ADVERTISEMENT

ತಾಂಡಾಗಳಲ್ಲಿ ದೀಪಾವಳಿ ಸಂಭ್ರಮ

ಗೋದನ್ ಪೂಜೆ ಮೆರುಗು, ಕಾಡಿನಿಂದ ಹೂವು ತಂದು ಹಂಚಿದ ಯುವತಿಯರು

​ಪ್ರಜಾವಾಣಿ ವಾರ್ತೆ
Published 30 ಅಕ್ಟೋಬರ್ 2019, 10:40 IST
Last Updated 30 ಅಕ್ಟೋಬರ್ 2019, 10:40 IST
ಚಿಂಚೋಳಿಯ ಗಂಗೂ ನಾಯಕ ತಾಂಡಾದಲ್ಲಿ ಮಂಗಳವಾರ ಯುವತಿಯರು ದೀಪಾವಳಿ ಅಂಗವಾಗಿ ಗೋದನ ಪೂಜೆಗೆ ಕಾಡಿಗೆ ಹೋವುಗಳನ್ನು ಹೊತ್ತು ಬರುವಾಗ ತಾಂಡಾದ ಪ್ರಮುಖರು ವಾದ್ಯಮೇಳದೊಂದಿಗೆ ಬರಮಾಡಿಕೊಂಡರು
ಚಿಂಚೋಳಿಯ ಗಂಗೂ ನಾಯಕ ತಾಂಡಾದಲ್ಲಿ ಮಂಗಳವಾರ ಯುವತಿಯರು ದೀಪಾವಳಿ ಅಂಗವಾಗಿ ಗೋದನ ಪೂಜೆಗೆ ಕಾಡಿಗೆ ಹೋವುಗಳನ್ನು ಹೊತ್ತು ಬರುವಾಗ ತಾಂಡಾದ ಪ್ರಮುಖರು ವಾದ್ಯಮೇಳದೊಂದಿಗೆ ಬರಮಾಡಿಕೊಂಡರು   

ಚಿಂಚೋಳಿ: ತಾಲ್ಲೂಕಿನ ಲಂಬಾಣಿ ತಾಂಡಾಗಳಲ್ಲಿ ಬೆಳಕಿನ ಹಬ್ಬ ದೀಪಾವಳಿಯನ್ನು ಸಡಗರದಿಂದ ಆಚರಿಸಲಾಯಿತು. ಯುವತಿಯರು ಹೊಸ ಬಟ್ಟೆ ಧರಿಸಿ ಸಂಭ್ರಮದಿಂದ ಆಚರಣೆಯಲ್ಲಿ ಭಾಗವಹಿಸಿದ್ದರು.

ಶ್ರಮಜೀವಿಗಳಾದ ಲಂಬಾಣಿಗರು ಭೂತಾಯಿಯನ್ನು ಹಾಗೂ ಸಗಣಿಯನ್ನು ಸಾಕ್ಷಾತ್‌ ಲಕ್ಷ್ಮಿ ಎಂದು ಭಾವಿಸಿ ಮೂರು ದಿನ ಸಗಣಿ ಎತ್ತದೆ ಅದಕ್ಕೆ ಪೂಜೆ ಸಲ್ಲಿಸುವುದು ವಾಡಿಕೆ.

ತಾಲ್ಲೂಕಿನಲ್ಲಿ ಗೋದನ್‌ ಪೂಜೆಯನ್ನು ಎರಡು ದಿನ ಆಚರಿಸಲಾಯಿತು. ಭಾನುವಾರ ಕಾಳಿಮಾಸ ಆಚರಿಸಿದವರು, ಸೋಮವಾರ ಗೋದನ್‌ ಪೂಜೆ ನೆರವೇರಿಸಿದರು.‌ ಅದೇ ರೀತಿ ಸೋಮವಾರ ಕಾಳಿಮಾಸ್‌ ಆಚರಿಸಿದವರು, ಮಂಗಳವಾರ ಗೋದನಪೂಜೆ ಮಾಡುವ ಮೂಲಕ ದೀಪಾವಳಿ ಆಚರಿಸಿದರು.

ADVERTISEMENT

ತಾಲ್ಲೂಕಿನ ಕುಂಚಾವರಂ ಮತ್ತು ಐನಾಪುರ ಭಾಗದಲ್ಲಿ ಸೋಮವಾರವೇ ಗೋದನ್‌ ಪೂಜೆ ನಡೆಯಿತು. ಚಿಂಚೋಳಿ ಸುತ್ತಮುತ್ತಲಿನ ತಾಂಡಾಗಳಲ್ಲಿ ಮಂಗಳವಾರ ಗೋದನ್ ಪೂಜೆ ನೆರವೇರಿತು.

ಶನಿವಾರದಿಂದಲ್ಲೇ ಹಬ್ಬದ ಸಡಗರ ತಾಂಡಾಗಳಲ್ಲಿ ಮನೆ ಮಾಡಿತ್ತು. ವಿಶೇಷ ಗತ್ತಿನಲ್ಲಿ ವಾದ್ಯ ಬಾರಿಸುತ್ತ ಅದಕ್ಕೆ ತಕ್ಕಂತೆ ಲಯಬದ್ಧವಾಗಿ ಹೆಜ್ಜೆ ಹಾಕುತ್ತ ಮಹಿಳೆಯರು ನೃತ್ಯ ಮಾಡಿ ಗಮನ ಸೆಳೆದರು.

ಮಂಗಳವಾರ ಬೆಳಿಗ್ಗೆ ಸ್ನಾನ ಮಾಡಿ ಹೊಸ ವಸ್ತ್ರ ಧರಿಸಿ ಜಗದಂಬಾ ಸೇವಾಲಾಲ್‌ ಮಂದಿರಕ್ಕೆ ಬಂದ ಯುವತಿಯರು ದೇವರಿಗೆ ಪೂಜೆ ಸಲ್ಲಿಸಿದರು. ಅಲ್ಲಿಂದ ನಾಯಕ್‌, ಕಾರಭಾರಿ ಹಾಗೂ ಡಾಂವ್‌ ಮೊದಲಾದವರ ಮನೆಗಳಿಗೆ ತೆರಳಿ ಅವರ ಮನೆಯಿಂದ ಬುಟ್ಟಿ ಪಡೆದುಕೊಂಡು ಕಾಡಿಗೆ ಹೋಗಿ ಹಾಡು ಹೇಳುತ್ತ ಹೂವುಗಳನ್ನು ಕಿತ್ತು ತಂದರು.

ಹೂವಿನ ಬುಟ್ಟಿ ಹೊತ್ತು ಬಂದ ಯುವತಿಯರನ್ನು ತಾಂಡಾದ ಜನರು ಗ್ರಾಮದ ಹೊರ ಭಾಗದಿಂದ ವಾದ್ಯಮೇಳದೊಂದಿಗೆ ಸೇವಾಲಾಲ್‌ ಜಗದಂಬಾ ಮಂದಿರದವರೆಗೆ ಕರೆದುಕೊಂಡು ಬಂದರು. ಅಲ್ಲಿ ದೇವರಿಗೆ ಹೂವು ಅರ್ಪಿಸಿ ದೇವಾಲಯದ ಎದುರು ಗೋದನ್‌ ಪೂಜೆ ನೆರವೇರಿಸಿದರು.

ಇಲ್ಲಿಂದ ತಾಂಡಾದ ನಾಯಕನ ಮನೆಗೆ ತೆರಳಿದ ಯುವತಿಯರು ಅಲ್ಲಿಯೂ ಗೋದನ್‌ (ಸಗಣಿಗೆ) ಪೂಜೆ ಸಲ್ಲಿಸಿ. ತಾಂಡಾದ ಎಲ್ಲ ಮನೆಗಳಿಗೂ ತೆರಳಿ ಪೂಜಿಸಿ ತಮ್ಮ ಮನೆಗಳಿಗೆ ಮರಳಿದರು. ಸಂಜೆ ಮಂದಿರದಲ್ಲಿ ಸಾಮೂಹಿಕ ನೃತ್ಯ ಮಾಡಿ ಸಂಭ್ರಮಿಸಿದರು.

ಇಲ್ಲಿನ ಗಂಗೂ ನಾಯಕ ತಾಂಡಾ, ಚಿಕ್ಕಲಿಂಗದಳ್ಳಿ, ಕಲಭಾವಿ, ಧರ್ಮಾಸಾಗರ, ಪೆದ್ದಾತಾಂಡಾ, ಭೋಗಾನಿಂಗದಳ್ಳಿ, ಭೈರಂಪಳ್ಳಿ ತಾಂಡಾ, ಪೋಲಕಪಳ್ಳಿ ತಾಂಡಾ ಹಾಗೂ ಶಾದಿಪುರ ಮತ್ತು ಐನಾಪುರ, ಕುಂಚಾವರಂ ಸುತ್ತಲಿನ ತಾಂಡಾಗಳಲ್ಲಿ ಹಬ್ಬ ಆಚರಿಸಲಾಯಿತು.

ಗಂಗೂ ನಾಯಕ ತಾಂಡಾದಲ್ಲಿ ನಡೆದ ಉತ್ಸವದಲ್ಲಿ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ರೇಣುಕಾ ಅಶೋಕ ಚವ್ಹಾಣ, ಪುರಸಭೆ ಸದಸ್ಯೆ ಸವಿತಾಬಾಯಿ ರಾಜು ಪವಾರ್‌, ತಾಂಡಾದ ಮಹಿಳೆಯರೊಂದಿಗೆ ಹೆಜ್ಜೆ ಹಾಕಿದ್ದು ವಿಶೇಷವಾಗಿತ್ತು.

ಉತ್ಸವದಲ್ಲಿ ಪುರಸಭೆ ಸದಸ್ಯ ಭೀಮರಾವ್‌ ರಾಠೋಡ್‌, ಅಶೋಕ ಚವ್ಹಾಣ, ಸಂಜೀವ ಚವ್ಹಾಣ, ರಾಜು ಚವ್ಹಾಣ, ರಾಜು ಮೇಘು ಪವಾರ್‌, ರಾಮಶೆಟ್ಟಿ ಪವಾರ, ಯಶೋಧಾಬಾಯಿ ಫುಲಸಿಂಗ್‌ ರುಮ್ಮನಗೂಡ, ಮೇಘರಾಜ ನಾಯಕ್‌, ಖೀರು ನಾಯಕ್‌ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.