ADVERTISEMENT

ಕಲಬುರಗಿ | ಡೇ–ನಲ್ಮ್ ಯೋಜನೆ: ಸಾಲಸೌಲಭ್ಯಕ್ಕಾಗಿ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 5 ಜುಲೈ 2024, 16:04 IST
Last Updated 5 ಜುಲೈ 2024, 16:04 IST

ಕಲಬುರಗಿ: ಡೇ-ನಲ್ಮ್ ಯೋಜನೆಯಡಿ 2024–25ನೇ ಸಾಲಿಗೆ ಸ್ವಯಂ ಉದ್ಯೋಗ ಹಾಗೂ ಇನ್ನಿತರ ಉಪ ಘಟಕದಡಿ ಸಾಲ ಸೌಲಭ್ಯ ಪಡೆಯಲು ಮಹಾನಗರ ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಪಾಲಿಕೆಯ ಉಪ ಆಯುಕ್ತರು ತಿಳಿಸಿದ್ದಾರೆ.

ನಿರುದ್ಯೋಗಿ ಯುವಕ, ಯುವತಿಯರು ಸ್ವಯಂ ಉದ್ಯೋಗ, ಗುಂಪು ಉದ್ಯೋಗ, ಸ್ವ-ಸಹಾಯ ಗುಂಪುಗಳ ಕ್ರೆಡಿಟ್ ಲಿಂಕೇಜ್ ಹಾಗೂ ಸ್ವ–ಸಹಾಯ ಗುಂಪುಗಳ ರಚನೆ ಕಾರ್ಯಕ್ರಮಗಳಡಿ ಸಾಲ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.

ಸ್ವಯಂ ಉದ್ಯೋಗ (ಎಸ್‌ಇಪಿ–ಐ) ಉಪ ಯೋಜನೆಯಡಿ ಭೌತಿಕ ಗುರಿ 150 ಇದ್ದು, ಬ್ಯಾಂಕಿನಿಂದ ಗರಿಷ್ಠ ₹ 2 ಲಕ್ಷ ಸಾಲ ಹಾಗೂ ಬ್ಯಾಂಕ್ ಸಾಲದ ಮೇಲೆ ಬಡ್ಡಿದರ ಶೇ 7ಕ್ಕಿಂತ ಮೇಲ್ಪಟ್ಟು ವಿಧಿಸುವ ಬಡ್ಡಿಗೆ ಸಹಾಯಧನ ನೀಡಲಾಗುತ್ತದೆ.

ADVERTISEMENT

ಗುಂಪು ಉದ್ಯೋಗ (ಎಸ್‌ಇಪಿ–ಜಿ) ಉಪ ಯೋಜನೆಯಡಿ ಭೌತಿಕ ಗುರಿ 12 ಇದ್ದು, ಬ್ಯಾಂಕಿನಿಂದ ಗರಿಷ್ಠ ₹ 10 ಲಕ್ಷ ಸಾಲ ಹಾಗೂ ಬ್ಯಾಂಕ್ ಸಾಲಕ್ಕೆ ಶೇ 7ಕ್ಕಿಂತ ಮೇಲ್ಪಟ್ಟು ವಿಧಿಸುವ ಬಡ್ಡಿಗೆ ಸಹಾಯಧನ ನೀಡಲಾಗುತ್ತದೆ.

ಸ್ವ–ಸಹಾಯ ಗುಂಪುಗಳಿಗೆ ಬ್ಯಾಂಕ್ ಕ್ರೆಡಿಟ್ ಲಿಂಕೇಜ್ ಸಾಲ ಉಪ ಯೋಜನೆಯಡಿ ಭೌತಿಕ ಗುರಿ 187 ಇದ್ದು, ₹ 1 ಲಕ್ಷದಿಂದ ₹ 5 ಲಕ್ಷದವರೆಗೆ ಕ್ರೆಡಿಟ್ ಲಿಂಕೇಜ್ ಸಾಲ ನೀಡಲಾಗುತ್ತದೆ. ಶೇ 7ಕ್ಕಿಂತ ಮೇಲ್ಪಟ್ಟು ಬ್ಯಾಂಕ್‌ ವಿಧಿಸಿದ ಬಡ್ಡಿಯ ಮೇಲೆ ಸಹಾಯಧನ ಬಿಡುಗಡೆ ಮಾಡಲಾಗುತ್ತದೆ. ಸಾಲ ಮರುಪಾವತಿ ಅವಧಿ 3ರಿಂದ 7 ವರ್ಷ ಇರುತ್ತದೆ.

ಸ್ವ–ಸಹಾಯ ಗುಂಪು ರಚನೆ ಉಪ ಯೋಜನೆಯಡಿ ಭೌತಿಕ ಗುರಿ 375 ಇದ್ದು, ಗುಂಪು ರಚನೆಯಾದ 6 ತಿಂಗಳ ನಂತರ ₹ 10 ಸಾವಿರ ಆವರ್ತಕ ನಿಧಿ ನೀಡಲಾಗುತ್ತದೆ. ಗುಂಪಿನಲ್ಲಿ ಆಹಾರ ಸಂಸ್ಕರಣ ಚಟುವಟಿಕೆಯಲ್ಲಿ ತೊಡಗುವ ಸದಸ್ಯರಿಗೆ ₹ 40 ಸಾವಿರವರೆಗೆ ಸೀಡಿಂಗ್ ಅನುದಾನ ನೀಡಲಾಗುತ್ತದೆ. ಅರ್ಹರು ಪಾಲಿಕೆಯ ಕಚೇರಿಯಿಂದ ಜುಲೈ 15ರಿಂದ ಅರ್ಜಿ ನಮೂನೆಯನ್ನು ಪಡೆದು ಅವಶ್ಯಕ ದಾಖಲೆಗಳೊಂದಿಗೆ ಆಗಸ್ಟ್ 5ರೊಳಗೆ ದ್ವಿಪ್ರತಿಯಲ್ಲಿ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.