ಕಲಬುರಗಿ: ಯಾವುದೇ ಕ್ರಿಡೆಯಲ್ಲಿ ಸಾಧನೆ ಮಾಡಬೇಕಾದರೆ ಅಭ್ಯಾಸ ತುಂಬಾ ಮುಖ್ಯ. ನಗರದ ಎನ್.ವಿ.ಮೈದಾನ ಕ್ರಿಕೆಟ್ ಆಟಗರಾರರಿಗೆ ಅಭ್ಯಾಸಕ್ಕೆ ನೆಚ್ಚಿನ ತಾಣವಾಗಿದೆ.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯಿಂದ ಮಾನ್ಯತೆ ಪಡೆದ ಏಳು ಕ್ರಿಕೆಟ್ ಕ್ಲಬ್‌ಗಳು ನಗರದಲ್ಲಿವೆ. ಈ ಕ್ಲಬ್‌ಗಳಲ್ಲಿ 300ಕ್ಕೂ ಹೆಚ್ಚು ಕ್ರೀಡಾಪಟುಗಳು ತರಬೇತಿ ಪಡೆಯುತ್ತಿದ್ದಾರೆ.
ಎನ್.ವಿ.ಮೈದಾನದಲ್ಲಿ ಎನ್.ವಿ.ಸೊಸೈಟಿ ಕ್ಲಬ್‌ನಿಂದ ಎರಡು ಮಡ್ ವಿಕೆಟ್, ಎನ್.ವಿ.ಜಿಮ್ಖಾನ ಕ್ಲಬ್‌ನಿಂದ ಒಂದು ಆಸ್ಟ್ರೋ ಟರ್ಫ್ ಮತ್ತು ಸಿಮೆಂಟ್ ವಿಕೆಟ್, ಕರ್ನಾಟಕ ಕ್ರಿಕೆಟ್ ಕ್ಲಬ್‌ನಿಂದ ಮೂರು ಪಿಚ್ ಮತ್ತು ಗ್ಯಾಲಕ್ಸಿ ಕ್ರಿಕೆಟ್ ಕ್ಲಬ್‌ನಿಂದ ಎರಡು ಸಿಮೆಂಟ್ ವಿಕೆಟ್ ಅಭ್ಯಾಸ ಪಿಚ್‌ಗಳನ್ನು ನಿರ್ಮಿಸಲಾಗಿದೆ.
ನಗರದಲ್ಲಿ ಕೆಬಿಎನ್ ಕ್ರೀಡಾಂಗಣದಲ್ಲಿ ಎರಡು ಆಸ್ಟ್ರೋ ಟರ್ಫ್ ಅಭ್ಯಾಸ ಪಿಚ್‌ಗಳು ಇವೆ. ಆದರೆ, ಅಲ್ಲಿನ ಶುಲ್ಕ ಭರಿಸಲು ಎಲ್ಲ ಆಟಗಾರರಿಗೂ ಸಾಧ್ಯವಾಗುವುದಿಲ್ಲ. ಚಂದ್ರಶೇಖರ ಪಾಟೀಲ ಕ್ರೀಡಾಂಗಣದಲ್ಲಿಯೂ ಸಹ ಆಸ್ಟ್ರೋ ಟರ್ಫ್ ಪಿಚ್ ಇದೆ. ಆದರೆ, ಏಕಕಾಲಕ್ಕೆ ಅಲ್ಲಿ ಹೆಚ್ಚು ಜನರಿಗೆ ಅಭ್ಯಾಸ ಮಾಡಲು ಆಗುವುದಿಲ್ಲ.
ನಗರದ ಎನ್.ವಿ.ಮೈದಾನದಲ್ಲಿ ವಿವಿಧ ಕ್ಲಬ್‌ಗಳು ಹಲವು ಮಾದರಿಯ ಅಭ್ಯಾಸ ಪಿಚ್‌ಗಳನ್ನು ನಿರ್ಮಿಸಿರುವುದರಿಂದ ಅಭ್ಯಾಸಕ್ಕೆ ತುಂಬಾ ಅನುಕೂಲವಾಗುತ್ತಿದ ಎನ್ನುತ್ತಾರೆ ಕ್ರೀಡಾಪಟುಗಳು.
ಈ ಬಗ್ಗೆ ಪ್ರತಿಕ್ರಿಯಿಸಿದ ಕರ್ನಾಟಕ ಕ್ರಿಕೆಟ್ ಕ್ಲಬ್ ಕೋಚ್ ವಿಜಯಕುಮಾರ ಎಸ್.ಡಿ., ನಮ್ಮ ಕ್ಲಬ್‌ನಲ್ಲಿ 70 ಕ್ರೀಡಾಪಟುಗಳು ತರಬೇತಿ ಪಡೆಯುತ್ತಿದ್ದಾರೆ. ಎಂಟು ಜನ ಕೋಚ್‌ಗಳು ಇದ್ದಾರೆ. ಮೂರು ಅಭ್ಯಾಸ ಪಿಚ್‌ಗಳಿವೆ ಎಂದರು.
ಸಿಮೆಂಟ್ ವಿಕೆಟ್ (ಪಿಚ್), ಮ್ಯಾಟ್ ವಿಕೆಟ್ ಮತ್ತು ಆಸ್ಟ್ರೋ ಟರ್ಫ್ ಪಿಚ್‌ಗಳು ಇವೆ. ಐದು ತಿಂಗಳ ಹಿಂದೆ ಆಸ್ಟ್ರೊ ಟರ್ಫ್ ಉದ್ಘಾಟನೆಯಾಗಿದೆ. ಮುಂಬೈನಿಂದ ಈ ಆಸ್ಟ್ರೋ ಟರ್ಫ್ ಮ್ಯಾಟ್ ಅನ್ನು ತರಿಸಲಾಗಿದೆ. ಇದಕ್ಕೆ ₹35 ಸಾವಿರ ವೆಚ್ಚ ತಗುಲಿದೆ. ಇದು ಮೂರ ವರ್ಷ ಬಾಳಿಕೆ ಬರುತ್ತದೆ ಎಂದು ಮಾಹಿತಿ ನೀಡಿದರು.
ಸಿಮೆಂಟ್ ವಿಕೆಟ್ ಪಿಚ್‌ನಲ್ಲಿ ಚೆಂಡು ವೇಗವಾಗಿ ಬರುತ್ತದೆ ಮತ್ತು ಸ್ಲಿಪ್ ಆಗುತ್ತದೆ. ಆದರೆ, ಮ್ಯಾಟಿಂಗ್ ವಿಕೆಟ್‌ನಲ್ಲಿ ವೇಗದ ಜತೆಗೆ ಬೌನ್ಸ್, ಸ್ವಿಂಗ್ ಆಗುತ್ತದೆ. ಹೀಗಾಗಿ ಆಟಗಾರರಿಗೆ ಅಭ್ಯಾಸ ಮಾಡಲು ತುಂಬಾ ಸಹಕಾರಿಯಾಗಿದೆ ಎನ್ನುತ್ತಾರೆ ಅವರು.
ವೃತ್ತಿಪರವಾಗಿ ಕ್ರಿಕೆಟ್ ಆಯ್ಕೆ ಮಾಡಿಕೊಂಡವರು ನಿರಂತರವಾಗಿ ಅಭ್ಯಾಸ ಮಾಡಬೇಕಾಗುತ್ತದೆ. ಅದಕ್ಕೆ ಪೂರಕವಾದ ವಾತಾವರಣ ಇಲ್ಲಿ ಇಲ್ಲ. ಹೀಗಾಗಿ ಅವರು ಬೆಂಗಳೂರು, ಹೈದರಾಬಾದ್‌ನಂತಹ ನಗರಗಳಿಗೆ ಹೋಗಬೇಕಾಗುತ್ತದೆ. ನಾವು ಇಲ್ಲಿ ಪ್ರಾಥಮಿಕ ತರಬೇತಿ ನೀಡುವ ಜತೆಗೆ ಅಭ್ಯಾಸಕ್ಕೆ ಪೂರಕವಾದ ಪಿಚ್‌ಗಳನ್ನು ಸಹ ನಿರ್ಮಿಸಿದ್ದೇವೆ ಎಂದರು.
‘ಚಿಕ್ಕಂದಿನಿಂದಲೂ ಕ್ರಿಕೆಟ್‌ನಲ್ಲಿ ಆಸಕ್ತಿ ಇತ್ತು. ಹೀಗಾಗಿ ಈ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡೆ. ಇಲ್ಲಿ ಅಭ್ಯಾಸಕ್ಕೆ ಉತ್ತಮ ಪಿಚ್‌ಗಳು ಇರುವುದರಿಂದ ಗುಣಮಟ್ಟದ ತರಬೇತಿ ಸಿಗುತ್ತಿದೆ’ ಎನ್ನುತ್ತಾರೆ ಕ್ರಿಕೆಟ್ ಆಟಗಾರ್ತಿ ಅಂಬಿಕಾ ಪಾಟೀಲ.
***
ನಗರದ ಇಎಸ್‌ಐಸಿ ಕಾಲೇಜಿನಲ್ಲಿ ಬಿಡಿಎಸ್ ಓದುತ್ತಿದ್ದೇನೆ. ಅದರ ಜತೆಗೆ ಕೆಸಿಸಿ ಕ್ಲಬ್‌ನಲ್ಲಿ ತರಬೇತಿ ಪಡೆಯುತ್ತಿದ್ದೇನೆ. ಇಲ್ಲಿ ಅಭ್ಯಾಸಕ್ಕೆ ಪೂರಕವಾದ ಪಿಚ್‌ಗಳನ್ನು ನಿರ್ಮಿಸಿದ್ದಾರೆ
–ಅಂಬಿಕಾ ಪಾಟೀಲ, ಕ್ರಿಕೆಟ್ ಆಟಗಾರ್ತಿ
***
ನಮ್ಮ ಕ್ಲಬ್ ವತಿಯಿಂದ ಅಭ್ಯಾಸಕ್ಕಾಗಿ ಉತ್ತಮ ಅಂಕಣಗಳನ್ನು ನಿರ್ಮಿಸಿದ್ದೇವೆ. ಇದರಿಂದ ಕ್ಲಬ್‌ನಲ್ಲಿ ತರಬೇತಿ ಪಡೆಯುವವರ ಸಂಖ್ಯೆಯೂ ಹೆಚ್ಚಾಗಿದೆ. ರಾಜ್ಯ ತಂಡಕ್ಕೂ ನಮ್ಮ ಆಟಗಾರರು ಆಯ್ಕೆ ಆಗುತ್ತಿದ್ದಾರೆ
–ಸಂತೋಷ್ ಮಟ್ಟಿ, ಕೋಚ್ ಕೆಸಿಸಿ
***
ಉತ್ತಮವಾಗಿ ಅಭ್ಯಾಸ ಮಾಡಿದಾಗ ಮಾತ್ರ ಬೇರೆ ತಂಡಗಳೊಂದಿಗೆ ಸ್ಪರ್ಧಿಸಲು ಸಾಧ್ಯ. ಅಭ್ಯಾಸಕ್ಕೆ ಬೇಕಾದ ಅಗತ್ಯ ವಾತಾವರಣವನ್ನು ಇಲ್ಲಿ ಕಲ್ಪಿಸಿದ್ದಾರೆ. ಇದರಿಂದ ಅನುಕೂಲವಾಗಿದೆ
–ವಿಲಾಸ್, ಕ್ರಿಕೆಟ್ ಪಟು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.