ADVERTISEMENT

ಸೇಡಂ: ಬೆಳೆ ಹಾನಿ ಸಮೀಕ್ಷೆ ಕಾರ್ಯ ಚುರುಕು

ಮತ್ತೆ ಮಳೆ ಆರಂಭವಾಗಿದ್ದರಿಂದ ಅಧಿಕಾರಿಗಳಲ್ಲಿ ಗೊಂದಲ

ಅವಿನಾಶ ಬೋರಂಚಿ
Published 5 ಅಕ್ಟೋಬರ್ 2024, 6:42 IST
Last Updated 5 ಅಕ್ಟೋಬರ್ 2024, 6:42 IST
ಸೇಡಂ ಸಮೀಪದ ಮೋತಕಪಲ್ಲಿ ಗ್ರಾಮದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ಸಮೀಕ್ಷೆಯಲ್ಲಿ ತೊಡಗಿರುವುದು
ಸೇಡಂ ಸಮೀಪದ ಮೋತಕಪಲ್ಲಿ ಗ್ರಾಮದಲ್ಲಿ ಕೃಷಿ ಇಲಾಖೆ ಅಧಿಕಾರಿಗಳು ಬೆಳೆ ಸಮೀಕ್ಷೆಯಲ್ಲಿ ತೊಡಗಿರುವುದು   

ಸೇಡಂ: ತಾಲ್ಲೂಕಿನಲ್ಲಿ ಅತಿವೃಷ್ಟಿ ಮತ್ತು ನದಿ ಪ್ರವಾಹಗಳಿಂದಾದ ಬೆಳೆ ಹಾನಿ ಸಮೀಕ್ಷೆ ಚುರುಕುಗೊಂಡಿದೆ. ಕೃಷಿ, ಕಂದಾಯ ಮತ್ತು ತೋಟಗಾರಿಕೆ ಇಲಾಖೆಯ ಸಹಯೋಗದಲ್ಲಿ ಬೆಳೆ ಹಾನಿ ಸಮೀಕ್ಷೆ ಕಾರ್ಯ ನಡೆಯುತ್ತಿದೆ.

ಅಧಿಕಾರಿಗಳ ಪ್ರಕಾರ ತಾಲ್ಲೂಕಿನಲ್ಲಿ ಸುಮಾರು 4,800 ಹೆಕ್ಟರ್ ಬೆಳೆಹಾನಿಯಾಗಿದೆ ಎಂಬ ಅಂದಾಜಿದ್ದು ಇನ್ನೂ ಸಮೀಕ್ಷೆ ನಡೆಯುತ್ತಿದೆ. ಆದರೆ ಮತ್ತೆ ಆರಂಭವಾಗಿದ್ದರಿಂದ ಅಧಿಕಾರಿಗಳನ್ನು ಗೊಂದಲಕ್ಕೆ ತಳ್ಳಿದಂತಾಗುತ್ತಿದೆ.

ಕಮಲಾವತಿ ಮತ್ತು ಕಾಗಿಣಾ ನದಿ ನೀರಿನ ಪ್ರವಾಹ ಸೇರಿದಂತೆ ಅತಿವೃಷ್ಟಿಯಿಂದ ಹೊಲಗಳಲ್ಲಿನ ಬೆಳೆಗಳು ಕೊಚ್ಚಿ ಹೋಗಿದ್ದನನು ಅಧಿಕಾರಿಗಳು ಸಮೀಕ್ಷೆ ಮಾಡುತ್ತಿದ್ದಾರೆ. ಮುಂಗಾರು ಬೆಳೆಗಳಾದ ಹೆಸರು ಮತ್ತು ಉದ್ದಿನ ಬೆಳೆಗಳ ರಾಶಿ ಬಹುತೇಕ ಮುಗಿಯುವ ಹಂತದಲ್ಲಿದೆ.ಉದ್ದಿನ ಬೆಳೆ ರಾಶಿಯ ಸಂದರ್ಭದಲ್ಲಿ ಮಳೆಗೆ ಸಿಲುಕಿ ಕೆಲವಡೆ ಹಾನಿಯಾಗಿದೆ. ಆದರೆ ನಿರಂತರ ಮಳೆಯಿಂದಾಗಿ ತೊಗರಿ ಬೆಳೆ ಕೊಚ್ಚಿ ಹೋಗಿ, ಹೊಲಗಳಲ್ಲಿ ನೀರು ನಿಂತಿದ್ದರಿಂದ ತೊಗರಿ ಬೆಳೆ ಒಣಗಿದ್ದು ಕಟ್ಟಿಗೆಯಂತಾಗಿವೆ. ಅರ್ಧ ಒಣಗಿ, ಇನ್ನರ್ಧ ಚೆನ್ನಾಗಿದೆ. ತಗ್ಗಿರುವ ಪ್ರದೇಶಗಳದಲ್ಲಿನ ಬೆಳೆಗಳು ಸಂಪೂರ್ಣವಾಗಿ ನೆಲಕಚ್ಚಿವೆ ಎನ್ನುತ್ತಾರೆ ರೈತರು.

ADVERTISEMENT

ಕಾಗಿಣಾ ನದಿ ನೀರಿನ ಪ್ರವಾಹ ತಾಲ್ಲೂಕಿನ ಲಾಹೋಡ್, ಕುರಕುಂಟಾ, ಯಡ್ಡಳ್ಳಿ, ತೆಲ್ಕೂರ, ಹಾಬಾಳ, ಸಂಗಾವಿ(ಟಿ), ಸಟಪಟನಳ್ಳಿ, ಸೂರವಾರ, ಕಾಚೂರು, ಬಿಬ್ಬಳ್ಳಿ, ಮೀನಹಾಬಾಳ್, ಸಂಗಾವಿ(ಎಂ), ತೊಟ್ನಳ್ಳಿ, ಮಳಖೇಡ, ಸಮಖೇಡ ಸೇರಿದಂತೆ ಇನ್ನಿತರ ಗ್ರಾಮಗಳ ರೈತರ ಹೊಲಗಳಿಗೆ ನೀರು ನುಗ್ಗಿತ್ತು. ಅಲ್ಲದೆ ಕಮಲಾವತಿ ನದಿ ನೀರಿನ ಪ್ರವಾಹ ರಂಜೋಳ, ಬಟಗೇರಾ, ಸಿಂಧನಮಡು, ಸೇಡಂ, ಬಿಬ್ಬಳ್ಳಿ, ದೇವನೂರು, ದುಗನೂರು ಸೇರಿದಂತೆ ಇನ್ನಿತರ ಗ್ರಾಮಗಳಿಗೆ ಸಂಕಷ್ಟಕ್ಕೆ ತಳ್ಳಿದಂತಾಗಿದೆ.

ಯಡ್ಡಳ್ಳಿ ಗ್ರಾಮದ ಹೊಲವೊಂದರಲ್ಲಿ ನೀರು ನಿಂತು ಬಹುತೇಕ ತೊಗರಿ ಬೆಳೆ ಹಾಳಾಗಿದೆ. ಬಿಬ್ಬಳ್ಳಿ ಗ್ರಾಮದ ಸೇತುವೆ ಪಕ್ಕದ ಹೊಲಗಳು ಜಲಾವೃತ್ತಗೊಂಡಿದ್ದವು. ಪ್ರವಾಹದ ಆರ್ಭಟಕ್ಕೆ ಬೆಳೆಗಳು ನೀರು ಪಾಲಾಗಿದ್ದು ಅಧಿಕಾರಿಗಳು ಹೊಲಕ್ಕೆ ಭೇಟಿ ನೀಡಿ ಸ್ಪಂದಿಸಬೇಕು ಎನ್ನುವುದು ರೈತರ ಆಗ್ರಹ.

ಬೆಳೆ ಹಾನಿ ಸಮೀಕ್ಷೆ ಅಧಿಕಾರಿಗಳ ಭೇಟಿ: ಬೆಳೆ ಹಾನಿ ಸಮೀಕ್ಷೆ ಅಧಿಕಾರಿಗಳು ತಾಲ್ಲೂಕಿನ ಮಾದ್ವಾರ, ತೆಲ್ಕೂರ, ಹಾಬಾಳ್, ಶಕಲಾಸಪಲ್ಲಿ, ಮೋತಕಪಲ್ಲಿ, ಊಡಗಿ, ಕುರಕುಂಟಾ ಸೇರಿದಂತೆ ವಿವಿಧ ಗ್ರಾಮಗಳಿಗೆ ಭೇಟಿ ನೀಡಿದ್ದಾರೆ.

ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ವೈ.ಎಲ್ ಹಂಪಣ್ಣ, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಕಯ ನಿರ್ದೇಶಕ ರಾಘವೇಂದ್ರ ಉಕ್ಕನಾಳ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು ಸಮೀಕ್ಷೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಅಲ್ಲದೆ ಬೆಳೆ ವಿಮೆಗೆ ಸಂಬಂಧಿಸಿದಂತೆ ಸುಮಾರು 2 ಸಾವಿರಕ್ಕೂ ಅಧಿಕ ದೂರುಗಳು ರೈತರಿಂದ ಬಂದಿವೆ ಎಂದು ಕೃಷಿ ಇಲಾಖೆಯ ಮೂಲಗಳು ತಿಳಿಸಿವೆ.

ಕಾಗಿಣಾ ಮತ್ತು ಕಮಲಾವತಿ ನದಿಗಳ ದಂಡೆ ಮೇಲಿರುವ ಹೊಲಗಳಲ್ಲಿನ ಬೆಳೆ ಹಾನಿಯಾಗಿದೆ. ಅಧಿಕಾರಿಗಳು ಪರಿಶೀಲಿಸಿ ಪರಿಹಾರ ಒದಗಿಸಬೇಕು
ಶ್ರೀಮಂತ ಆವಂಟಿ, ಮುಖಂಡ
ಕಾಗಿಣಾ ನದಿ ದಂಡೆಗೆ ಹೊಂದಿಕೊಂಡಿರುವ ಸುಮಾರು 10 ಎಕರೆ ವರೆಗೆ ನೀರು ನುಗ್ಗಿ ಬೆಳೆಗಳು ಹಾಳಾಗಿವೆ. ಉದ್ದು ಮತ್ತು ತೊಗರಿ ಹಾನಿಯ ಸಮೀಕ್ಷೆ ಪ್ರಾಮಾಣಿಕ ನಡೆಸಬೇಕು
ಚನ್ನಬಸ್ಸಪ್ಪ ಹಾಗರಗಿ, ರೈತ ಮುಖಂಡ ಸಂಗಾವಿ(ಎಂ)
ಬೆಳೆ ಹಾನಿ ಸಮೀಕ್ಷಾ ಕಾರ್ಯ ತಾಲ್ಲೂಕಿನಲ್ಲಿ ಮೂರು ಇಲಾಖೆಗಳ ಸಹಭಾಗಿತ್ವದಲ್ಲಿ ನಡೆಯುತ್ತಿದೆ. ಮತ್ತೆ ಮಳೆ ಆರಂಭವಾಗಿದ್ದರಿಂದ ಸಮೀಕ್ಷೆಯಲ್ಲಿ ಸಂಖ್ಯೆಯಲ್ಲಿ ಏರಾಪೇರಾಗುವ ಸಾಧ್ಯತೆಯಿದೆ.
ವೈ.ಎಲ್ ಹಂಪಣ್ಣ , ಸಹಾಯಕ ಕೃಷಿ ನಿರ್ದೇಶಕ
ಸೇಡಂ ತಾಲ್ಲೂಕಿನ ಮಾದ್ವಾರ ಗ್ರಾಮದಲ್ಲಿ ಅತಿವೃಷ್ಟಿಗೆ ಹಾನಿಯಾದ ತೊಗರಿ ಬೆಳೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.