ADVERTISEMENT

₹ 1 ಸಾವಿರ ಕೋಟಿ ಕೃಷಿ ಸಾಲ ವಿತರಣೆ ಗುರಿ: ಸೋಮಶೇಖರ ಗೋನಾಯಕ

ಕಲಬುರಗಿ–ಯಾದಗಿರಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಸೋಮಶೇಖರ ಗೋನಾಯಕ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 30 ಜೂನ್ 2024, 6:29 IST
Last Updated 30 ಜೂನ್ 2024, 6:29 IST
ಸೋಮಶೇಖರ ಗೋನಾಯಕ
ಸೋಮಶೇಖರ ಗೋನಾಯಕ   

ಕಲಬುರಗಿ: ‘ಕಲಬುರಗಿ–ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಷ್ಟದ ಸುಳಿಯಿಂದ ಹೊರಬಂದು, ಲಾಭದತ್ತ ಮುನ್ನಡೆಯುತ್ತಿದ್ದು, ಈ ಬಾರಿ ರೈತರಿಗೆ ₹ 1 ಸಾವಿರ ಕೋಟಿ ಕೃಷಿ ಸಾಲ ನೀಡುವ ಗುರಿ ಹೊಂದಲಾಗಿದೆ’ ಎಂದು ಬ್ಯಾಂಕ್ ಅಧ್ಯಕ್ಷ ಸೋಮಶೇಖರ ಗೋನಾಯಕ ಪ್ರಕಟಿಸಿದರು.

ನಗರದ ಬ್ಯಾಂಕ್ ಕೇಂದ್ರ ಕಚೇರಿ ಸಭಾಂಗಣದಲ್ಲಿ ಶನಿವಾರ ಆಡಳಿತ ಮಂಡಳಿ ಸಭೆಯ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರವು ₹ 64.70 ಕೋಟಿ ಬಡ್ಡಿ ಸಹಾಯಧನ ನೀಡಿದ್ದರಿಂದ ನಷ್ಟದ ಸುಳಿಯಿಂದ ಬ್ಯಾಂಕು ಹೊರಬಂದಿದೆ. ಹೆಚ್ಚಿನ ಬಡ್ಡಿ ನೀಡಿ ಠೇವಣಿ ಇಟ್ಟುಕೊಂಡಿದ್ದ ಸಿದ್ಧಸಿರಿ ಸೌಹಾರ್ದ ಸಹಕಾರಿ ಹಾಗೂ ಬೀರೇಶ್ವರ ಸಹಕಾರಿ ಬ್ಯಾಂಕಿನ ಹಣವನ್ನು ಬಡ್ಡಿ ಸಹಿತ ತೀರಿಸಲಾಗಿದೆ. ಇದರಿಂದಾಗಿ ಬ್ಯಾಂಕಿನ ಮೇಲಿದ್ದ ದೊಡ್ಡ ಹೊರೆ ಇಳಿದಂತಾಗಿದೆ. ಕಳೆದ ಹಣಕಾಸು ವರ್ಷದಲ್ಲಿ ಬ್ಯಾಂಕು ₹ 4.1 ಕೋಟಿ ಲಾಭ ಗಳಿಸಿದೆ’ ಎಂದರು.

‘ದೀರ್ಘಾವಧಿಯ ಸುಸ್ತಿದಾರರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಂಡಿದ್ದರಿಂದ 514 ಸುಸ್ತಿದಾರರಿಂದ ರಾಜ್ಯ ಸರ್ಕಾರದ ಬಡ್ಡಿ ಮನ್ನಾ ಯೋಜನೆಯಡಿ ₹ 17.67 ಕೋಟಿಯನ್ನು ವಸೂಲಿ ಮಾಡಲಾಗಿದೆ. ಇನ್ನೂ ₹ 20 ಕೋಟಿ ಕೃಷಿ ಸಾಲ ವಸೂಲಾತಿ ಮಾಡಬೇಕಿದೆ. ಸುಮಾರು ₹ 6 ಕೋಟಿ ಕೃಷಿಯೇತರ ಸುಸ್ತಿ ಸಾಲವನ್ನು ವಸೂಲಿ ಮಾಡಲು ಕ್ರಮ ಕೈಗೊಳ್ಳಲಾಗಿದ್ದು, ಶೇ 14ರ ಬದಲು ಶೇ 10ರ ಬಡ್ಡಿ ದರದಲ್ಲಿ ಏಕಕಂತಿನಲ್ಲಿ ಸಾಲ ಪಾವತಿಸಲು ಮೂರು ತಿಂಗಳವರೆಗೆ ಅವಕಾಶ ನೀಡಲಾಗಿದೆ’ ಎಂದು ವಿವರಿಸಿದರು.

ADVERTISEMENT

‘ಮಾರ್ಚ್ 31ರ ಅವಧಿಗೆ ಕೊನೆಗೊಂಡಂತೆ ಕಳೆದ ಒಂದು ವರ್ಷದಲ್ಲಿ ಎರಡೂ ಜಿಲ್ಲೆಗಳ 1,56,504 ರೈತರಿಗೆ ₹ 729.86 ಕೋಟಿ ಬೆಳೆ ಸಾಲ ವಿತರಿಸಲಾಗಿದೆ. ಅಪೆಕ್ಸ್ ಬ್ಯಾಂಕ್ ಹಾಗೂ ನಬಾರ್ಡ್‌ಗೆ ಮರುಪಾವತಿಸಬೇಕಿದ್ದ ₹ 587 ಕೋಟಿ ಸಾಲವನ್ನು ಬಡ್ಡಿಯೊಂದಿಗೆ ಪಾವತಿಸಿ ಆರ್ಥಿಕ ಶಿಸ್ತನ್ನು ಪಾಲಿಸಲಾಗಿದೆ’ ಎಂದರು.

‘ಬ್ಯಾಂಕು ರಾಜ್ಯ ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದಲ್ಲಿ ಸದಸ್ಯತ್ವ ಪಡೆದಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ₹ 500 ಕೋಟಿ ಠೇವಣಿ ಸಂಗ್ರಹ ಗುರಿ ಹೊಂದಿದೆ. ಮಧ್ಯಮಾವಧಿ ಸಾಲದ ಅಡಿ ಬಾಕಿ ಸುಸ್ತಿದಾರರ ವಿರುದ್ಧ ಕಾನೂನು ಕ್ರಮ ಜರುಗಿಸಿ 501 ಸುಸ್ತಿದಾರರಿಂದ ₹ 20.18 ಕೋಟಿ ಅಸಲನ್ನು ಮುಂದಿನ ದಿನಗಳಲ್ಲಿ ವಸೂಲಿ ಮಾಡಲಾಗುವುದು’ ಎಂದು ಹೇಳಿದರು.

ಬ್ಯಾಂಕ್ ನಿರ್ದೇಶಕರಾದ ಬಾಪುಗೌಡ ಪಾಟೀಲ ಸುರಪುರ, ಇಬ್ರಾಹಿಂ ಶಿರವಾಳ, ಸಿದ್ದರಾಮರೆಡ್ಡಿ ಕೌಳೂರ, ಅಜಿತ್ ಕುಮಾರ್ ಪಾಟೀಲ ಚಿಂಚೋಳಿ, ಪ್ರಧಾನ ವ್ಯವಸ್ಥಾಪಕ ಮುತ್ತುರಾಜ ಗೋಷ್ಠಿಯಲ್ಲಿದ್ದರು.

ರೈತರ ಹಣ ಬ್ಯಾಂಕ್‌ನಲ್ಲಿ ಸುರಕ್ಷಿತವಾಗಿರುತ್ತದೆ. ಹಣ ಹಿಂದಕ್ಕೆ ಪಡೆಯಲು ನೂಕು ನುಗ್ಗಲು ಮಾಡಬಾರದು. ಬ್ಯಾಂಕ್ ಮಾಲೀಕತ್ವದ ನಾಲ್ಕು ನಿವೇಶನಗಳಲ್ಲಿ ಶಾಖೆಯ ಕಟ್ಟಡ ನಿರ್ಮಿಸಲಾಗುವುದು
ಸೋಮಶೇಖರ ಗೋನಾಯಕ ಡಿಸಿಸಿ ಬ್ಯಾಂಕ್ ಅಧ್ಯಕ್ಷ
ರಾಜ್ಯ ಸರ್ಕಾರ ವಿಶೇಷವಾಗಿ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ನಮ್ಮ ಬ್ಯಾಂಕಿಗೆ ಬಡ್ಡಿ ಸಹಾಯಧನ ಸಾಲಮನ್ನಾ ಯೋಜನೆಯಡಿ ನೀಡಿದ ನೆರವಿನಿಂದ ಬ್ಯಾಂಕ್ ನಷ್ಟದ ಸುಳಿಯಿಂದ ಪಾರಾಗಿದೆ
ಸುರೇಶ ಸಜ್ಜನ್ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ

ಜನೌಷಧಿ ರಸಗೊಬ್ಬರ ಮಳಿಗೆ ಆರಂಭ’

ಡಿಸಿಸಿ ಬ್ಯಾಂಕ್ ಸಬಲೀಕರಣ ಮಾಡುವ ನಿಟ್ಟಿನಲ್ಲಿ ಬ್ಯಾಂಕಿಗೆ ಸೇರಿದ ಜಾಗಗಳಲ್ಲಿ ಪ್ರಧಾನಮಂತ್ರಿ ಜನೌಷಧಿ ಮಳಿಗೆಗಳು ರಸಗೊಬ್ಬರ ಮಾರಾಟ ಕಾಮನ್ ಸರ್ವಿಸ್ ಸೆಂಟರ್ ಪೆಟ್ರೋಲ್ ಬಂಕ್ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಬ್ಯಾಂಕಿನ ಅಧ್ಯಕ್ಷ ಸೋಮಶೇಖರ ಗೋನಾಯಕ ಹಾಗೂ ಬ್ಯಾಂಕ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆರ್. ಪವನಕುಮಾರ್ ತಿಳಿಸಿದರು. ಕಲಬುರಗಿ ಜಿಲ್ಲೆಯಲ್ಲಿ 112 ಹಾಗೂ ಯಾದಗಿರಿ ಜಿಲ್ಲೆಯಲ್ಲಿ 62 ಕಾಮನ್ ಸರ್ವಿಸ್ ಸೆಂಟರ್‌ಗಳನ್ನು ಆರಂಭಿಸಲಾಗುವುದು. ಇಲ್ಲಿ ರೈತರಿಗೆ ಬೇಕಾದ ಉತಾರ ಆಧಾರ್ ಕಾರ್ಡ್ ಸೇವೆಗಳು ರೈಲು ಬಸ್ ಟಿಕೆಟ್ ಬುಕಿಂಗ್ ಸೇರಿದಂತೆ ಇತರೆ ನಾಗರಿಕ ಸೇವೆಗಳನ್ನು ನೀಡಲಾಗುವುದು. ಬ್ಯಾಂಕ್ ಅಥವಾ ಪ್ರಾಥಮಿಕ ಪತ್ತಿನ ಸಹಕಾರ ಸಂಘಗಳ ಆವರಣದಲ್ಲಿ ಗೋದಾಮು ನಿರ್ಮಿಸಲು ₹ 2.5 ಕೋಟಿ ಸಾಲ ದೊರೆಯಲಿದ್ದು ಅದರಲ್ಲಿ ಶೇ 25ರಿಂದ 40ರಷ್ಟು ಸಬ್ಸಿಡಿ ದೊರೆಯಲಿದೆ ಎಂದರು. ಆಳಂದ ತಾಲ್ಲೂಕಿನ ಎಲೆನಾವದಗಿಯಲ್ಲಿ ಪೆಟ್ರೋಲ್ ಪಂಪ್ ಚಿಂಚೋಳಿ ತಾಲ್ಲೂಕಿನ ಕೋಡ್ಲಿಯಲ್ಲಿ ಜನೌಷಧಿ ಕೇಂದ್ರ ತೆರೆಯಲಾಗುತ್ತಿದೆ ಎಂದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.