ADVERTISEMENT

55 ಮಂದಿಗೆ ₹22.27 ಲಕ್ಷ ದಂಡ

ಜಿಲ್ಲೆಯಲ್ಲಿ ಕೆಪಿಎಂಇ ಕಾಯ್ದೆ ಉಲ್ಲಂಘನೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 3 ಜುಲೈ 2024, 16:02 IST
Last Updated 3 ಜುಲೈ 2024, 16:02 IST
ಫೌಜಿಯಾ ತರನ್ನುಮ್
ಫೌಜಿಯಾ ತರನ್ನುಮ್   

ಕಲಬುರಗಿ: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮ–2007ರ ಕಾಯ್ದೆ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ 55 ಕ್ಲಿನಿಕ್ ಮತ್ತು ವೈದ್ಯರಿಗೆ ಒಟ್ಟು ₹22.27 ಲಕ್ಷ ದಂಡ ಕಟ್ಟಲು ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಆದೇಶಿಸಿದ್ದಾರೆ.

ಕೆ.ಪಿ.ಎಂ.ಇ. ಕಾಯ್ದೆ ಉಲ್ಲಂಘನೆ ಹಿನ್ನೆಲೆಯಲ್ಲಿ 42 ಜನರಿಗೆ ತಲಾ ₹50 ಸಾವಿರ, 5 ಮಂದಿಗೆ ತಲಾ ₹20 ಸಾವಿರ, 5 ಜನರಿಗೆ ತಲಾ ₹5 ಸಾವಿರ ಹಾಗೂ ಇಬ್ಬರಿಗೆ ತಲಾ ₹1 ಸಾವಿರ ದಂಡ ವಿಧಿಸಲು ಮಂಗಳವಾರ ಕೆ.ಪಿ.ಎಂ.ಇ ಜಿಲ್ಲಾ ಮಟ್ಟದ ನೋಂದಣಿ ಮತ್ತು ಕುಂದುಕೊರತೆ ಪ್ರಾಧಿಕಾರ ಸಭೆಯಲ್ಲಿ ನಿರ್ಧರಿಸಲಾಗಿದೆ.

ಇನ್ನುಳಿದಂತೆ 6 ವೈದ್ಯರಿಗೆ ಖಡಕ್ ಎಚ್ಚರಿಕೆ ನೀಡಲಾಗಿದೆ. ದಂಡ ಕಟ್ಟಲು ತಪ್ಪಿದಲ್ಲಿ ನ್ಯಾಯಾಲಯದಲ್ಲಿ ಮೊಕ್ಕದಮೆ ಹೂಡಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಎಚ್ಚರಿಸಿದ್ದಾರೆ.

ADVERTISEMENT

ಕಳೆದ ಡಿಸೆಂಬರ್‌ನಿಂದ ಜೂನ್ ಅಂತ್ಯದವರೆಗೆ ಉ‍ಪವಿಭಾಗಾಧಿಕಾರಿ ನೇತೃತ್ವದ ತಪಾಸಣಾ ತಂಡ ನಿಯಮಿತ ದಾಳಿ ನಡೆಸಿತ್ತು. ಈ ವೇಳೆ ಒಟ್ಟು 61 ಕ್ಲಿನಿಕ್ ಮತ್ತು ವೈದ್ಯರ ಮೇಲೆ ಕೆ.ಪಿ.ಎಂ.ಇ. ಕಾಯ್ದೆ ಉಲ್ಲಂಘನೆ ಹಿನ್ನೆಲೆಯಲ್ಲಿ ಇಲಾಖಾ ಎಫ್.ಐ.ಆರ್. ದಾಖಲಿಸಿ ಡಿ.ಸಿ. ಅಧ್ಯಕ್ಷತೆಯ ಕುಂದುಕೊರತೆ ಪ್ರಾಧಿಕಾರದ ಮುಂದೆ ಹಾಜರಾಗುವಂತೆ ನೋಟಿಸ್ ನೀಡಲಾಗಿತ್ತು. ಅದರಂತೆ ಮಂಗಳವಾರ ಸಭೆಗೆ ಬಂದಿದ್ದ ವೈದ್ಯರ ಅಹವಾಲು ಆಲಿಸಿದ ಜಿಲ್ಲಾಧಿಕಾರಿ ದಂಡ ವಿಧಿಸಿದ್ದಾರೆ.

ಸಭೆಯಲ್ಲಿ ಡಿ.ಎಚ್.ಒ. ಡಾ.ರತಿಕಾಂತ ಸ್ವಾಮಿ, ಆಳಂದ ತಹಶೀಲ್ದಾರ್‌ ಯಲ್ಲಪ್ಪ ಸುಬೇದಾರ, ಜಿಲ್ಲಾ ಆಯೂಷ್ ಅಧಿಕಾರಿ ಡಾ.ಗಿರಿಜಾ ನಿಗ್ಗುಡಗಿ ಸೇರಿದಂತೆ ಇನ್ನಿತರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.