ADVERTISEMENT

ಚಿಂಚೋಳಿ: ತೊಗರಿ ಬಿತ್ತನೆಗೆ ಹೆಚ್ಚಿದ ಆಸಕ್ತಿ

ಜೂನ್ ತಿಂಗಳಲ್ಲಿ ಶೇ 10ರಷ್ಟು ಅಧಿಕ ಮಳೆ; ಶೇ 20ರಷ್ಟು ಬಿತ್ತನೆ ಪೂರ್ಣ

ಜಗನ್ನಾಥ ಡಿ.ಶೇರಿಕಾರ
Published 13 ಜೂನ್ 2024, 5:27 IST
Last Updated 13 ಜೂನ್ 2024, 5:27 IST
ಚಿಂಚೋಳಿ ಕಲಭಾವಿ ಮಾರ್ಗದ ರಸ್ತೆಯ ಬದಿಯ ಹೊಲದಲ್ಲಿ ರೈತರು ಮುಂಗಾರಿನ ತೊಗರಿ ಹಾಗೂ ಉದ್ದು ಬಿತ್ತನೆಯಲ್ಲಿ ತೊಡಗಿರುವುದು
ಚಿಂಚೋಳಿ ಕಲಭಾವಿ ಮಾರ್ಗದ ರಸ್ತೆಯ ಬದಿಯ ಹೊಲದಲ್ಲಿ ರೈತರು ಮುಂಗಾರಿನ ತೊಗರಿ ಹಾಗೂ ಉದ್ದು ಬಿತ್ತನೆಯಲ್ಲಿ ತೊಡಗಿರುವುದು    

ಚಿಂಚೋಳಿ: ತಾಲ್ಲೂಕಿನಲ್ಲಿ ಮುಂಗಾರು ಬಿತ್ತನೆ ಭರದಿಂದ ಸಾಗಿದ್ದು, ಈಗಾಗಲೇ ಶೇ 20ರಿಂದ 25ರಷ್ಟು ಬಿತ್ತನೆ ಪೂರ್ಣಗೊಂಡಿದೆ. ಐನಾಪುರ ಸುತ್ತಲಿನ ಪ್ರದೇಶದಲ್ಲಿ ಶೇ 50ಕ್ಕಿಂತ ಅಧಿಕ ಬಿತ್ತನೆ ನಡೆಸಿದರೆ ಉಳಿದ ಕಡೆ ಬಿತ್ತನೆ ಭರದಿಂದ ಸಾಗಿದೆ. ಬೀಜ ರಸಗೊಬ್ಬರದ ಕೊರತೆಯಿಲ್ಲ.

‘ತಾಲ್ಲೂಕಿನಲ್ಲಿ ತೊಗರಿ 60 ಸಾವಿರ ಹೆಕ್ಟೇರ್, ಉದ್ದು 13 ಸಾವಿರ ಹೆಕ್ಟೇರ್, ಹೆಸರು 7 ಸಾವಿರ ಹೆಕ್ಟೇರ್, ಸೋಯಾ 7ಸಾವಿರ ಹೆಕ್ಟೇರ್ ಇತರೆ 2 ಸಾವಿರ ಹೆಕ್ಟೇರ್ ಬಿತ್ತನೆ ಗುರಿ ಹಾಕಿಕೊಳ್ಳಲಾಗಿದೆ’ ಎಂದು ಸಹಾಯಕ ಕೃಷಿ ನಿರ್ದೇಶಕ ವೀರಶೆಟ್ಟಿ ರಾಠೋಡ್ ತಿಳಿಸಿದರು. ಜೂನ್ ತಿಂಗಳಲ್ಲಿ ವಾಡಿಕೆಗಿಂತಲೂ ಶೇ 10ರಷ್ಟು ಅಧಿಕ ಮಳೆಯಾಗಿದ್ದು ಬಿತ್ತನೆಗೆ ಪೂರಕವಾದ ತೇವಾಂಶ ಭೂಮಿಯಲ್ಲಿದೆ.

ಬೀಜ ದಾಸ್ತಾನು ಮತ್ತು ಮಾರಾಟ: ‘ತಾಲ್ಲೂಕಿಗೆ 6 ಸಾವಿರ ಕ್ವಿಂಟಲ್ ಸೋಯಾ ಬೀಜ ಪೂರೈಕೆಯಾಗಿದ್ದು, 4450 ಕ್ವಿಂಟಲ್ ಮಾರಾಟವಾಗಿದೆ. 4 ರೈತ ಸಂಪರ್ಕ ಕೇಂದ್ರಗಳಲ್ಲಿ ಇನ್ನೂ 1550 ಕ್ವಿಂಟಲ್ ಬೀಜ ದಾಸ್ತಾನಿದೆ.

ADVERTISEMENT


ತೊಗರಿ ಬೀಜ 400 ಕ್ವಿಂಟಲ್ ಪೂರೈಕೆಯಾಗಿದ್ದು, 300 ಕ್ವಿಂಟಲ್ ಮಾರಾಟವಾಗಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ತಲಾ 25 ಕ್ವಿಂಟಲ್ ದಾಸ್ತಾನಿದ್ದು ಇನ್ನೂ ತೊಗರಿ ಬೀಜ ಪೂರೈಕೆಯಾಗಲಿದೆ. 70 ಕ್ವಿಂಟಲ್ ಉದ್ದು, 50 ಕ್ವಿಂಟಲ್ ಹೆಸರು ಬೀಜ ಪೂರೈಕೆಯಾಗಿದ್ದು ಉದ್ದು 60 ಕ್ವಿಂಟಲ್, ಹೆಸರು 40 ಕ್ವಿಂಟಲ್ ಮಾರಾಟವಾಗಿದೆ. ರೈತ ಸಂಪರ್ಕ ಕೇಂದ್ರಗಳಲ್ಲಿ ಉದ್ದು, ಹೆಸರು ತಲಾ 10 ಕ್ವಿಂಟಲ್ ದಾಸ್ತಾನಿದೆ’ ಎಂದರು.

ಕಳೆ ನಿಯಂತ್ರಣಕ್ಕಾಗಿ ಹೊಲದಲ್ಲಿ ಬಿತ್ತನೆ ನಡೆಸಿ 25 ಗಂಟೆಗಳ ಒಳಗಾಗಿ ಪೆಂಡಿಮಿಥಲೀನ್ ಲೀಟರ್ ನೀರಿಗೆ 2 ಗ್ರಾಂ ಹಾಕಿ ಸಿಂಪಡಣೆ ಮಾಡಬೇಕು, ಬೆಳೆ 25 ದಿನ ಕಳೆದ ಮೇಲೆ ಇಂಜೊಥೋಪೈರ್ 2.5 ಎಂಎಲ್ ಪ್ರತಿ ಲೀಟರ್ ನೀರಿಗೆ ಹಾಕಿ ಬೆಳೆಯ ಸಾಲಿನಲ್ಲಿ (ಕಳೆ 2 ಎಲೆ ಇದ್ದಾಗ) ಸಿಂಪಡಣೆ ಮಾಡಬೇಕು. ಇದರಿಂದ ಕಳೆ ನಿಯಂತ್ರಿಸಲು ಸಾಧ್ಯವಾಗುತ್ತದೆ.

ಡಿಎಪಿ ಕೊರತೆ: ‘ತಾಲ್ಲೂಕಿನಲ್ಲಿ ಡಿಎಪಿ ರಸಗೊಬ್ಬರ ಕೊರತೆಯಾಗಿದೆ. ಪ್ರಸಕ್ತ ವರ್ಷ ಅಲ್ಪ ಪ್ರಮಾಣದ ಡಿಎಪಿ ಆಮದು ಮಾಡಿಕೊಂಡಿದ್ದು ದಾಸ್ತಾನು ಖಾಲಿಯಾಗಿದೆ. ರೈತರು ಡಿಎಪಿಗೆ ಬದಲಾಗಿ ಸಂಯುಕ್ತ ರಸಗೊಬ್ಬರ ಬಳಸಬಹುದಾಗಿದೆ’ ಎಂದು ರಸಗೊಬ್ಬರ ಮಾರಾಟಗಾರ ನಾರಾಯಣ ಕೊಡ್ರಕಿ ತಿಳಿಸಿದರು.

ನ್ಯಾನೋ ಡಿಎಪಿಗೆ ಸಲಹೆ: ರೈತರು ಡಿಎಪಿ ರಸಗೊಬ್ಬರಕ್ಕಾಗಿ ಕಾಯದೇ ನ್ಯಾನೊ ಡಿಎಪಿ (ದ್ರವ) ಬಳಕೆ ಮಾಡಬೇಕು. 10 ಎಂಎಲ್ ಡಿಎಪಿ 1 ಲೀಟರ್ ನೀರಿನಲ್ಲಿ ಮಿಶ್ರಣಮಾಡಿ ಅದರಲ್ಲಿ ಬಿತ್ತನೆ ಬೀಜ ಹಾಕಿ 20 ನಿಮಿಷ ನೆನೆಸಿಟ್ಟು ತೆಗೆದು ನೆರಳಿನಲ್ಲಿ ಒಣಗಿಸಬೇಕು.

ಬಿತ್ತನೆ ವೇಳೆಯಲ್ಲಿ ಸಾಫ್ ಫೌಡರ್ ಪ್ರತಿ ಕೆಜಿ ಬೀಜಕ್ಕೆ 2 ಗ್ರಾಂನಂತೆ ಬೀಜಗಳಿಗೆ ಲೇಪಿಸಿ ಬೀಜೋಪಚಾರ ನಡೆಸಬೇಕು ಹೀಗೆ ಮಾಡಿದರೆ ರಸಗೊಬ್ಬರ ಹಾಕುವ ಅಗತ್ಯವಿರುವುದಿಲ್ಲ. ಬೆಳೆ 25 ದಿನ ಆದ ಮೇಲೆ ಮತ್ತೆ ಡಿಎಪಿ ನ್ಯಾನೋ ಸಿಂಪಡಣೆ ಮಾಡಬೇಕು ಹೀಗೆ ಮಾಡುವುದರಿಂದ ರೈತರು ಹಾಕಿದ ಗೊಬ್ಬರ ಬೆಳೆಗೆ ಲಭಿಸಿ ಹೆಚ್ಚು ಇಳುವರಿ ಬರುತ್ತದೆ ಎಂದು ವೀರಶೆಟ್ಟಿ ರಾಠೋಡ್ ತಿಳಿಸಿದರು.

ವೆಂಕಟೇಶ ದುಗ್ಗನ್ ತಹಶೀಲ್ದಾರ್‌
ಕಳೆದ ವರ್ಷದಲ್ಲಿ ಎಫ್‌ಐಡಿ ಮಾಡಿಸಿದ 22495 ರೈತರಿಗೆ ಬೆಳೆಹಾನಿ ಬಾಬಿನಲ್ಲಿ ₹19.83 ಕೋಟಿ ಬೆಳೆ ವಿಮೆ ನೋಂದಾಯಿಸಿದ 16000 ರೈತರಿಗೆ ₹7.81 ಕೋಟಿ ವಿಮೆ ಪರಿಹಾರ ಬಂದಿದೆ. ಎಲ್ಲರೂ ಕಡ್ಡಾಯವಾಗಿ ಎಫ್‌ಐಡಿ ಮಾಡಿಸಬೇಕು
- ವೆಂಕಟೇಶ ದುಗ್ಗನ್ ತಹಶೀಲ್ದಾರ ಚಿಂಚೋಳಿ
ವೀರಶೆಟ್ಟಿ ರಾಠೋಡ್ ಸಹಾಯಕ ಕೃಷಿ ನಿರ್ದೇಶಕ
ರೈತರು ಬಿತ್ತನೆಗೆ ಮೊದಲು ಬೀಜಗಳಿಗೆ ಸ್ಯಾಫ್ ಪೌಡರ್ ಬಳಸಿ ಬೀಜೋಪಚಾರ ನಡೆಸಿ ನೆರಳಿನಲ್ಲಿ ಒಣಗಿಸಿ ಬಿತ್ತನೆ ನಡೆಸಬೇಕು ಜತೆಗೆ ಡಿಎಪಿಗೆ ಪರ್ಯಾಯವಾಗಿ ಸಂಯುಕ್ತ ರಸಗೊಬ್ಬರ ಬಳಸಿದರೆ ಭೂಮಿಗೆ ಹೆಚ್ಚಿನ ಪೋಷಕಾಂಶ ಲಭಿಸುತ್ತವೆ
-ವೀರಶೆಟ್ಟಿ ರಾಠೋಡ್ ಸಹಾಯಕ ಕೃಷಿ ನಿರ್ದೆಶಕರು ಚಿಂಚೋಳಿ
ಶಂಕರಗೌಡ ಅಲ್ಲಾಪುರ ರೈತ
ನಮಗೆ ಡಿಎಪಿ ಸಿಗದ ಕಾರಣ ನೆರೆ ರಾಜ್ಯ ತೆಲಂಗಾಣದಿಂದ ಹೆಚ್ಚು ಹಣ ನೀಡಿ ಡಿಎಪಿ ರಸಗೊಬ್ಬರ ತಂದು ಬಿತ್ತನೆ ನಡೆಸುತ್ತಿದ್ದೇವೆ. ಚಿಂಚೋಳಿಯಲ್ಲಿ ಡಿಎಪಿ ರೈತರಿಗೆ ಸಿಗುತ್ತಿಲ್ಲ. ರೈತರು ರಸಗೊಬ್ಬರಕ್ಕಾಗಿ ಅಲೆಯುವಂತಾಗಿದೆ
ಶಂಕರಗೌಡ ಅಲ್ಲಾಪುರ ಚಿಂಚೋಳಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.