ಚಿಂಚೋಳಿ (ಕಲಬುರ್ಗಿ ಜಿಲ್ಲೆ): ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದ ಮಾಜಿ ಸಚಿವ, ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಅಧ್ಯಕ್ಷರಾಗಿದ್ದ ವೈಜನಾಥ ಪಾಟೀಲ (82) ಅವರ ಅಂತ್ಯಕ್ರಿಯೆ ಪಟ್ಟಣದ ಅವರದೇ ಮಾಲೀಕತ್ವದ ಗಂಗಮ್ಮ ಭೀಮಶೆಟ್ಟಿ ಪಾಟೀಲ ಕಲ್ಯಾಣ ಮಂಟಪದ ಆವರಣದಲ್ಲಿ ಭಾನುವಾರ ಲಿಂಗಾಯತ ವಿಧಿ ವಿಧಾನಗಳ ಪ್ರಕಾರ ನೆರವೇರಿತು.
ಪ್ರಭುಚನ್ನಬಸವ ಸ್ವಾಮೀಜಿ ಅಂತ್ಯಕ್ರಿಯೆ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದರು. ಪಾರ್ಥಿವ ಶರೀರವನ್ನಿಟ್ಟಿದ್ದ ಗಾಜಿನ ಪೆಟ್ಟಿಗೆಗೆ ‘ಉದಯವಾಗಲಿ ಕಲ್ಯಾಣ ಕರ್ನಾಟಕ ನಾಡು’ಎಂದು ಬರೆದು ಆರು ಜಿಲ್ಲೆಗಳ ನಕ್ಷೆಯನ್ನು ಚಿತ್ರಿಸಿದ ಬ್ಯಾನರ್ ಅಂಟಿಸುವ ಮೂಲಕ ಪ್ರತ್ಯೇಕ ರಾಜ್ಯದ ಕೂಗನ್ನು ಮೊಳಗಿಸಲಾಯಿತು.
ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನೆರವೇರಿಸಲು ಸರ್ಕಾರ ಆದೇಶಿಸಿದ್ದರಿಂದ ಸಶಸ್ತ್ರ ಮೀಸಲು ಪಡೆಯ ಸಿಬ್ಬಂದಿ ಪೊಲೀಸ್ ಇನ್‌ಸ್ಪೆಕ್ಟರ್ ಶರಣಪ್ಪ ನೇತೃತ್ವದಲ್ಲಿ ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಗೌರವ ಸಲ್ಲಿಸಿದರು.
ವೈಜನಾಥ ಪಾಟೀಲ ಅವರ ಪತ್ನಿ ಜ್ಞಾನೇಶ್ವರಿ ಪಾಟೀಲ, ಪುತ್ರರಾದ ಎಂಎಸ್‌ಐಎಲ್ ಮಾಜಿ ಅಧ್ಯಕ್ಷ ಡಾ.ವಿಕ್ರಮ ಪಾಟೀಲ, ಜಿಲ್ಲಾ ಪಂಚಾಯಿತಿ ಸದಸ್ಯ ಗೌತಮ ಪಾಟೀಲ, ಡಾ.ಬಸವೇಶ ಪಾಟೀಲ, ಪುತ್ರಿಯರಾದ ಭಾರತಿ ಪಾಟೀಲ, ಗಂಗಾ ಪಾಟೀಲ, ಸಹೋದರ, ಶಿವರಾಜ ಪಾಟೀಲ, ಬಾಬುರಾವ್ ಪಾಟೀಲ, ಅಜಿತ ಪಾಟೀಲ, ಅಶೋಕ ಪಾಟೀಲ ಭಾಗಿಯಾಗಿದ್ದರು.
ಸರ್ಕಾರದ ಪ್ರತಿನಿಧಿಯಾಗಿ ಸಚಿವ ಪ್ರಭು ಚವಾಣ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ, ಶಾಸಕ ರಾಜಶೇಖರ ಪಾಟೀಲ ಹುಮನಾಬಾದ್, ಜಿಲ್ಲಾಧಿಕಾರಿ ಬಿ.ಶರತ್, ಎಸ್ಪಿ ವಿನಾಯಕ ಪಾಟೀಲ, ಮಾಜಿ ಸಚಿವ ಶರಣಪ್ರಕಾಶ ಪಾಟೀಲ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.