ್ತು. ಹೀಗಾಗಿ, ಆಯಕಟ್ಟಿನಲ್ಲಿರುವ ಕಟ್ಟಡಗಳನ್ನು ಪೂರ್ಣಗೊಳಿಸಲು ಗಮನ ಹರಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೇ, ಐದಾರು ವರ್ಷಗಳಾದರೂ ಕಟ್ಟಡಗಳು ಕಾಮಗಾರಿಗಳು ಪೂರ್ಣಗೊಳ್ಳದಿರುವ ಬಗ್ಗೆ ತನಿಖೆ ನಡೆಸಲು ಸಮಿತಿಯನ್ನು ರಚಿಸಲಾಗುವುದು ಎಂದು ಪ್ರಕಟಿಸಿದರು.

ಸೈಯದ್ ಅಹ್ಮದ್ ಅವರ ಆರೋಪಗಳಿಗೆ ಸಮಜಾಯಿಷಿ ನೀಡಿದ ಪಾಲಿಕೆಯ ಉಪ ಆಯುಕ್ತ (ಅಭಿವೃದ್ಧಿ) ಆರ್.ಪಿ. ಜಾಧವ್, ‘ಎಸ್‌ಎಫ್‌ಸಿ ಅನುದಾನ ಬಿಡುಗಡೆಯಾದಂತೆಲ್ಲ ಹಂತ ಹಂತವಾಗಿ ಕಾಮಗಾರಿ ಪೂರ್ಣಗೊಳಿಸಲು ಯೋಜಿಸಿದ್ದೆವು. ಹಣ ಕಂತಿನಲ್ಲಿ ಬಂದಾಗಷ್ಟೇ ಕಟ್ಟಡ ಕಾಮಗಾರಿಗಳನ್ನು ಕೈಗೊಂಡಿದ್ದೇವೆ’ ಎಂದರು.

ಆಗ ಮಧ್ಯಪ್ರವೇಶಿಸಿದ ಮೇಯರ್ ಅವರು, ‘ಒಂದು ಕಟ್ಟಡ ಪೂರ್ಣಗೊಳ್ಳುವವರಿಗೂ ಬೇರೆ ಕಟ್ಟಡ ಕಾಮಗಾರಿ ಕೈಗೆತ್ತಿಕೊಳ್ಳಬೇಡಿ’ ಎಂದು ಸೂಚನೆ ನೀಡಿದರು.

ಇತ್ತೀಚೆಗೆ ಡಿ. ದೇವರಾಜ ಅರಸು ಪ್ರಶಸ್ತಿ ಪಡೆದ ಮಾಜಿ ಸಚಿವ ಎಸ್‌.ಕೆ. ಕಾಂತಾ ಅವರಿಗೆ ಪಾಲಿಕೆಯ ವತಿಯಿಂದ ಪೌರ ಸನ್ಮಾನ ಮಾಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಸಾರ್ವಜನಿಕ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಸಚಿನ್‌ ಶಿರವಾಳ, ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಮೊಹಮ್ಮದ್ ಅಜಿಮೋದ್ದಿನ್‌, ಕರ, ಹಣಕಾಸು ಮತ್ತು ಮೇಲ್ಮನವಿ ಸ್ಥಾಯಿ ಸಮಿತಿ ಅಧ್ಯಕ್ಷೆ ಪರವೀನ್‌ ಬೇಗಂ ಹಾಗೂ ಲೆಕ್ಕಪತ್ರ ಸ್ಥಾಯಿ ಸಮಿತಿಯ ಅಧ್ಯಕ್ಷೆ ಇರ್ಫಾನಾ ಪರವೀನ್‌, ಪಾಲಿಕೆ ಆಯುಕ್ತ ಭುವನೇಶ ಪಾಟೀಲ, ಪಾಲಿಕೆ ಸದಸ್ಯರು, ವಲಯ ಆಯುಕ್ತರು, ಎಂಜಿನಿಯರ್‌ಗಳು ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.