ವಾಡಿ: ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ಹತ್ತಿ ಬೆಳೆಗಾರರಿಗೆ ನಿರಂತರವಾಗಿ ಸುರಿಯುತ್ತಿರುವ ಮಳೆಯು ನಷ್ಟದ ಭೀತಿಯನ್ನು ಉಂಟು ಮಾಡಿದೆ. ಮಳೆ ಹೀಗೆ ಮಂದುವರಿದರೆ ನಷ್ಟ ರೈತರು ನಷ್ಟ ಅನುಭವಿಸಬೇಕಾಗುತ್ತದೆ.
ನಾಲವಾರ ವಲಯದಲ್ಲಿ ಈ ವರ್ಷ ದಾಖಲೆಯ 8,500 ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಲಾಗಿದೆ. ನಾಲವಾರ, ಕೊಲ್ಲೂರು, ತರಕಸ್ಪೇಟ್, ಲಾಡ್ಲಾಪುರ, ಹಲಕರ್ಟಿ, ರಾವೂರು, ಹಣ್ಣಿಕೇರಾ, ಅಲಹಳ್ಳಿ, ಇಂಗಳಗಿ, ಚಾಮನೂರು, ಕಡಬೂರ, ಕರದಳ್ಳಿ ಸಹಿತ ಹಲವೆಡೆ ಕಪ್ಪು ಹಾಗೂ ಕೆಂಪು ಜಮೀನಿನಲ್ಲಿ ಬಿತ್ತಿರುವ ಮುಂಗಾರು ಹಂಗಾಮಿನ ಹತ್ತಿ ಬೆಳೆಯು ಭರ್ಜರಿ ಫಸಲು ಹೊತ್ತು ನಿಂತಿದೆ. ರೈತರು ಇನ್ನೇನು ಕೆಲವೇ ದಿನಗಳಲ್ಲಿ ಹತ್ತಿಯನ್ನು ಬಿಡಿಸಿ, ಮಾರುಕಟ್ಟೆಗೆ ಸಾಗಿಸುವ ಸಿದ್ಧತೆಯಲ್ಲಿದ್ದರು. ಆದರೆ ಮಳೆಯಿಂದಾಗಿ ಹತ್ತಿ ಸಂಪೂರ್ಣ ಒದ್ದೆಯಾಗುತ್ತಿದೆ. ಕೆಲವೆಡೆ ಗಿಡದಲ್ಲೇ ಹತ್ತಿ ಕಾಳುಗಳು ಸಸಿ ಒಡೆಯುತ್ತಿವೆ. ಇದು ರೈತರ ಚಿಂತೆಗೆ ಕಾರಣವಾಗಿದೆ.
ರೈತರು, ಈ ಬಾರಿ ಉತ್ತಮ ಮಳೆಗೆ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಉತ್ತಮ ಮಳೆಯಿಂದಾಗಿ ಉತ್ಕೃಷ್ಟ ಫಸಲಿನ ಕನಸು ಕಂಡಿದ್ದರು. ಆದರೆ ಕಳೆದ 4 ದಿನಗಳಿಂದ ಸುರಿಯುತ್ತಿರುವ ಅತಿಯಾದ ಮಳೆ ರೈತರ ಎಲ್ಲ ಕನಸುಗಳನ್ನು ನುಚ್ಚುನೂರು ಮಾಡುತ್ತಿದ್ದು, ರೈತರ ಆಸೆಗೆ ತಣ್ಣೀರು ಎರಚುತ್ತಿದೆ. ಮಳೆ ಮತ್ತಷ್ಟು ದಿನಗಳ ಕಾಲ ಮುಂದುವರೆಯಲಿದೆ ಎಂಬ ಹವಾಮಾನ ಇಲಾಖೆಯ ಸಮೀಕ್ಷೆ ಮತ್ತಷ್ಟು ಗಾಬರಿಗೊಳಿಸಿದೆ. ಸರ್ಕಾರ ಕೂಡಲೇ ಹಾಳಾದ ಬೆಳೆಯ ಸಮೀಕ್ಷೆ ನಡೆಸಿ ಪರಿಹಾರ ನೀಡಬೇಕು ಎಂದು ಹಲವು ರೈತರು ಒತ್ತಾಯಿಸಿದ್ದಾರೆ.
ಬೆಳೆದು ನಿಂತಿರುವ ಹತ್ತಿಯು ಮಳೆಯಿಂದಾಗಿ ಉದುರುತ್ತಿದ್ದು ನೆಲದ ಪಾಲಾಗುತ್ತಿದೆ. ಹತ್ತಿ ಕೆಂಪಾಗಿ ಬೀಜಗಳು ಮೊಳಕೆ ಬರುತ್ತಿವೆ. ಮಳೆಯಿಂದಾಗಿ ಹತ್ತಿಬಿಡಿಸಲು ಆಳುಗಳು ಬರುತ್ತಿಲ್ಲಮೌಲನಸಾಬ ಕೊಳ್ಳಿ ಹಣ್ಣಿಕೇರಾ ರೈತ
ರೈತರು, ಜಮೀನುಗಳಲ್ಲಿ ನೀರು ನಿಲ್ಲದಂತೆ ಬಸಿಗಾಲುವೆ ನಿರ್ಮಿಸಿಕೊಳ್ಳಬೇಕು. 19-19-19 ಒಂದು ಲೀಟರ್‌ಗೆ 10 ಗ್ರಾಂ.ನಂತೆ ಹಾಗೂ ಪ್ರೋ–ಕಿಸಾನ್ ಔಷಧದೊಂದಿಗೆ ಲಘು ಪೋಷಕಾಂಶ ಮಿಶ್ರಣ ಮಾಡಿ ಸಿಂಪಡಿಸಬೇಕುಸಂಜೀವಕುಮಾರ ಮಾನಕರ ಸಹಾಯಕ ನಿರ್ದೇಶಕ ಕೃಷಿ ಇಲಾಖೆ ಚಿತ್ತಾಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.