ಕಲಬುರಗಿ: ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ರಾಜ್ಯಪಾಲರು ಅಸ್ಥಿರಗೊಳಿಸುತ್ತಿದ್ದಾರೆ ಎಂದು ಆರೋಪಿಸಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿದ್ದ ಭಾರತ ಕಮ್ಯುನಿಸ್ಟ್ ಪಕ್ಷದ ಕಾರ್ಯಕರ್ತರು ಕಲಬುರಗಿಯಲ್ಲಿ ಗುರುವಾರ ಪ್ರತಿಭಟನೆ ನಡೆಸಿದರು.
ಪಕ್ಷದ ಜಿಲ್ಲಾ ಕಾರ್ಯದರ್ಶಿ ಮಹೇಶಕುಮಾರ ರಾಠೋಡ ಮಾತನಾಡಿ, ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿಗೆ ಮುಡಾ ಹಂಚಿಕೆ ಮಾಡಿದ ನಿವೇಶನಗಳ ಕುರಿತ ವಿವಾದದ ಹಿನ್ನೆಲೆಯಲ್ಲಿ ರಾಜ್ಯಪಾಲರು ಮುಖ್ಯಮಂತ್ರಿ ವಿರುದ್ಧ ವಿಚಾರಣೆಗೆ ಅನುಮತಿ ನೀಡುವ ಸಂದರ್ಭದಲ್ಲಿ ರಾಜ್ಯಪಾಲರ ಕಚೇರಿಯು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ತೀರ್ಮಾನ ಕೈಗೊಂಡಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಈ ಹಿಂದೆ ರಾಜ್ಯದ ವಿವಿಧ ಭ್ರಷ್ಟಾಚಾರ ಹಗರಣಗಳ ಕುರಿತು ತನಿಖೆಗೆ ಅನುಮತಿ ನೀಡುವಂತೆ ಕೋರಿ ಸಲ್ಲಿಸಿದ ಮನವಿಗಳ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದ ರಾಜ್ಯಪಾಲರು ಸಿದ್ದರಾಮಯ್ಯ ಅವರ ವಿರುದ್ಧ ವಿಚಾರಣೆಗೆ ಅನುಮತಿ ನೀಡಿದ್ದನ್ನು ನೋಡಿದರೆ ಹಲವು ಸಂದೇಹಗಳು ಉಂಟಾಗುತ್ತವೆ. ಈ ತೀರ್ಮಾನ ರಾಜಕೀಯ ಪ್ರೇರಿತವಾಗಿದೆ’ ಎಂದು ಆರೋಪಿಸಿದರು.
ಕೇಂದ್ರ ಸರ್ಕಾರ ರಾಜ್ಯದಲ್ಲಿರುವ ಬೇರೆ ಪಕ್ಷದ ಸರ್ಕಾರವನ್ನು ಅಸ್ಥಿರಗೊಳಿಸಲು ರಾಜ್ಯಪಾಲರನ್ನು ಬಳಸಿಕೊಂಡ ಉದಾಹರಣೆ 1952ರಿಂದಲೂ ನಡೆದುಕೊಂಡು ಬಂದಿದೆ. 1959ರಲ್ಲಿ ಕೇರಳ ರಾಜ್ಯ ಸರ್ಕಾರವನ್ನು ಹೀಗೆ ವಜಾಗೊಳಿಸಿ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿತ್ತು. ಹಾಗಾಗಿ, ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಪಕ್ಷದ ರಾಜ್ಯ ಮಂಡಳಿ ಸದಸ್ಯ ಮೌಲಾ ಮುಲ್ಲಾ, ಜಿಲ್ಲಾ ಸಹ ಕಾರ್ಯದರ್ಶಿಗಳಾದ ಪ್ರಭುದೇವ ಯಳಸಂಗಿ, ಪದ್ಮಾವತಿ ಮಾಲಿಪಾಟೀಲ, ಮಾಜಿ ಜಿಲ್ಲಾ ಕಾರ್ಯದರ್ಶಿ ಭೀಮಾಶಂಕರ ಮಾಡಿಯಾಳ, ಜಿಲ್ಲಾ ಖಜಾಂಚಿ ಎಚ್.ಎಸ್. ಪತಕಿ, ಭೀಮರಾಯ ಮುದಬಸಪ್ಪಗೋಳ, ಇಬ್ರಾಹಿಂ ಪಟೇಲ್, ಶಿವಲೀಲಾ ಲೇಂಗಟಿಕರ್, ಜಯಶ್ರೀ ಕುಸಾಳೆ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.