ADVERTISEMENT

ಕಲಬುರಗಿ: 'ನಿತ್ಯ 2 ಲಕ್ಷ ಲೀಟರ್ ನೀರು ಪೂರೈಕೆಗೆ ಜಿಲ್ಲಾಧಿಕಾರಿ ತಾಕೀತು'

ಜಯದೇವ ಆಸ್ಪತ್ರೆಗೆ ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಭೇಟಿ, ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2024, 7:03 IST
Last Updated 19 ಜೂನ್ 2024, 7:03 IST
ಕಲಬುರಗಿಯ ಜಿಮ್ಸ್‌ ಕಟ್ಟಡದಲ್ಲಿನ ಜಯದೇವ ಆಸ್ಪತ್ರೆಗೆ ಮಂಗಳವಾರ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಭೇಟಿ ನೀಡಿ ಸಿಬ್ಬಂದಿಯಿಂದ ಮಾಹಿತಿ ಪಡೆದರು
ಕಲಬುರಗಿಯ ಜಿಮ್ಸ್‌ ಕಟ್ಟಡದಲ್ಲಿನ ಜಯದೇವ ಆಸ್ಪತ್ರೆಗೆ ಮಂಗಳವಾರ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಭೇಟಿ ನೀಡಿ ಸಿಬ್ಬಂದಿಯಿಂದ ಮಾಹಿತಿ ಪಡೆದರು   

ಕಲಬುರಗಿ: ನಗರದ ಗುಲಬರ್ಗಾ ವೈದ್ಯಕೀಯ ವಿಜ್ಞಾನ ಸಂಸ್ಥೆಯ (ಜಿಮ್ಸ್) ಕಟ್ಟಡದಲ್ಲಿನ ಜಯದೇವ ಹೃದ್ರೋಗ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ನೀರಿಲ್ಲದೆ ಶಸ್ತ್ರಚಿಕಿತ್ಸೆ ಮುಂದೂಡಲಾಗುತ್ತಿದೆ ಎಂದು ವರದಿಯಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಿ, ‘ಆಸ್ಪತ್ರೆಗೆ ನಿತ್ಯ 2 ಲಕ್ಷ ಲೀಟರ್ ನೀರು ಟ್ಯಾಂಕರ್ ಮೂಲಕ ಪೂರೈಸಬೇಕು’ ಎಂದು ಪಾಲಿಕೆ ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದರು.

ಡಿಎಚ್ಒ ಡಾ.ರತಿಕಾಂತ ಸ್ವಾಮಿ ಅವರೊಂದಿಗೆ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ವಿವಿಧ ವಾರ್ಡ್‌ಗಳಲ್ಲಿನ ರೋಗಿಗಳ ಆರೋಗ್ಯ ವಿಚಾರಿಸಿದರು. ಜಿಮ್ಸ್ ನಿರ್ದೇಶಕ ಡಾ.ಉಮೇಶ ಎಸ್.ಆರ್. ಮತ್ತು ಜಯದೇವ ಆಸ್ಪತ್ರೆಯ ಡಾ.ವೀರೇಶ ಪಾಟೀಲ ಅವರಿಂದ ನೀರು ಪೂರೈಕೆ ಕುರಿತು ಮಾಹಿತಿ ಪಡೆದರು. ಆಸ್ಪತ್ರೆಯಲ್ಲಿ ಶುದ್ಧ ನೀರಿಲ್ಲದೆ ಶಸ್ತಚಿಕಿತ್ಸೆ ಮುಂದೂಡುವ ವಿಚಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಫೌಜಿಯಾ ತರನ್ನುಮ್ ಅವರು, ‘ನದಿ ಮೂಲಗಳಿಂದ ಕಲಷಿತ ನೀರು ಬರುತ್ತಿರುವುದು ನೀರು ಸರಬರಾಜಿನಲ್ಲಿ ಸ್ವಲ್ಪ ವ್ಯತ್ಯಯವಾಗಿದೆ. ನಿತ್ಯ 8ರಿಂದ 9 ಟ್ಯಾಂಕರ್‌ಗಳ ಮೂಲಕ ಅಗತ್ಯವಾದಷ್ಟು ನೀರು ಪೂರೈಸಲಾಗುತ್ತಿದೆ. ಜಿಮ್ಸ್, ಜಯದೇವ ಹಾಗೂ ಪಾಲಿಕೆ ಅಧಿಕಾರಗಳ ಜತೆಗೆ ಸಭೆ ನಡೆಸಿ, ರೋಗಿಗಳ ಸಮಸ್ಯೆಗಳನ್ನು ಆಲಿಸಿದ್ದೇನೆ. ನಿತ್ಯ 2 ಲಕ್ಷ ನೀರು ಸರಬರಾಜು ಮಾಡುವಂತೆಯೂ ಪಾಲಿಕೆಗೆ ಸೂಚಿಸಿದ್ದೇನೆ. ಕ್ಯಾಥ್‌ಲಾಬ್‌ ಶಸ್ತ್ರಚಿಕಿತ್ಸೆ ಸೇರಿ ಯಾವುದೇ ರೀತಿಯ ಪರಿಣಾಮ ಬೀರಿಲ್ಲ’ ಎಂದರು.

ADVERTISEMENT

‘ಜಯದೇವ ಒಂದು ಮಹಡಿಯಲ್ಲಿ ನಡೆಯುತ್ತಿರುವುದರಿಂದ ದಿನಕ್ಕೆ 300ಕ್ಕೂ ಅಧಿಕ ಹೊರರೋಗಿಗಳು ಬರುತ್ತಾರೆ. ಸಾಕಷ್ಟು ಒತ್ತಡ ಬೀಳುತ್ತಿದೆ. ಮುನ್ನೆಚ್ಚರಿಕೆ ದೃಷ್ಟಿಯಿಂದ ಕೆಲ ಶಸ್ತ್ರಚಿಕಿತ್ಸೆಗಳು ಮುಂದೂಡಿಕೆ ಮಾಡಿದ್ದಾರೆ. ಉಳಿದಂತೆ ಎಲ್ಲ ಆರೋಗ್ಯ ಸೇವೆಗಳು ಸಮಸ್ಯೆ ಇಲ್ಲದೆ ನಡೆಯುತ್ತಿವೆ. ವೈದ್ಯರಿಗೆ ಅಗತ್ಯವಾದ ಎಲ್ಲ ರೀತಿಯ ಸಹಕಾರವನ್ನು ನೀಡಲಾಗುವುದು’ ಎಂದು ಭರವಸೆ ನೀಡಿದರು.

ಜಯದೇವ ಆಸ್ಪತ್ರೆಯ ಡಾ.ವೀರೇಶ ಪಾಟೀಲ ಮಾತನಾಡಿ, ‘ನಮ್ಮಲ್ಲಿ ಎಲ್ಲ ವಿಧದ ಆರೋಗ್ಯ ಸೇವೆಗಳು ನಡೆಯುತ್ತಿದ್ದು, ತುರ್ತು ಶಸ್ತ್ರಚಿಕಿತ್ಸೆಯ ವ್ಯವಸ್ಥೆಯೂ ಇದೆ. ಆಯ್ದ ಸರ್ಜರಿಗಳನ್ನು ಮೂರು ದಿನ ಮುಂದೂಡಿಕೆಯಾಗಿದೆ. ಉಳಿದ ಸೇವೆಗಳಲ್ಲಿ ವ್ಯತ್ಯಯ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಬೆಣ್ಣೆತೊರಾ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಪಾಲಿಕೆಯಿಂದ ಪೂರೈಕೆಯಾಗುತ್ತಿರುವ ನಲ್ಲಿ ನೀರಿನಲ್ಲಿ ಮಣ್ಣು ಮಿಶ್ರಿತ‌ ಅಂಶ ಹೆಚ್ಚಾಗಿದೆ. ಶಸ್ತ್ರಚಿಕಿತ್ಸೆಗೆ ಸ್ವಚ್ಛ ನೀರು ಅವಶ್ಯಕತೆ ಇರುವ ಕಾರಣ ಸೇವೆಯಲ್ಲಿ ವ್ಯತ್ಯಯವಾಗಿದೆ. ಇದಕ್ಕೆ ನೀರಿನ ಅಭಾವ ಎಂದು ತಪ್ಪಾಗಿ ಭಾವಿಸಬಾರದು’ ಎಂದು ವೈದ್ಯರು ಹೇಳಿದರು.

ಪಾಲಿಕೆ ಉಪ ಆಯುಕ್ತ ಮಾಧವ ಗಿತ್ತೆ, ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.