ಕಲಬುರಗಿ: ಪೊಲೀಸರೆಂದು ಹೇಳಿ ಬೈಕ್ ನಿಲ್ಲಿಸಿದ ದುಷ್ಕರ್ಮಿಗಳು ಬೈಕ್ ಸವಾರನ ಬಳಿಯಿದ್ದ ಚಿನ್ನಾಭರಣ ದೋಚಿ ಪರಾರಿಯಾದ ಘಟನೆ ಜೇವರ್ಗಿ ತಾಲ್ಲೂಕಿನ ನೆಲೋಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಜೇರಟಗಿ– ನೇದಲಗಿ ರಸ್ತೆಯಲ್ಲಿ ಮಂದೇವಾಲದ ಗುತ್ತಿಗೆದಾರ ಮರಳಪ್ಪ ವಾಲೀಕಾರ ಎಂಬುವವರಿಂದ ತಲಾ 10 ಗ್ರಾಂ ಚಿನ್ನದ ಸರ ಹಾಗೂ ಉಂಗುರವನ್ನು ಕಳ್ಳರು ದೋಚಿದ್ದಾರೆ.
ಮರಳಪ್ಪ ಅವರು ಜೇರಟಗಿ ಗ್ರಾಮದಲ್ಲಿ ಮನೆ ಕಟ್ಟಿಸಲು ಬೈಕ್ ಮೇಲೆ ತೆರಳುತ್ತಿದ್ದರು. ಈ ವೇಳೆ ಹಿಂದಿನಿಂದ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು, ಹಿಂದಿ ಭಾಷೆಯಲ್ಲಿ ತಾವು ಪೊಲೀಸರು ಎಂದು ಪರಿಚಯಿಸಿಕೊಂಡರು. ‘ಕಳ್ಳರ ಕಾಟ ಹೆಚ್ಚಾಗಿದೆ, ಯಾರೋ ಕಳ್ಳರು ರಮೇಶ ಎಂಬಾತನ ಕೈಬೆರಳು ಕತ್ತರಿಸಿ, ಚಿನ್ನಾಭರಣ ದೋಚಿದ್ದಾರೆ’ ಎಂದು ಹೆದರಿಸಿದರು. ಜತೆಗೆ ಬೈಕ್ ದಾಖಲೆಗಳನ್ನು ಕೇಳಿ ಧಮ್ಕಿ ಹಾಕಿದರು ಎಂದು ಪೊಲೀಸರು ತಿಳಿಸಿದ್ದಾರೆ.
ನಕಲಿ ಪೊಲೀಸರ ಮಾತು ನಂಬಿದ ಮರಳಪ್ಪ, ₹1.20 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ತೆಗೆದು ಜೇಬಿನಲ್ಲಿ ಇಟ್ಟುಕೊಳ್ಳುತ್ತಿದ್ದರು. ಪೇಪರ್‌ನಲ್ಲಿ ಕಟ್ಟಿಕೊಡುವುದಾಗಿ ಆಭರಣಗಳನ್ನು ಪಡೆದು, ಅದರಲ್ಲಿ ಕಲ್ಲಿನ ಹರಳುಗಳನ್ನು ಇಟ್ಟು ಪರಾರಿಯಾಗಿದ್ದಾರೆ ಎಂದಿದ್ದಾರೆ.
₹1.56 ಕೋಟಿ ವಂಚನೆ: ಟೈಲ್ಸ್ ವ್ಯಾಪಾರದಲ್ಲಿ ಪಾಲುದಾರಿಕೆ ಕೊಡುವುದಾಗಿ ನಂಬಿಸಿ ಹಣ ಹೂಡಿಕೆ ಮಾಡಿಕೊಂಡು ₹1.56 ಕೋಟಿ ನೀಡದೆ ವಂಚಿಸಿದ ಆರೋಪದಲ್ಲಿ ಹೊರ ರಾಜ್ಯದ ಇಬ್ಬರ ವಿರುದ್ಧ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗುಜರಾತ್ ಮೂಲದ ಹಿತೇಶ ಪಟೇಲ್ ಮತ್ತು ಕೇರಳದ ಗಿರೀಶ್ ಪಿಳೈ ವಂಚಿಸಿದ ಆರೋಪಿಗಳು. ನಗರದ ಟೈಲ್ಸ್ ವ್ಯಾಪಾರಿ ಶರಣಬಸಪ್ಪ ಚನ್ನಪ್ಪ, ಈತನ ಸ್ನೇಹಿತರಾದ ಸೈಯ್ಯದ್ ಅಹೇದ್ ಮತ್ತು ಗಿರಿರಾಜ ಯಳಮೇಲಿ ವಂಚನೆಗೆ ಒಳಗಾದವರು.
ಪ್ಲೋರೆನ್ಸ್ ಕಂಪನಿಯಲ್ಲಿ ಶೇ 25ರಷ್ಟು ಪಾಲುದಾರಿಕೆ ಕೊಡತ್ತೇವೆ ಎಂದು ನಂಬಿಸಿದ ಆರೋಪಿಗಳು, ಮೂವರಿಂದಲೂ ಹಂತ– ಹಂತವಾಗಿ ₹1.56 ಕೋಟಿ ಪಡೆದು ವಂಚಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.