ಕಾಳಗಿ: ಇಲ್ಲಿನ ಸುಗೂರ ರಸ್ತೆ ಬದಿಯಲ್ಲಿ ನಿರ್ಮಿಸಿರುವ ಕುಡಿಯುವ ಶುದ್ಧ ನೀರಿನ ಘಟಕ ಹೇಳೋರು– ಕೇಳೋರೇ ಇಲ್ಲದೆ ಹಾಳು ಬಿದ್ದಿದೆ. ಘಟಕದ ಕಾಮಗಾರಿ ಬಹುತೇಕ ಪೂರ್ಣಗೊಂಡಿದೆ. ಆದರೆ, ಮೇಲ್ವಿಚಾರಣೆ ಕೊರತೆಯಿಂದ ಜನರಿಗೆ ಇನ್ನೂ ಶುದ್ಧ ನೀರು ಸಿಕ್ಕಿಲ್ಲ.
2015ರ ಜೂನ್ ತಿಂಗಳಲ್ಲಿ ಪಟ್ಟಣದಲ್ಲಿ ಉಲ್ಬಣಿಸಿದ ವಾಂತಿ– ಭೇದಿಗೆ ಜನರು ತತ್ತರಿಸಿಹೋದರು. ಕೆಲವರು ಪ್ರಾಣ ಕಳೆದುಕೊಂಡರು. ಸ್ಥಳೀಯರು ದಿನನಿತ್ಯ ಕುಡಿಯುವ ಅಶುದ್ಧ ನೀರೇ ಈ ಘಟನೆಗೆ ಕಾರಣವೆಂದು ನೀರಿನ ಗುಣಮಟ್ಟದ ಪರೀಕ್ಷಾ ವರದಿ ಬಹಿರಂಗಪಡಿಸಿತ್ತು.
ಈ ಹಿನ್ನೆಲೆಯಾಗಿ ಕ್ಷೇತ್ರದ ಶಾಸಕ ಡಾ.ಉಮೇಶ ಜಾಧವ್ ಅವರು ಕುಡಿಯುವ ನೀರು ಸರಬರಾಜಿನ ಹಳೆ ಪದ್ಧತಿ ಕೈಬಿಟ್ಟು, 9 ಹೊಸ ಕೊಳವೆ ಬಾವಿ ಗಳನ್ನು ಕೊರೆಯಿಸಿ ಕೆಲ ವಾರ್ಡಿನ ಜನರಿಗೆ ಕುಡಿಯಲು ಶುದ್ಧ ನೀರು ಕಲ್ಪಿಸಿಕೊಟ್ಟರು. ಜನನಿಬಿಡ ಪ್ರದೇಶದಲ್ಲಿ ಕುಡಿಯಲು ನಾಲ್ಕು ಶುದ್ಧ ನೀರಿನ ಘಟಕಗಳನ್ನು ಸ್ಥಾಪಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು.
ಶಾಸಕರ ಕೋರಿಕೆಯಂತೆ ಊರೊಳಗಿನ ಮುತ್ಯಾನಕಟ್ಟೆಯಲ್ಲಿ ಶುದ್ಧ ನೀರಿನ ಘಟಕ ಸಿದ್ಧವಾಗಿದ್ದು ಜನರಿಗೆ ಅನುಕೂಲವಾಗಿದೆ. ಅದರಂತೆ, ರಾಮನಗರ ಪ್ರದೇಶದ ಜನತೆಗೆ ಅನುಕೂಲವಾಗಲು ಕಳೆದ ವರ್ಷ ಸುಗೂರ ರಸ್ತೆ ಬದಿಯಲ್ಲಿ ಶುದ್ಧ ನೀರಿನ ಘಟಕದ ನಿರ್ಮಾಣಕ್ಕೆ ಚಾಲನೆ ದೊರಕಿದೆ. ವಿದ್ಯುತ್ ಸಂಪರ್ಕ, ಯಂತ್ರ ಜೋಡಣೆ, ಸಿಂಟೆಕ್ಸ್ ಟ್ಯಾಂಕ್ ಅಳವಡಿಕೆ ಸೇರಿದಂತೆ ಬಹುತೇಕ ಕಾಮಗಾರಿ ಪೂರ್ಣಗೊಂಡಿದೆ. ಆದರೆ, ಇಲ್ಲಿಯ ವರೆಗೂ ಹನಿ ಶುದ್ಧ ನೀರು ಸಿಗದಾಗಿದೆ ಎನ್ನುವುದು ಜನರ ಗೋಳು.
‘ಮೇಲ್ವಿಚಾರಣೆ ಮತ್ತು ನಿರ್ವಹಣೆಯ ಕೊರತೆ ಕಾಡುತ್ತಿದೆ. ಈ ನೀರಿನ ಘಟಕದ ಬಾಗಿಲು, ಕಲ್ಲಿನ ಕಟ್ಟೆ ಕಿತ್ತುಹೋಗುವ ಸ್ಥಿತಿಯಲ್ಲಿವೆ. ಸುತ್ತ ಗಿಡಗಂಟಿ ಬೆಳೆಯುತ್ತಿದೆ. ಗಾಳಿಗೆ ಬಾಗಿಲು ತೆರೆದು ಕೊಳ್ಳುತ್ತಿದೆ. ಹಂದಿ, ನಾಯಿ, ದನಕರು ಒಳಗಡೆ ಓಡಾಡಿ ಹೊರಬರುತ್ತಿವೆ’ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದರು.
‘ಇದಕ್ಕೆ ಸಂಬಂಧಿಸಿದವರು ಯಾರು? ಯಾರಿಗೆ ಗೋಳು ಹೇಳಬೇಕು ಎಂಬುದೇ ತಿಳಿಯುತ್ತಿಲ್ಲ. ಈ ಮಾರ್ಗದ ತಹಶೀಲ್ದಾರ್ ಕಚೇರಿ, ಕಾಲೇಜು, ಪೊಲೀಸ್ ಠಾಣೆ ಮತ್ತು ತಾಂಡಾಗಳ ಕಡೆಗೆ ಓಡಾಡುವ ಜನರು ಹಾಗೂ ವಿದ್ಯಾರ್ಥಿಗಳು ಹೆಚ್ಚಾಗಿದ್ದಾರೆ. ಕೂಡಲೇ ಗ್ರಾಮ ಪಂಚಾಯಿತಿ ಗಮನಹರಿಸಿ ಶುದ್ಧ ನೀರು ಪೂರೈಸಬೇಕು ಎಂಬುದು ಜನರ ಒತ್ತಾಯ.
ಈ ಕುರಿತು ಪ್ರತಿಕ್ರಿಯಿಸಿದ ಪಿಡಿಒ ಸಿದ್ದಣ್ಣ ಬರಗಲಿ, ‘ಹಿಂದೆ ಘಟಕದ ಸುತ್ತಲೂ ಸ್ವಚ್ಛತೆ ಕೈಗೊಂಡಿದ್ದೆವು. ಇದರ ನಿರ್ಮಾಣ ಹೊಣೆ ಹೊತ್ತವರು ನನಗೆ ಕೀಲಿಕೈ ನೀಡದೆ ಹಸ್ತಾಂತರ ಮಾಡಿ ಹೋಗಿದ್ದಾರೆ. ಆಮೇಲೆ ಬಂದು ಕೀಲಿ ಕೈ ನೀಡುವುದಾಗಿ ಹೇಳಿರುವ ಅವರು ಇದೂವರೆಗೂ ಮುಖ ತೋರಿಸಿಲ್ಲ’ ಎಂದರು.
–ಗುಂಡಪ್ಪ ಕರೆಮನೋರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.