ಅಫಜಲಪುರ: ದೇವಲ ಗಾಣಗಾಪುರದ ದತ್ತ ಮಹಾರಾಜರ ದೇವಸ್ಥಾನದ ಹುಂಡಿ ಹಣ ಎಣಿಕೆಯ ವೇಳೆ ‘ಪುನೀತ್ ರಾಜ್‌ಕುಮಾರ್ ಸರ್ ಅವರನ್ನು ಮರಳಿ ಕಳುಹಿಸು ಪ್ರಭುವೆ’ ಎಂದು ಪುನೀತ್ ಅಭಿಮಾನಿಯೊಬ್ಬರು ಬರೆದ ಹರಕೆಯ ಚೀಟಿ ದೊರೆತಿದೆ.
ದಿವಂಗತ ಪುನೀತ್ ರಾಜ್‌ಕುಮಾರ್ ಅವರು ಮತ್ತೆ ಕನ್ನಡ ನಾಡಿನಲ್ಲಿ ಜನ್ಮವೆತ್ತಿ ಬರಲಿ ಎಂಬ ಹರಕೆಯ ಚೀಟಿ ಬರೆದು ಹುಂಡಿಗೆ ಹಾಕಿದ್ದು ದೇವಸ್ಥಾನದ ಸಿಬ್ಬಂದಿಯ ಕೈಗೆ ಬರುತ್ತಿದ್ದಂತೆ ಅವರೆಲ್ಲ ಭಾವುಕರಾದರು ಎಂದು ದೇವಸ್ಥಾನ ಸಮಿತಿ ತಿಳಿಸಿದೆ.
₹67.43 ಲಕ್ಷ ಸಂಗ್ರಹ: ‘ದತ್ತ ಮಹಾರಾಜರ ದೇವಸ್ಥಾನದಲ್ಲಿ ಕಳೆದ 4 ತಿಂಗಳಲ್ಲಿ ಭಕ್ತರು ದೇಣಿಗೆಯಾಗಿ ನೀಡಿದ ಹುಂಡಿಯಲ್ಲಿ ₹67.43 ಲಕ್ಷ ನಗದು, 10 ಗ್ರಾಂ. ಚಿನ್ನ ಹಾಗೂ 358 ಗ್ರಾಂ. ಬೆಳ್ಳಿ ಸಂಗ್ರಹವಾಗಿದೆ’ ಎಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ನಾಮದೇವ ರಾಠೋಡ ಹೇಳಿದರು.
ವರ್ಷದಲ್ಲಿ ನಾಲ್ಕು ಬಾರಿ ಹುಂಡಿ ಎಣಿಕೆ ನಡೆಯುತ್ತದೆ. ಕೋವಿಡ್ ಕಾರಣ ಕಳೆದ ವರ್ಷ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು. ಈ ವರ್ಷ ಸಂಖ್ಯೆ ಹೆಚ್ಚಾಗಿದ್ದು, ಹುಂಡಿ ಸಂಗ್ರಹ ಕೂಡ ಏರಿಕೆಯಾಗಿದೆ ಎಂದರು.
ಎಣಿಕೆ ಕಾರ್ಯದಲ್ಲಿ ತಹಶೀಲ್ದಾರ್ ಸಂಜುಕುಮಾರ ದಾಸರ, ಜಿಲ್ಲಾಧಿಕಾರಿ ಕಚೇರಿಯ ಶಿರಸ್ತೇದಾರರು ಶಿವಕಾಂತಮ್ಮ, ಗೀತಾ, ಗೌತಮ್ ಗಾಯಕ್ವಾಡ್, ಮಹೇಶ್, ಕಂದಾಯ ನಿರೀಕ್ಷಕರಾದ ಚಂದ್ರಶೇಖರ್, ಬಸವರಾಜ್ ಸಿಂಪಿ, ಸಂಜೀವ್ ಕುಮಾರ್ ಅತ್ತನೂರು, ದೇವಸ್ಥಾನ ಸಿಬ್ಬಂದಿ ದತ್ತು ನಿಂಬರ್ಗಿ, ರಮೇಶ್, ಸಂತೋಷ್ ಮಾಡಿಹಾಳ, ಧನರಾಜ್, ಬ್ಯಾಂಕ್ ಸಿಬ್ಬಂದಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.