ಕಲಬುರ್ಗಿ: ಜಿಲ್ಲೆಯ ಜೇವರ್ಗಿಯ ಕಾಟನ್ ಮಿಲ್‌ನಲ್ಲಿ ಹತ್ತಿ ಖರೀದಿಯನ್ನು ಸುಗಮಗೊಳಿಸಲಾಗಿದೆ. ರೈತರು, ಖರೀದಿದಾರರು ಹಾಗೂ ಸಿಬ್ಬಂದಿ ಮಧ್ಯೆ ಇದ್ದ ಗೊಂದಲ ಬಗೆಹರಿಸಲಾಗಿದೆ. ರೈತರಿಗೆ ತೊಂದರೆ ಆಗದಂತೆ ಆದಷ್ಟು ಬೇಗ ಹತ್ತಿ ಖರೀದಿ ಮುಗಿಸುವಂತೆ ಸಿಬ್ಬಂದಿಗೆ ಸೂಚಿಸಲಾಗಿದೆ ಎಂದು ಎಪಿಎಂಸಿ ಆಡಳಿತಾಧಿಕಾರಿ ಶೈಲಜಾ ತಿಳಿಸಿದ್ದಾರೆ.
ಶಹಾಬಾದ್ ರಸ್ತೆಯಲ್ಲಿರುವ ಮಂಜೀತ್ ಕಾಟನ್ ಮಿಲ್‌ನಲ್ಲಿ ಹತ್ತಿ ವಹಿವಾಟು ಆರಂಭವಾಗಿದ್ದರಿಂದ, ನೂರಾರು ವಾಹನಗಳು ಬಂದು ನಿಂತಿವೆ. ರೈತರು ವಾಹನಗಳನ್ನು ರಸ್ತೆಯ ಇಕ್ಕೆಲಗಳಲ್ಲಿ ನಿಲ್ಲಿಸಿದ್ದರಿಂದ ಸಂಚಾರಕ್ಕೆ ತೀವ್ರ ಅಡಚಣೆಯಾಗಿತ್ತು. ಮಿಲ್ ಪಕ್ಕದ ಖಾಲಿ ಜಾಗವನ್ನು ಸಮತಟ್ಟು ಮಾಡಿಸಿ, ಅಲ್ಲಿ ಹತ್ತಿ ತುಂಬಿ ಬರುವ ವಾಹನಗಳ ನಿಲುಗಡೆಗೆ ಅವಕಾಶ ಮಾಡಿಕೊಡಲಾಗಿದೆ. ಇದರಿಂದ ಮುಖ್ಯರಸ್ತೆಯಲ್ಲಿ ವಾಹನ ಸಂಚಾರಕ್ಕೆ ಯಾವುದೇ ಅಡಚಣೆ ಆಗದಂತೆ ನೋಡಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಹತ್ತಿ ಖರೀದಿಸಲು ಎಪಿಎಂಸಿಯಲ್ಲಿ ಟೋಕನ್ ಪದ್ಧತಿ ಅನುಸರಿಸಲಾಗುತ್ತಿತ್ತು. ಇದರಿಂದ ಕೆಲವು ರೈತರು ಗೊಂದಲಕ್ಕೀಡಾಗಿದ್ದರು. ಈಗ ಟೋಕನ್ ಮಾದರಿ ಕೈಬಿಟ್ಟು ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡುವ ಕ್ರಮ ಅನುಸರಿಸಲು ಸೂಚಿಸಲಾಗಿದೆ. ಬೇಗ ವ್ಯವಹಾರ ಮಾಡುವ ಉದ್ದೇಶದಿಂದ ಯಾರೂ ಹಣ ಪಡೆಯುವುದಿಲ್ಲ, ರೈತರೂ ಇದಕ್ಕೆ ಕಿವಿಗೊಟ್ಟು ಯಾರಿಗೂ ಹಣ ಕೊಡಬಾರದು ಎಂದು ಹೇಳಿದ್ದಾರೆ.
ಇದೇ ವೇಳೆ ಅವರು ರೈತರಿಗೆ ಮಾಸ್ಕ್ ವಿತರಿಸಿ, ಮಾರುಕಟ್ಟೆಯಲ್ಲಿ ಅಂತರ ಕಾಯ್ದುಕೊಳ್ಳುವಂತೆ ಮನವಿ ಮಾಡಿದರು.
ಎಪಿಎಂಸಿ ಸಿಬ್ಬಂದಿ ಶರಣು, ಕೃಷ್ಣ, ಕಾಟನ್ ಮಿಲ್ ಅಧಿಕಾರಿ ಪ್ರೇಮ್‌ಚಂದ್, ಸಿಸಿಐ ಅಧಿಕಾರಿ ಮಹೇಶ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.