ADVERTISEMENT

ಅಧಿಕಾರಿಗಳ ಸಭೆ ನಡೆಸಿದ ಡಿಸಿ, ಏ. 24ರಂದು ಜಿಲ್ಲೆಗೆ ಪ್ರಧಾನಿ ಭೇಟಿ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2022, 9:07 IST
Last Updated 5 ಮಾರ್ಚ್ 2022, 9:07 IST
ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಯಶವಂತ ಗುರುಕರ್ ಮಾತನಾಡಿದರು. ಮೋನಾ ರೋಟ್, ಡಾ.ದಿಲೀಷ್ ಶಶಿ, ಡಾ.ವೈ.ಎಸ್. ರವಿಕುಮಾರ್, ಸ್ನೇಹಲ್ ಲೋಖಂಡೆ ಇದ್ದರು
ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಯಶವಂತ ಗುರುಕರ್ ಮಾತನಾಡಿದರು. ಮೋನಾ ರೋಟ್, ಡಾ.ದಿಲೀಷ್ ಶಶಿ, ಡಾ.ವೈ.ಎಸ್. ರವಿಕುಮಾರ್, ಸ್ನೇಹಲ್ ಲೋಖಂಡೆ ಇದ್ದರು   

ಕಲಬುರಗಿ: ರಾಷ್ಟ್ರೀಯ ಪಂಚಾಯತ್ ರಾಜ್ ದಿನ ಅಂಗವಾಗಿ ಗ್ರಾಮ ಸಭೆಯಲ್ಲಿ ಭಾಗವಹಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಏಪ್ರಿಲ್ 24ರಂದು ಕಲಬುರಗಿ ತಾಲ್ಲೂಕಿನ ಭೀಮಳ್ಳಿ ಗ್ರಾಮ ಪಂಚಾಯತಿಗೆ ಭೇಟಿ ನೀಡುವ ಸಾಧ್ಯತೆ ಇದೆ. ಹೀಗಾಗಿ ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ಶನಿವಾರ ತಮ್ಮ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಫೂರ್ವಭಾವಿ ಸಭೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ಏ 24ರಂದು ಶಿವಮೊಗ್ಗ, ವಿಜಯನಗರ ಅಥವಾ ಕಲಬುರಗಿ ಜಿಲ್ಲೆ ಪೈಕಿ ಯಾವುದಾದರೂ ಒಂದು ಜಿಲ್ಲೆಯನ್ನು ಪ್ರವಾಸಕ್ಕೆ ಪ್ರಧಾನಮಂತ್ರಿ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಯಿದೆ. ಒಂದು ವೇಳೆ ನಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿಕೊಂಡಲ್ಲಿ ಭೀಮಳ್ಳಿ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ ಎಂದರು.

ಅಂದು ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಅಂಗವಾಗಿ ಪ್ರಧಾನಮಂತ್ರಿ ಭೀಮಳ್ಳಿಯಿಂದಲೇ ವರ್ಚುವಲ್ ಮೂಲಕ ದೇಶದ 2.50 ಲಕ್ಷ ಗ್ರಾಮ ಪಂಚಾಯಿತಿಗಳ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಜೊತೆಗೆ ಸ್ಥಳೀಯ ಚುನಾಯಿತ ಪ್ರತಿನಿಧಿಗಳೊಂದಿಗೂ ಸಂವಾದ ನಡೆಸಲಿದ್ದಾರೆ. ಈ ನಿಟ್ಟಿನಲ್ಲಿ ಇದೇ ಮಾರ್ಚ್ 8 ಅಥವಾ 9ರಂದು ಪ್ರಧಾನಮಂತ್ರಿಗಳ ಭದ್ರತಾ ತಂಡ ಜಿಲ್ಲೆಗೆ ಆಗಮಿಸಲಿದೆ ಎಂದರು.

ADVERTISEMENT

ವಿವಿಧ ಇಲಾಖೆಗಳ ಕಾರ್ಯಕ್ರಮ ಅನುಷ್ಠಾನ, ಉದ್ಘಾಟನೆಯಂತಹ ಕಾರ್ಯಕ್ರಮಗಳ ಪೈಕಿ ಪ್ರಧಾನಮಂತ್ರಿ ಅವರಿಂದ ಚಾಲನೆ ನೀಡಬಹುದಾದ ಜನಪರ ಕಾರ್ಯಕ್ರಮಗಳಿದ್ದಲ್ಲಿ ಅದರ ಕ್ರಿಯಾ ಯೋಜನೆಯನ್ನು ಒಂದು ವಾರದೊಳಗೆ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು. ಹೊಸ ಕ್ರಿಯಾತ್ಮಕ, ನಾವೀನ್ಯತೆವುಳ್ಳ ಕಾರ್ಯಕ್ರಮ ಆಯೋಜಿಸಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಕೂಡಲೇ ಈ ಮೂರು ಗ್ರಾಮಗಳಿಗೆ ತೆರಳಿ ತಮ್ಮ ಇಲಾಖೆ ವ್ಯಾಪ್ತಿಯ ಪ್ರದೇಶದಲ್ಲಿ ಏನಾದರೂ ಸಮಸ್ಯೆಗಳಿದ್ದಲ್ಲಿ ಬಗೆಹರಿಸಬೇಕು. ಕ್ಲಿಷ್ಟಕರ ಸಮಸ್ಯೆಗಳಿದ್ದಲ್ಲಿ ತಮ್ಮ ಗಮನಕ್ಕೆ ತರಬೇಕು ಎಂದು ಯಶವಂತ ಗುರುಕರ್ ತಿಳಿಸಿದರು.

ದೇಶದ ಪ್ರಧಾನಮಂತ್ರಿ ಭೇಟಿ ನೀಡುತ್ತಿರುವ ಕಾರಣ ಭೀಮಳ್ಳಿ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಬೇಕು. ಈ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದರು.

ಹಳ್ಳಿಯ ಮನೆ-ಮನೆಗೆ ಭೇಟಿ ಕೊಡಿ:

ಜಿಲ್ಲಾ ಪಂಚಾಯತ್ ಸಿಇಒ ಡಾ.ದಿಲೀಷ್ ಶಶಿ ಮಾತನಾಡಿ, ಭೀಮಳ್ಳಿ ಗ್ರಾಮ ಪಂಚಾಯಿತಿಗೆ ಒಳಪಡುವ ಭೀಮಳ್ಳಿ, ಕೆರಿಭೋಸಗಾ ಹಾಗೂ ಜಾಫರಾಬಾದ ಗ್ರಾಮದ ಪ್ರತಿ ಮನೆಗೆ ಕಂದಾಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಇನ್ನಿತರ ಇಲಾಖೆಗಳ ಅಧಿಕಾರಿಗಳು ಭೇಟಿ ನೀಡಿ ಸರ್ಕಾರಿ ಯೋಜನೆಗಳು ತಲುಪಿರುವ ಬಗ್ಗೆ ಖಾತ್ರಿ ಮಾಡಿಕೊಳ್ಳಬೇಕು. ಪಿಂಚಣಿ, ಪಡಿತರ ಚೀಟಿ, ಕುಡಿಯುವ ನೀರು, ಆಸ್ತಿ ತೆರಿಗೆ ಕಾರ್ಡ್ ವಿತರಣೆ, ರಸ್ತೆ, ಶೌಚಾಲಯ, ಬ್ಯಾಂಕಿಂಗ್ ಸೇವೆ, ಬೀದಿ ದೀಪ, ಬಸ್ ವ್ಯವಸ್ಥೆ, ಶಾಲೆ, ಆರೋಗ್ಯ, ಅಂಗನವಾಡಿ ಕೇಂದ್ರ ಸುಧಾರಣೆಯಂತಹ ಸಮಸ್ಯೆಗಳಿದ್ದಲ್ಲಿ ಕೂಡಲೆ ಬಗೆಹರಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಇದಲ್ಲದೆ ಜಿಲ್ಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಯೋಜನೆಗಳನ್ನು ಶೇ 100ರಷ್ಟು ಪ್ರಗತಿ ಸಾಧಿಸಬೇಕು. ವಿಶೇಷವಾಗಿ ಫಲಾನುಭವಿ ಅಧಾರಿತ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡಿ ಮಾರ್ಚ್ ಒಳಗಾಗಿ ಅನುಷ್ಠಾನಗೊಳಿಸಬೇಕು. ವಿವಿಧ ಇಲಾಖೆಗಳು, ಕಚೇರಿ ಮುಖ್ಯಸ್ಥರು ಈ ಹಳ್ಳಿಗಳಿಗೆ ಭೇಟಿ ನೀಡಿ ತಮ್ಮ ಇಲಾಖೆಯ ಯೋಜನೆಗಳು ತಳ ಹಂತದಲ್ಲಿ ಅನುಷ್ಠಾನವಾಗಿವೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದರು.

ಕಲಬುರಗಿ ನಗರ ಪೊಲೀಸ್ ಕಮಿಷನರ್ ಡಾ.ವೈ.ಎಸ್.ರವಿಕುಮಾರ್ ಮಾತನಾಡಿ, ಪ್ರಧಾನಮಂತ್ರಿಗಳ ಪ್ರವಾಸ ಕಾರ್ಯಕ್ರಮ ಅಂತಿಮವಾದಲ್ಲಿ ಮುಖ್ಯಮಂತ್ರಿ, ಹಿರಿಯ ಸಚಿವರು, ಮುಖ್ಯ ಕಾರ್ಯದರ್ಶಿಗಳು ಭೇಟಿ ನೀಡುವುದರಿಂದ ಹೆಚ್ಚಿನ ಭದ್ರತೆ ಮತ್ತು ಸಾರಿಗೆ ಸೇವೆ ಒದಗಿಸಲು ನೆರೆಯ ಜಿಲ್ಲೆಗಳ ಸಿಬ್ಬಂದಿ ಮತ್ತು ಸಾರಿಗೆ ಸೇವೆ ಪಡೆಯಬೇಕಾಗುತ್ತದೆ. 8-10 ದಿನಗಳ ಮುನ್ನವೆ ಪ್ರಧಾನಮಂತ್ರಿಗಳ ಕ್ಷಣ-ಕ್ಷಣದ ಕಾರ್ಯಕ್ರಮಗಳ ಪಟ್ಟಿ ಅಂತಿಮಗೊಂಡಲ್ಲಿ ಅನುಕೂಲವಾಗಲಿದೆ. ಕೊನೆ ಹಂತದಲ್ಲಿ ಕಾರ್ಯಕ್ರಮ ಸೇರ್ಪಡೆ ಮಾಡುವುದು, ಭದ್ರತೆಯ ದೃಷ್ಟಿಯಿಂದ ಸಮಂಜಸವಲ್ಲ. ಎಲ್ಲಾ ಕಾರ್ಯಕ್ರಮಗಳು ಎಸ್.ಪಿ.ಜಿ. ತಂಡ ಮತ್ತು ಪಿ.ಎಂ.ಒ ಕಚೇರಿಯೆ ಅಂತಿಮಗೊಳಿಸಿ ನಿರ್ದೇಶನ ನೀಡುವುದರಿಂದ ಅದರಂತೆ ಎಲ್ಲಾ ಅಧಿಕಾರಿಗಳು ಕಾರ್ಯನುಷ್ಠಾನಕ್ಕೆ ಸಿದ್ಧರಿರಬೇಕಾಗುತ್ತದೆ ಎಂದರು.

ಸಭೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಲೋಖಂಡೆ, ಉಪವಿಭಾಗಾಧಿಕಾರಿ ಮೋನಾ ರೋಟ್ ಸೇರಿದಂತೆ ವಿವಿಧ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.