ಕಲಬುರ್ಗಿ: ಮಹಾನಗರ ಪಾಲಿಕೆ ಚುನಾವಣೆಯ ಮತ ಎಣಿಕೆ ನಡೆದ ಇಲ್ಲಿನ ಎನ್.ವಿ. ಶಾಲೆಯ ಆವರಣ ಸೋಮವಾರ ಹಲವು ಸ್ವಾರಸ್ಯಕರ ಸಂಗತಿಗಳಿಗೆ ಸಾಕ್ಷಿಯಾಯಿತು.
ಮತಗಟ್ಟೆಯೊಳಗೆ ಪ್ರವೇಶಿಸುವ ಅಭ್ಯರ್ಥಿಗಳು ಹಾಗೂ ಎಣಿಕೆ ಏಜೆಂಟರು ಮೊಬೈಲ್ ಫೋನ್ ಒಯ್ಯುವಂತಿರಲಿಲ್ಲ. ತಮ್ಮ ಅಭ್ಯರ್ಥಿ ಗೆದ್ದರೆ ಇತರರಿಗೆ ತಕ್ಷಣಕ್ಕೆ ಫೋನ್ ಮಾಡಿಯೂ ಹೇಳುವಂತಿರಲಿಲ್ಲ. ಇದಕ್ಕೆ ಉಪಾಯ ಕಂಡುಕೊಂಡು ಹಲವು ಏಜೆಂಟರು ಮತ ಎಣಿಕೆ ಕೇಂದ್ರದಲ್ಲಿಯೇ ಜೋರಾಗಿ ಕಿರುಚುವ ಮೂಲಕ ತಮ್ಮ ಅಭ್ಯರ್ಥಿ ಗೆಲುವನ್ನು ಇತರರಿಗೆ ತಿಳಿಸುತ್ತಿದ್ದರು. ಇದು ಹಲವು ಬಾರಿ ಪೊಲೀಸರನ್ನು ವಿಚಲಿತಗೊಳಿಸಿತು.
ನೋಡನೋಡುತ್ತಿದ್ದಂತೆಯೇ ಕಿರುಚುತ್ತಾ ಹೊರಗೆ ಖುಷಿಯಿಂದ ಓಡಿ ಹೋಗುತ್ತಿದ್ದರು. ಕೊನೆಯ ಅಭ್ಯರ್ಥಿಗಳಾಗಿ ಘೋಷಣೆಯಾದ ಜೆಡಿಎಸ್‌ನ ಅಲಿಮುದ್ದೀನ್ ಪಟೇಲ್, ಕಾಂಗ್ರೆಸ್‌ನ 43ನೇ ವಾರ್ಡ್ ಅಭ್ಯರ್ಥಿ ವರ್ಷಾ ಜಾನೆ ಅವರ ಗೆಲುವಿನ ಘೋಷಣೆ ಹೊರಡಿಸುವವರೆಗೂ ಈ ರೀತಿಯ ಕೂಗಾಟ ನಡೆದೇ ಇತ್ತು.
ಫಲಿತಾಂಶ ಘೋಷಣೆಯಾಗುತ್ತಿದ್ದಂತೇ ಆಯಾ ವಾರ್ಡ್‌ಗಳ ಚುನಾವಣಾಧಿಕಾರಿಗಳು ಆಯ್ಕೆಯಾದವರಿಗೆ ಪ್ರಮಾಣಪತ್ರ ನೀಡಿ ಕಳುಹಿಸಿದರು. ಗೆಲುವು ಘೋಷಣೆಯಾದರೂ ಕೆಲ ಮಹಿಳಾ ಅಭ್ಯರ್ಥಿಗಳು ಮತ ಎಣಿಕೆ ಕೇಂದ್ರದ ಬಳಿ ಬಂದಿರಲಿಲ್ಲ. ನಂತರ ಅವರ ಪತಿ ಅಥವಾ ಮಕ್ಕಳು ಕರೆಸಿಕೊಂಡು ಪ್ರಮಾಣಪತ್ರ ಕೊಡಿಸಿದರು.
ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಬೆಳಿಗ್ಗೆಯೇ ಮತ ಎಣಿಕೆ ಕೇಂದ್ರಕ್ಕೆ ಬಂದು ಮಧ್ಯಾಹ್ನ 3 ಗಂಟೆಗೆ ಅಲ್ಲಿಂದ ತೆರಳಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ, ಉಪವಿಭಾಗಾಧಿಕಾರಿ ಮೋನಾ ರೂತ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ಡಿಸಿಪಿ ಅಡ್ಡೂರು ಶ್ರೀನಿವಾಸಲು, ಎಸಿಪಿಗಳಾದ ಅಂಶುಕುಮಾರ್, ಗಿರೀಶ ಎಸ್.ಬಿ, ಜೆ.ಎಚ್. ಇನಾಮದಾರ ನೇತೃತ್ವದಲ್ಲಿ ಎನ್.ವಿ. ಶಾಲೆಯ ಆವರಣದಲ್ಲಿ ಬಿಗಿ ಬಂದೋಬಸ್ತ್ ಕೈಗೊಂಡಿದ್ದರು.
ಹುಬ್ಬಳ್ಳಿ–ಧಾರವಾಡ, ಬೆಳಗಾವಿ ಮಹಾನಗರ ಪಾಲಿಕೆ ಸ್ಥಾನಗಳ ಸಂಖ್ಯೆ ಹೆಚ್ಚಿದ್ದರೂ ಕಲಬುರ್ಗಿಗಿಂತ ಮುಂಚೆಯೇ ಮತ ಎಣಿಕೆ ಮುಕ್ತಾಯವಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.