ADVERTISEMENT

ಅಫಜಲಪುರ | ಹತ್ತಿ ಎಲೆಗಳು ಕೆಂಪು, ಹಳದಿ ಬಣ್ಣಕ್ಕೆ: ಆತಂಕದಲ್ಲಿ ರೈತರು

ಗಿಡಗಳ ಬೆಳವಣಿಗೆ ಕುಂಠಿತ

ಶಿವಾನಂದ ಹಸರಗುಂಡಗಿ
Published 1 ಸೆಪ್ಟೆಂಬರ್ 2024, 5:00 IST
Last Updated 1 ಸೆಪ್ಟೆಂಬರ್ 2024, 5:00 IST
ಅಫಜಲಪುರ ಹೋಬಳಿ ಕೇಂದ್ರದಲ್ಲಿ ಹತ್ತಿ ಗಿಡಗಳ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿರುವುದು
ಅಫಜಲಪುರ ಹೋಬಳಿ ಕೇಂದ್ರದಲ್ಲಿ ಹತ್ತಿ ಗಿಡಗಳ ಎಲೆಗಳು ಹಳದಿ ಬಣ್ಣಕ್ಕೆ ತಿರುಗುತ್ತಿರುವುದು   

ಅಫಜಲಪುರ: ತಾಲ್ಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ರೈತರು ನಾಟಿ ಮಾಡಿರುವ ಹತ್ತಿ ಬೆಳೆಯ ಗಿಡಗಳ ಎಲೆಗಳು ಹಳದಿ ಮತ್ತು ಕೆಂಪು ಬಣ್ಣಕ್ಕೆ ಪರಿವರ್ತನೆಯಾಗಿ ಗಿಡಗಳ ಬೆಳವಣಿಗೆ ಕುಂಠಿತವಾಗುತ್ತಿದೆ. ಗಿಡದ ಹೂವು ಮತ್ತು ಕಾಯಿಗಳು ಸಹ ಕೆಂಪು ಮತ್ತು ಹಳದಿ ಬಣ್ಣಕ್ಕೆ ತಿರುಗುತ್ತಿರುವುದರಿಂದ ರೈತರು ಆತಂಕ ಪಡುವಂತಾಗಿದೆ.

‘ಕಳೆದ 15 ದಿನಗಳಿಂದ ತಾಲ್ಲೂಕಿನಲ್ಲಿ ನಿರಂತರವಾಗಿ ತುಂತುರ ಮಳೆ ಆಗುತ್ತಿದೆ. ಜಮೀನುಗಳಲ್ಲಿ ತೇವಾಂಶ ಜಾಸ್ತಿಯಾಗಿ ಹತ್ತಿ ಗಿಡಗಳ ಎಲೆಗಳ ಬಣ್ಣ ಬದಲಾಗುತ್ತಿದೆ. ಖಾಸಗಿ ಅಗ್ರೋ ಕೇಂದ್ರದವರನ್ನು ವಿಚಾರಿಸಿದಾಗ, ‘ಜಮೀನಿನಲ್ಲಿ ಮೆಗ್ನೀಷಿಯಂ ಕೊರತೆಯಿಂದ ಈ ರೀತಿ ಆಗುತ್ತದೆ’ ಎಂದು ಹೇಳುತ್ತಾರೆ. ದಿನ ಕಳೆದಂತೆ ಈ ರೋಗ ಹೆಚ್ಚಾಗುತ್ತಿದೆ’ ಎಂದು ರೈತರು ಕಳವಳ ವ್ಯಕ್ತಪಡಿಸಿದರು.

‘ರೈತರ ಬೆಳೆಗಳ ಪರಿಸ್ಥಿತಿ ಬಗ್ಗೆ ತಿಳಿಯಲು ಮತ್ತು ಮಾಹಿತಿ ನೀಡಲು ಕೃಷಿ ಇಲಾಖೆಯಲ್ಲಿ ದೊಡ್ಡಮಟ್ಟದಲ್ಲಿ ಸಿಬ್ಬಂದಿ ಕೊರತೆ ಇದೆ. ಕೇವಲ ಅನುವುಗಾರರ ಮೇಲೆ ಕಚೇರಿಗಳನ್ನು ನಡೆಸಲಾಗುತ್ತಿದೆ. ಕೃಷಿ ಅಧಿಕಾರಿಗಳು ರೈತರಿಗೆ ದೊರೆಯುವುದೇ ಇಲ್ಲ. ಹೀಗಾಗಿ ರೈತರ ಸಮಸ್ಯೆಗಳಿಗೆ ಸ್ಪಂದನೆ ಮಾಡಲು ಸಾಧ್ಯವಾಗುತ್ತಿಲ್ಲ. ರೈತರಿಗೆ ರೋಗಗಳ ಬಗ್ಗೆ ಮಾಹಿತಿ ಪಡೆಯಲು ಸಾಧ್ಯವಾಗದಿರುವುದರಿಂದ ಖಾಸಗಿ ಅಗ್ರೋ ಕೇಂದ್ರದವರು ಕೊಡುತ್ತಿರುವ ಔಷಧ ಅನಿವಾರ್ಯವಾಗಿ ಸಿಂಪಡಣೆ ಮಾಡುತ್ತಿದ್ದೇವೆ’ ಎಂದು ರೈತರು ಹೇಳುತ್ತಾರೆ.

ADVERTISEMENT

‘ರೈತ ಸಂಪರ್ಕ ಕೇಂದ್ರಗಳಲ್ಲಿ ರಾಜ್ಯಮಟ್ಟದಲ್ಲಿ ಟೆಂಡರ್ ಆಗುತ್ತಿರುವ ರೋಗ ನಿರೋಧಕ ಮತ್ತು ಕೀಟ ನಾಶಕಗಳನ್ನು ಸಹಾಯಧನದಲ್ಲಿ ಮಾರಾಟ ಮಾಡಲಾಗುತ್ತದೆ. ಆದರೆ ಇದರಿಂದ ರೋಗಗಳು ಮತ್ತು ಕೀಟಗಳು ನಿಯಂತ್ರಣವಾಗುವುದಿಲ್ಲ’ ಎಂದು ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಮಂತ್ ಬಿರಾದಾರ್ ಹಾಗೂ ಗುರು ಚಾಂದಕೋಟೆ ತಿಳಿಸಿದರು.

‘ಕೃಷಿ ಸಚಿವರು ಮುಂಗಾರು ಹಂಗಾಮಿನಲ್ಲಿ ತಾಲ್ಲೂಕು ಕೇಂದ್ರಗಳಿಗೆ ಒಂದು ಬಾರಿ ಭೇಟಿ ನೀಡಬೇಕು. ರೈತರ ಬೆಳೆಗಳನ್ನು ಪರಿಶೀಲನೆ ಮಾಡಬೇಕು. ಕೃಷಿ ಸಹಾಯಕರು ಪ್ರತಿ ಗ್ರಾಮಗಳಿಗೆ ವಾರದಲ್ಲಿ ಒಂದು ಬಾರಿಯಾದರೂ ಭೇಟಿ ನೀಡಿ ಅಲ್ಲಿ ತೊಗರಿ, ಹತ್ತಿ, ಉದ್ದು ಹೆಸರು ಬೆಳೆಗಳು ಯಾವ ಪರಿಸ್ಥಿತಿಯಲ್ಲಿವೆ? ಯಾವ ರೋಗ ಬಂದಿದೆ, ಯಾವ ಕೀಟನಾಶಕ ಸಿಂಪಡಣೆ ಮಾಡಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರೆ ರೈತರಿಗೆ ಬಹಳಷ್ಟು ಅನುಕೂಲವಾಗುತ್ತದೆ.

ಮಹಾಂತೇಶ್ ಎಸ್. ಜಮಾದಾರ್
ಅಧಿಕಾರಿಗಳು ಕೇವಲ ಕೃಷಿ ಇಲಾಖೆಯಲ್ಲಿ ಕುಳಿತುಕೊಂಡು ಮಾಹಿತಿ ನೀಡಿದರೆ ಪ್ರಯೋಜನವಿಲ್ಲ. ರೈತರ ಹೊಲಗಳಿಗೆ ಭೇಟಿ ನೀಡಬೇಕು.
– ಮಹಾಂತೇಶ್ ಎಸ್. ಜಮಾದಾರ್ ರೈತ ಮುಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.