ADVERTISEMENT

ಕಲಬುರಗಿ | ಕಾಂಗ್ರೆಸ್ ಕಾರ್ಯಕರ್ತರಿಂದ ಹಲ್ಲೆ: ದತ್ತಾತ್ರೇಯ ಪಾಟೀಲ ಆರೋಪ

​ಪ್ರಜಾವಾಣಿ ವಾರ್ತೆ
Published 10 ಮೇ 2023, 1:52 IST
Last Updated 10 ಮೇ 2023, 1:52 IST
ದತ್ತಾತ್ರೇಯ ಪಾಟೀಲ
ದತ್ತಾತ್ರೇಯ ಪಾಟೀಲ   

ಕಲಬುರಗಿ: ‘ಬಿಜೆಪಿಗೆ ಇರುವ ಜನ ಬೆಂಬಲವನ್ನು ನೋಡಿ ಕಾಂಗ್ರೆಸ್ ಕಾರ್ಯಕರ್ತರಿಗೆ ಹತಾಸೆಗೊಳಗಾದ ಕಾಂಗ್ರೆಸ್ ಕಾರ್ಯಕರ್ತರು ನನ್ನ ವಿರುದ್ಧ ಇಲ್ಲ ಸಲ್ಲದ ಆಪಾದನೆ ಮಾಡುತ್ತಿದ್ದಾರೆ. ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಕಲಬುರಗಿ ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ದತ್ತಾತ್ರೇಯ ಪಾಟೀಲ ರೇವೂರ ಆರೋಪಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸೋಮವಾರ ರಾತ್ರಿ ಸಂಗಮೇಶ್ವರ ಕಾಲೊನಿಯಲ್ಲಿ ನಮ್ಮ ಪಕ್ಷದ ಮುಖಂಡ ಶಿವಾನಂದ ಹುಲಿ ಎಂಬ ವೀರಶೈವ ಸಮಾಜದ ವ್ಯಕ್ತಿ ಪ್ರಚಾರ ಮುಗಿಸಿ ಹೋಗುತ್ತಿದ್ದ ಸಂದರ್ಭದಲ್ಲಿ ಅವರನ್ನು ಬೆನ್ನಟ್ಟಿದ ಕಾಂಗ್ರೆಸ್ ಕಾರ್ಯಕರ್ತರು ಥಳಿಸಿದ್ದಾರೆ. ಇದು ಇಡೀ ವೀರಶೈವ ಲಿಂಗಾಯತ ಸಮಾಜಕ್ಕೆ ಮಾಡಿದ ಅವಮಾನವಾಗಿದೆ’ ಎಂದು ಟೀಕಿಸಿದರು.

‘ಅಧಿಕಾರ ಸಿಗುವ ಮೊದಲೇ ಕಾಂಗ್ರೆಸ್ ಕಾರ್ಯಕರ್ತರು ಗೂಂಡಾ ಪ್ರವೃತ್ತಿ ಪ್ರದರ್ಶಿಸಿದ್ದು, ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಸಮುದಾಯಗಳ ಮಧ್ಯೆ ವೈಷಮ್ಯ ಬೆಳೆಯಲಿದೆ. ಕಲಬುರಗಿಯಲ್ಲಿ ಮಹಿಳೆಯರು ಹೊರಬರಲೂ ಹಿಂಜರಿಯಬೇಕಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಅರುಣಕುಮಾರ ಪಾಟೀಲ ಕೊಡಲ ಹಂಗರಗಾ ಮಾತನಾಡಿ, ‘ಸಮಾಜದ ಮುಖಂಡ ಶಿವಾನಂದ ಅವರನ್ನು ವಿನಾಕಾರಣ ಥಳಿಸಿದ್ದಾರೆ. ಇದನ್ನು ಖಂಡಿಸುತ್ತೇನೆ. ನ್ಯಾಯಸಮ್ಮತ ಚುನಾವಣೆ ನಡೆಸಲು ಚುನಾವಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಅಂಬಾರಾಯ ಅಷ್ಠಗಿ, ಮಾದಿಗ ಸಮಾಜದ ಮುಖಂಡ ರಾಜು ವಾಡೇಕರ್, ಮಂಜುನಾಥ ನಾಲವಾರಕರ್ ಗೋಷ್ಠಿಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.