ADVERTISEMENT

ಆಳಂದ | ರಸ್ತೆ ಮಧ್ಯೆ ಕಂದಕ: ಪ್ರಯಾಣಿಕರ ಆತಂಕ

ತಡಕಲ- ಸನಗುಂದಿ ಮುಖ್ಯರಸ್ತೆ ದುರಸ್ತಿ ವಿಳಂಬ

ಸಂಜಯ್ ಪಾಟೀಲ
Published 25 ಜುಲೈ 2024, 6:23 IST
Last Updated 25 ಜುಲೈ 2024, 6:23 IST
ಆಳಂದ ತಾಲ್ಲೂಕಿನ ತಡಕಲ ಸಮೀಪದಲ್ಲಿ ಮುಖ್ಯರಸ್ತೆ ಸಂಪೂರ್ಣ ಹಾಳಾಗಿರುವುದು
ಆಳಂದ ತಾಲ್ಲೂಕಿನ ತಡಕಲ ಸಮೀಪದಲ್ಲಿ ಮುಖ್ಯರಸ್ತೆ ಸಂಪೂರ್ಣ ಹಾಳಾಗಿರುವುದು   

ಆಳಂದ: ತಾಲ್ಲೂಕಿನ ತಡಕಲ-ಸನುಗುಂದಿ ಮಾರ್ಗ ಮಧ್ಯದ ರಾಜ್ಯ ಹೆದ್ದಾರಿಯು ಸಂಪೂರ್ಣ ಕಿತ್ತು ಹೋಗಿದಲ್ಲದೆ ಕಂದಕ ನಿರ್ಮಾಣಗೊಂಡಿದೆ.

ಔರಾದ್-ಸದಾಶಿವಗಡ ರಾಜ್ಯ ಹೆದ್ದಾರಿಗೆ ಒಳಪಡುವ ಈ ರಸ್ತೆಯಲ್ಲಿ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಆಳಂದ- ತಡಕಲ, ಸನಗುಂದಿ, ಬೆಳಮಗಿ, ವಿಕೆ ಸಲಗರ, ಕಮಲಾನಗರ, ಮಹಾಗಾಂವ, ಬಸವಕಲ್ಯಾಣ ಪಟ್ಟಣ ಸೇರಿದಂತೆ ಬೀದರ್, ಹೈದರಾಬಾದ್‌ ಮುಖ್ಯರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ.

ಜೂನ್‌ ತಿಂಗಳ ಮೊದಲ ವಾರದಲ್ಲಿ ಸುರಿದ ಧಾರಾಕಾರ ಮಳೆಗೆ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿದ್ದು ಅರ್ಧಭಾಗದಲ್ಲಿ ಬಾವಿ ತೊಡಿದಂತೆ ಕಂದಕ ನಿರ್ಮಾಣವಾಗಿದೆ. ಉಳಿದ ಅರ್ಧಭಾಗದಲ್ಲಿ ಬೈಕ್‌, ಜೀಪ್‌, ಕಾರ್‌ನಂತಹ ಸಣ್ಣವಾಹನಗಳು ಸಂಚರಿಸಲು ಸಹ ರಸ್ತೆ ಕಿರಿದಾಗಿದೆ. ಲಾರಿ, ಬಸ್‌ನಂತ ದೊಡ್ಡ ವಾಹನಗಳ ಸಂಚಾರಕ್ಕೆ ಆತಂಕ ತಂದಿದೆ.

ADVERTISEMENT

ರಾಜ್ಯ ಹೆದ್ದಾರಿಯಲ್ಲ ಆಗಾಗ ರಸ್ತೆ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗಿದೆ. ಈ ಸ್ಥಳದಲ್ಲಿ ಸಣ್ಣ ಸೇತುವೆ ನಿರ್ಮಾಣ ಮಾಡದೇ ಅಧಿಕಾರಿಗಳು, ಗುತ್ತಿಗೆದಾರರು ನಿರ್ಲಕ್ಷವಹಿಸಿದ್ದಾರೆ. ಇದರಿಂದ ಸುತ್ತಲಿನ ಹೊಲ, ಗುಡ್ಡದ ನೀರು ತಗ್ಗಿನಲ್ಲಿ ಹರಿದು ರಸ್ತೆ ಕೊರುಯುತ್ತ ಹಾಳಾಗುತ್ತಿದೆ.

ರೈತ ಎತ್ತಿನಬಂಡಿ ತೆಗೆದುಕೊಂಡು ಹೋಗಲು ಭಯಪಟ್ಟು ಕಗೆ ಇಳಿದು ಎತ್ತುಗಳನ್ನು ಹಿಡಿದುಕೊಂಡು ರಸ್ತೆ ದಾಟುವ ಪರಿಸ್ಥಿತಿ ನಿರ್ಮಾಣವಾಗಿದೆ.

ರಾತ್ರಿ ಸಮಯದಲ್ಲಿ ಈ ಕಂದಕದಿಂದ ಗಾಬರಿ ಹೆಚ್ಚುತ್ತದೆ. ಎರಡು ವಾಹನಗಳು ಮುಖಾಮುಖಿಯಾದರೆ ಜಾಗವೇ ಇಲ್ಲದಷ್ಟು ರಸ್ತೆ ದುರ್ಗಮವಾಗಿದೆ. ಹಲವು ಬಾರಿ ಚಾಲಕರ ನಡುವೆ ಜಗಳ ನಡೆದಿವೆ. ಬೈಕ್‌ ಸವಾರರು ಬಿದ್ದ ಘಟನೆಗಳು ಜರುಗಿವೆ.

ಹೊಲ, ಗುಡ್ಡದಿಂದ ಮಳೆ ನೀರು ಹರಿದು ಬರುವ ಇಂತಹ ಜಾಗದಲ್ಲಿ ಸಣ್ಣ ಸೇತುವೆ ನಿರ್ಮಾಣ ಮಾಡಿದರೆ ಮಾತ್ರ ಮುಖ್ಯರಸ್ತೆ ಬಾಳಿಕೆ ಬರುತ್ತದೆ. ತಕ್ಷಣ ರಸ್ತೆ ದುರಸ್ತಿ ಕೈಗೊಳ್ಳಬೇಕು ಎಂದು ತಡಕಲ ಗ್ರಾ.ಪಂ ಸದಸ್ಯ ವಿಶ್ವನಾಥ ಪವಾಡಶೆಟ್ಟಿ ಒತ್ತಾಯಿಸಿದ್ದಾರೆ.

ಆಳಂದ ತಾಲ್ಲೂಕಿನ ತಡಕಲ ಸಮೀಪದಲ್ಲಿ ಮುಖ್ಯರಸ್ತೆಯು ಸಂಪೂರ್ಣವಾಗಿ ಕಿತ್ತು ಹಾಳಾದ ದೃಶ್ಯ
ಆಳಂದ ತಾಲ್ಲೂಕಿನಲ್ಲಿ ಮುಂಗಾರಿನ ಅಧಿಕ ಮಳೆಗೆ ಸಂಪರ್ಕ ರಸ್ತೆ ಸಣ್ಣಸೇತುವೆ ಶಾಲೆಗಳು ಹಾಳಾಗಿವೆ. ಇವುಗಳ ದುರಸ್ತಿಗೆ ₹15 ಕೋಟಿ ಅನುದಾನದ ಪ್ರಸ್ತಾಪ ಸಲ್ಲಿಸಲಾಗಿದೆ. ತಕ್ಷಣ ತಡಕಲ ಮುಖ್ಯರಸ್ತೆ ದುರಸ್ತಿ ಕೈಗೊಳ್ಳಲಾಗುವುದು
ಯಲ್ಲಪ್ಪ ಸುಬೇದಾರ ತಹಶೀಲ್ದಾರ್‌ ಆಳಂದ
ತಡಕಲ- ಬೆಳಮಗಿ ಮುಖ್ಯರಸ್ತೆಯು ಸಂಚಾರಕ್ಕೆ ತುಂಬಾ ಅಪಾಯಕಾರಿಯಾಗಿದ್ದು ರಸ್ತೆ ಹಾಳಾಗಿ ಎರಡು ತಿಂಗಳಾದರೂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಿಲ್ಲ.
ಪುಟ್ಟುಸ್ವಾಮಿ ಬಸವನ ಸಂಗೋಳಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.