ADVERTISEMENT

ವಾಡಿ | ಮೃತ್ಯುಕೂಪವಾದ ಹೆದ್ದಾರಿ ಮೇಲಿನ ಗುಂಡಿಗಳು

ರಾವೂರು ಕ್ರಾಸ್‌ನಿಂದ ಕಲಬುರಗಿವರೆಗೆ ಮಾರುದ್ಧ ಗುಂಡಿಗಳು

​ಪ್ರಜಾವಾಣಿ ವಾರ್ತೆ
Published 12 ಜೂನ್ 2024, 6:17 IST
Last Updated 12 ಜೂನ್ 2024, 6:17 IST
ರಾವೂರು ಕ್ರಾಸ್ ಹಾಗೂ ರಾವೂರು ಮಧ್ಯೆ ರಸ್ತೆ ಮೇಲೆ ಬೃಹತ್ ಗುಂಡಿಗಳು ಬಿದ್ದಿರುವುದು
ರಾವೂರು ಕ್ರಾಸ್ ಹಾಗೂ ರಾವೂರು ಮಧ್ಯೆ ರಸ್ತೆ ಮೇಲೆ ಬೃಹತ್ ಗುಂಡಿಗಳು ಬಿದ್ದಿರುವುದು    

ವಾಡಿ: ರಾವೂರು ಸಮೀಪದ ರಾವೂರು ಕ್ರಾಸ್‌ನಿಂದ ಕಲಬುರಗಿವರೆಗೂ ರಾಷ್ಟ್ರೀಯ ಹೆದ್ದಾರಿ ಮೇಲೆ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು ವಾಹನ ಸವಾರರ ಪಾಲಿಗೆ ಮೃತ್ಯುಕೂಪಗಳಾಗಿವೆ.

ರಾಷ್ಟ್ರೀಯ ಹೆದ್ದಾರಿ ಮೇಲೆ ವಾಹನಗಳು ಮಿತಿಮೀರಿದ ವೇಗದಲ್ಲಿ ಸಂಚರಿಸುತ್ತಿದ್ದು ಕ್ಷಣಕಾಲ ಮೈಮರೆತರೂ ಅಪಘಾತ ಖಚಿತ ಎನ್ನುವಂತಾಗಿದೆ.

ಹೆದ್ದಾರಿ ಮೇಲೆ ನಿತ್ಯ ಅಪಘಾತಗಳು ಸಂಭವಿಸುತ್ತಿದ್ದು ವಾಹನ ಸವಾರರು ಗಾಯಗೊಳ್ಳುತ್ತಿದ್ದಾರೆ. ಕಲಬುರಗಿ– ಗುತ್ತಿ ನಡುವಣ ರಾಷ್ಟ್ರೀಯ ಹೆದ್ದಾರಿ ಇದಾಗಿದ್ದು ನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಸುಮಾರು 35 ಕಿ.ಮೀ. ಡಾಂಬರು ರಸ್ತೆ ಮೇಲೆ ಬಿದ್ದಿರುವ ಗುಂಡಿಗಳಿಂದ ಈಗಾಗಲೇ ಹಲವು ಅಪಘಾತಗಳು ಜರುಗಿವೆ. ಯಾದಗಿರಿ– ಕಲಬುರಗಿ ಬಸ್‌ಗಳು, ಸಿಮೆಂಟ್ ಕಾರ್ಖಾನೆಗಳಿಗೆ ಕಚ್ಚಾ ಪದಾರ್ಥ ಪೂರೈಸುವ ಹಾಗೂ ಸಿಮೆಂಟ್ ಹೊತ್ತೊಯುವ ಬೃಹತ್ ಲಾರಿಗಳು, ಟ್ರಕ್ ಸೇರಿದಂತೆ ದೊಡ್ಡ ವಾಹನಗಳು, ಪ್ರಯಾಣಿಕರನ್ನು ಕೂಡಿಸಿಕೊಂಡು ತ್ರಿಚಕ್ರವುಳ್ಳ ಆಟೊಗಳು ಹಗಲು ರಾತ್ರಿಯೆನ್ನದೇ ಚಲಿಸುತ್ತವೆ. ರಸ್ತೆಯಲ್ಲಿ ಗುಂಡಿಗಳು ಮತ್ತಷ್ಟು ಹೆಚ್ಚಾಗುತ್ತಿದ್ದು, ವಾಹನ ಸವಾರರು ಪ್ರಾಣ ಕೈಯಲ್ಲಿ ಹಿಡಿದುಕೊಂಡು ಓಡಾಡುವಂತಾಗಿದೆ. ರಸ್ತೆ ನಿರ್ವಹಣೆ ಮರೆತ ಹೆದ್ದಾರಿ ಪ್ರಾಧಿಕಾರವು ಸಾರ್ವಜನಿಕರ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಎನ್ನುವುದು ಜನರ ಗಂಭೀರ ಆರೋಪವಾಗಿದೆ.

ADVERTISEMENT

‘ರಾತ್ರಿ ವೇಳೆಯಲ್ಲಿ ಬೈಕ್ ತೆಗೆದುಕೊಂಡು ಬರಬೇಕಾದರೆ ಗುಂಡಿಗಳ ಕಾರಣದಿಂದ ಪ್ರಾಣ ಕೈಯಲ್ಲಿ ಹಿಡಿದುಕೊಂಡು ಬರಬೇಕಾಗಿದೆ. ದೊಡ್ಡ ವಾಹನಗಳು ಎದುರು ಬಂದರೆ ಗುಂಡಿಗಳು ಕಾಣಿಸದೇ ಕಂದಕಕ್ಕೆ ಬೀಳುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ’ ಬೈಕ್ ಸವಾರರು. ಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚದೇ ಸ್ಥಳೀಯ ಕಲ್ಲುಗಳನ್ನು ಹಾಕಿ ಮುಚ್ಚಿ ಕಣ್ಣಿಗೆ ಮಣ್ಣೆರೆಚುವ ಕೆಲಸ ಅಧಿಕಾರಿಗಳು ಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.

ಕೂಡಲೇ ರಸ್ತೆ ಮೇಲಿನ ಗುಂಡಿಗಳು ಮುಚ್ಚಿ ರಸ್ತೆ ಅಪಘಾತಗಳು ತಪ್ಪಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ. 

ಕಲಬುರಗಿಯಿಂದ ರಾವೂರು ಕ್ರಾಸ್‌ವರೆಗೆ ಹದಗೆಟ್ಟ ಹೆದ್ದಾರಿ ದುರಸ್ತಿಗೆ ಟೆಂಡರ್ ಕರೆಯಲಾಗಿದೆ. ಚುನಾವಣೆ ಕಾರಣದಿಂದ ವಿಳಂಬವಾಗಿದೆ. ಒಂದು ವಾರದಲ್ಲಿ ಕೆಲಸ ಆರಂಭವಾಗುವ ಭರವಸೆಯಿದೆ. ತಾತ್ಕಾಲಿಕ ದುರಸ್ತಿಗೆ ಅನುದಾನ ಕೊರತೆ ಇದೆ.
ಮಹ್ಮದ್ ಇಬ್ರಾಹಿಂ, ಇಇ ,ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ರಾವೂರು ಕ್ರಾಸ್ ಹಾಗೂ ರಾವೂರು ಮಧ್ಯೆ ರಸ್ತೆ ಮೇಲೆ ಬೃಹತ್ ಗುಂಡಿಗಳು ಬಿದ್ದಿರುವುದು
ರಾವೂರು ಕ್ರಾಸ್ ಹಾಗೂ ರಾವೂರು ಮಧ್ಯೆ ರಸ್ತೆ ಮೇಲೆ ಬೃಹತ್ ಗುಂಡಿಗಳು ಬಿದ್ದಿರುವುದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.