ADVERTISEMENT

ಕಲಬುರಗಿಯಲ್ಲಿ ಸೈಬರ್ ಕ್ರೈಮ್ ಲ್ಯಾಬ್ ಸ್ಥಾಪನೆ: ಎಡಿಜಿಪಿ ಅಲೋಕ್ ಕುಮಾರ್

ಕೆಕೆಆರ್‌ಡಿಬಿಯಿಂದ ₹ 58.84 ಲಕ್ಷ ಅನುದಾನ ಮಂಜೂರಾತಿ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2024, 4:41 IST
Last Updated 20 ನವೆಂಬರ್ 2024, 4:41 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಕಲಬುರಗಿ: ನಗರದ ಹೊರವಲಯದ ನಾಗನಹಳ್ಳಿಯಲ್ಲಿ ಇರುವ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ (ಪಿಟಿಸಿ) ₹ 58.84 ಲಕ್ಷ ವೆಚ್ಚದಲ್ಲಿ ಸೈಬರ್ ಕ್ರೈಮ್ ಲ್ಯಾಬ್ ಸ್ಥಾಪಿಸಲಾಗುವುದು ಎಂದು ಪೊಲೀಸ್ ತರಬೇತಿ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.

‘ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯು (ಕೆಕೆಆರ್‌ಡಿಬಿ) ಕಲಬುರಗಿ ಪಿಟಿಸಿಯಲ್ಲಿ ಅತ್ಯಾಧುನಿಕ ಸೈಬರ್ ಲ್ಯಾಬ್ ಮಂಜೂರು ಮಾಡಿದೆ ಎಂಬುದನ್ನು ಹಂಚಿಕೊಳ್ಳಲು ಸಂತಸವಾಗುತ್ತಿದೆ. ಈ ಅತ್ಯಾಧುನಿಕ ಸೈಬರ್ ಲ್ಯಾಬ್ ಉತ್ತರ ಕರ್ನಾಟಕದಲ್ಲೇ ಪ್ರಥಮವಾಗಲಿದೆ. ಇದು ಪೊಲೀಸ್ ಅಧಿಕಾರಿಗಳಿಗೆ ತರಬೇತಿ ನೀಡುವುದು ಮಾತ್ರವಲ್ಲದೆ ಈ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವರಲ್ಲಿನ ಕೌಶಲಗಳನ್ನು ಸುಧಾರಿಸುವಲ್ಲಿ ತರಬೇತಿಯೂ ನೀಡಲಿದೆ’ ಎಂದು ‘ಎಕ್ಸ್‌’ನಲ್ಲಿ ಬರೆದುಕೊಂಡಿದ್ದಾರೆ. ಮಂಜೂರಾತಿಯ ಪ್ರತಿಗಳನ್ನೂ ಹಂಚಿಕೊಂಡಿದ್ದಾರೆ.

ಸೈಬರ್ ಅಪರಾಧಗಳ ತನಿಖೆ ಮತ್ತು ಸಾಕ್ಷ್ಯ ಸಂಗ್ರಹಣೆ ಬಗ್ಗೆ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗೆ ತರಬೇತಿ ನೀಡಲು, ಸಾರ್ವಜನಿಕರಲ್ಲಿ ಸೈಬರ್ ಅಪರಾಧಗಳು ಸಂಭವಿಸದಂತೆ ಜಾಗೃತಿ ಮೂಡಿಸಲು ಸೈಬರ್ ಕ್ರೈಮ್ ಲ್ಯಾಬ್ ಪ್ರಾರಂಭಿಸಲು ಉದ್ದೇಶಿಸಲಾಗಿದೆ.

ADVERTISEMENT

ಕೆಕೆಆರ್‌ಡಿಬಿ ತನ್ನ ಪ್ರಾದೇಶಿಕ ನಿಧಿಯಡಿ ₹ 150 ಕೋಟಿ ನಿಗದಿಪಡಿಸಿದೆ. ಅದರಲ್ಲಿನ ₹ 58.84 ಲಕ್ಷ ಅನುದಾನವನ್ನು ಸೈಬರ್ ಕ್ರೈಮ್‌ ಲ್ಯಾಬ್‌ಗಾಗಿ ನೀಡಲು ಮಂಡಳಿಯು ಸಮ್ಮತಿ ನೀಡಿದೆ.

2024–25ನೇ ಸಾಲಿನ ಮಂಡಳಿಯ ಪ್ರಾದೇಶಿಕ ನಿಧಿಯ ಉಪಯೋಜನೆ ಅಡಿಯಲ್ಲಿ ಸೈಬರ್ ಕ್ರೈಮ್ ಲ್ಯಾಬ್‌ ಕಾಮಗಾರಿಗೆ ₹ 58.85 ಲಕ್ಷ ಅನುದಾನದ ಮೊತ್ತ, ಮುಂದೆ ನಡೆಯುವ ಮಂಡಳಿಯ ಸಭೆಯಲ್ಲಿ ಘಟನೋತ್ತರ ಮಂಜೂರಾತಿ ಪಡೆಯುವ ಷರತ್ತಿಗೆ ಒಳಪಟ್ಟು ಮಂಜೂರಾತಿ ನೀಡಿ, ಅನುಷ್ಠಾನಕ್ಕಾಗಿ ಪೊಲೀಸ್ ತರಬೇತಿ ಮಹಾವಿದ್ಯಾಲಯಕ್ಕೆ ವಹಿಸಿ ಆದೇಶಿಸಲಾಗಿದೆ ಎಂದು ಆದೇಶ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಅನುದಾನ ಹಂಚಿಕೆ ಹೇಗೆ? ಪಿಟಿಸಿ ಕೇಂದ್ರದಲ್ಲಿ ಸೈಬರ್ ಕ್ರೈಮ್ ಲ್ಯಾಬ್ ನಿರ್ಮಾಣಕ್ಕೆ ಅಗತ್ಯವಾದ ಮೂಲಸೌಕರ್ಯಗಳ ಕಾಮಗಾರಿಗೆ ₹16.70 ಲಕ್ಷ ಮೊತ್ತ ನಿಗದಿಪಡಿಸಲಾಗಿದೆ. ಇದರ ಮೇಲ್ವಿಚಾರಣೆಯಲ್ಲಿ ಜಿಲ್ಲಾಧಿಕಾರಿಯವರಿಗೆ ವಹಿಸಲಾಗಿದೆ.

ಲ್ಯಾಬ್‌ಗೆ ಅಗತ್ಯವಾದ ಸಾಫ್ಟ್‌ವೇರ್ ಹಾಗೂ ಉಪಕರಣಗಳ ಸರಬರಾಜು ಮಾಡಲು ₹ 42.15 ಲಕ್ಷ ಮೊತ್ತವನ್ನು ಅಂದಾಜಿಸಲಾಗಿದೆ. ಇದರ ಮೇಲ್ವಿಚಾರಣೆಯನ್ನು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ನೀಡಲಾಗಿದೆ.

ಮೂರು ವರ್ಷಗಳ ಅವಧಿಗೆ ಬೆಲ್ಕಸಾಫ್ಟ್‌ ಎವಿಡೆನ್ಸ್ ಸೆಂಟರ್ ಎಕ್ಷ್‌ ಫೊರೆನ್ಸಿಕ್‌, ಮೂರು ವರ್ಷಗಳ ಅವಧಿಗೆ ಸುಮುರಿ–ಇಂಟೆಲ್ ಫೊರೆನ್ಸಿಕ್‌ ವರ್ಕ್‌ಸ್ಟೇಷನ್, ಬಾಕ್ಸ್‌ಕಾಪ್ ಮಿನಿ, ಹಾರ್ಡ್‌ಡಿಸ್ಕ್‌, ಡೆಸ್ಕ್‌ಟಾಪ್, ಸಿಸಿ ಟಿವಿ, ಫ್ಲಾಶ್‌ಡ್ರೈವ್ ಸೇರಿದಂತೆ ಇತರೆ ಉಪಕರಣಗಳು ಹಾಗೂ ಸಾಫ್ಟ್‌ವೇರ್‌ಗಳಿಗಾಗಿ ₹ 42.15 ಲಕ್ಷ ಅನುದಾನ ಬಳಕೆಯಾಗಲಿದೆ ಎಂದು ಆದೇಶ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಅಲೋಕ್ ಕುಮಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.