ಕಲಬುರಗಿ: ಸುಟ್ಟಿರುವ ವಿದ್ಯುತ್ ಪರಿವರ್ತಕಗಳನ್ನು (ಟಿಸಿ) ದುರಸ್ತಿ ಮಾಡಿ ಬದಲಾಯಿಸುವಂತೆ ಗುಲಬರ್ಗಾ ವಿದ್ಯುತ್ ಸರಬರಾಜು ಕಂಪನಿಯ (ಜೆಸ್ಕಾ) ದುಂಬಾಲು ಬಿದ್ದ ರೈತರು, ಸ್ಥಳೀಯ ಅಧಿಕಾರಿಗಳ ವಿಳಂಬ ಧೋರಣೆಗೆ ಬೇಸತ್ತಿದ್ದಾರೆ.
ಜಿಲ್ಲೆಯಲ್ಲಿ ಕಳೆದ ವರ್ಷಕ್ಕಿಂತ ಉತ್ತಮ ಮಳೆಯಾಗಿದೆ. ಈ ಹಿಂದಿನ ವರ್ಷಕ್ಕಿಂತ ನೀರಾವರಿ ಬೆಳೆಗಳ ಪ್ರದೇಶವೂ ವಿಸ್ತರಣೆಯಾಗಿದೆ. ಆಳಂದ, ಅಫಜಲಪುರ ಸೇರಿದಂತೆ ಇತರೆಡೆ ವಿದ್ಯುತ್ ಪರಿವರ್ತಕಗಳು ಪದೇ ಪದೇ ಸುಟ್ಟು ಹೋಗುತ್ತಿವೆ. ಹಳೇ ಟಿಸಿಗಳ ದುರಸ್ತಿ, ಹೊಸ ಟಿಸಿಗಳ ಜೋಡಣೆಗೆ ಮನವಿ ಸಲ್ಲಿಸಿ ವಾರಗಳು ಉರುಳಿದರೂ ಮರುಜೋಡಣೆಯ ಭಾಗ್ಯ ಸಿಗುತ್ತಿಲ್ಲ ಎಂದು ರೈತರು ಅಲವತ್ತುಕೊಳ್ಳುತ್ತಿದ್ದಾರೆ.
ಟಿಸಿಗಳು ಸುಟ್ಟು ದೂರು ದಾಖಲಿಸಿ 24 ಗಂಟೆಯೊಳಗೆ ಬದಲಾವಣೆ ಮಾಡಿ, ಬೇರೊಂದು ಟಿಸಿ ಹಾಕಬೇಕು ಎಂಬ ನಿಯಮವಿದೆ. ವಾಸ್ತವದಲ್ಲಿ ಈ ನಿಯಮ ಜಾರಿಗೆ ಬರುತ್ತಿಲ್ಲ. ರೈತರು ದೂರು ಕೊಟ್ಟು ಎರಡು ವಾರಗಳು ಕಳೆದಿವೆ. ಸ್ಥಳೀಯ ಅಧಿಕಾರಿಗಳು ನಾಳೆ ಬರುತ್ತದೆ, ನಾಡಿದ್ದು ಬರುತ್ತದೆ ಎಂದು ನೆಪ ಹೇಳಿ ದಿನಗಳನ್ನು ದೂಡುತ್ತಿದ್ದಾರೆ ಎನ್ನುತ್ತಾರೆ ಆಳಂದ ರೈತರು.
‘ದೀಪಾವಳಿ ಬಳಿಕ ಮಳೆ ನಿಂತಿದ್ದರಿಂದ ಮಣ್ಣಲ್ಲಿನ ತೇವಾಂಶ ಕಡಿಮೆಯಾಗಿದೆ. ಇದರಿಂದ ಸಮೃದ್ಧವಾಗಿ ಬೆಳೆದು ಹೂವು ಬಿಡುತ್ತಿರುವ ತೊಗರಿ ಗಿಡಗಳು, ತೋಟಗಾರಿಕೆ ಬೆಳೆಗಳು ಬಾಡುತ್ತಿವೆ. ‘ಟಿಸಿ’ಗಳು ಸುಟ್ಟಿದ್ದರಿಂದ ಕೊಳವೆ ಬಾವಿಗಳಿಂದ ನೀರುಣಿಸಲು ಆಗುತ್ತಿಲ್ಲ’ ಎನ್ನುತ್ತಾರೆ ಆಳಂದ ತಾಲ್ಲೂಕಿನ ಮಾಡಿಯಾಳ ಗ್ರಾಮದ ರೈತ ಹಾಗೂ ಕಾರ್ಮಿಕ ಮುಖಂಡ ಭೀಮಾಶಂಕರ ಮಾಡಿಯಾಳ.
‘ಸಾಮಾನ್ಯವಾಗಿ ಒಂದು ಟಿಸಿಗೆ 20 ಕೃಷಿ ಪಂಪ್‌ಸೆಟ್‌ಗಳು ನಡೆಯುತ್ತವೆ. ಕೆಲ ರೈತರು ಒಂದಕ್ಕೂ ಹೆಚ್ಚು ಕೊಳವೆಬಾವಿ ಕೊರೆದು, ಅದಕ್ಕೆ ಆರ್‌ಆರ್ ನಂಬರ್ ಪಡೆಯುವುದಿಲ್ಲ. 20 ಕೃಷಿ ಪಂಪ್‌ಸೆಟ್‌ಗಳ ಬದಲು 25ರಿಂದ 30 ಪಂಪ್‌ಸೆಟ್‌ಗಳು ಅವಲಂಬಿಸುವುದರಿಂದ ಒತ್ತಡ ಹೆಚ್ಚಾಗಿ ‘ಟಿಸಿ’ಗಳು ಸುಟ್ಟು ಹೋಗುತ್ತಿವೆ. ಹೆಚ್ಚುವರಿ ಪಂಪ್‌ಸೆಟ್‌ಗಳ ಬಗ್ಗೆ ಸ್ಥಳೀಯ ಅಧಿಕಾರಿಗಳಿಗೆ ಗೊತ್ತಿದ್ದರೂ ಹಣ ಪಡೆದು ಸುಮ್ಮನೆ ಇರುತ್ತಾರೆ’ ಎಂದು ದೂರಿದರು.
‘ಕಳೆದ ವರ್ಷ ಇದೇ ರೀತಿಯಾಗಿ ಟಿಸಿಗಳು ಸುಟ್ಟಿದ್ದವು. ಪ್ರತಿಭಟನೆ ಮಾಡಿ ಒತ್ತಡ ಹಾಕಿದ ಬಳಿಕ ಜೋಡಣೆ ಮಾಡಿದ್ದರು. ಮುಂದೆ ಈ ರೀತಿ ಆಗದಂತೆ ಭರವಸೆಯೂ ನೀಡಿದ್ದರು. ಈ ವರ್ಷವೂ ಅದೇ ವರಸೆ ಮುಂದುವರಿಸಿದ್ದಾರೆ. ಟಿಸಿ ಸುಟ್ಟ ಸಂಬಂಧ 1912ಗೆ ಕರೆ ಮಾಡಿ ದೂರು ಕೊಟ್ಟು ಎರಡು ವಾರಗಳು ಕಳೆದಿವೆ. ವಾಹನ ಬಾಡಿಗೆಗೆಂದು ಕೆಲವರು ಹಣವೂ ಪಡೆದಿದ್ದಾರೆ. ಇನ್ನೂ ಟಿಸಿ ಜೋಡಣೆ ಮಾಡಿಲ್ಲ’ ಎಂದರು.
ಕೃಷಿ ಪಂಪ್‌ಸೆಟ್‌ಗಳಿಗೆ 7 ಗಂಟೆ ತ್ರಿಫೇಸ್ ವಿದ್ಯುತ್ ಬದಲು ಹಗಲು ವೇಳೆ 10 ಗಂಟೆ ನಿರಂತರ ತ್ರಿಫೇಸ್ ವಿದ್ಯುತ್ ಸರಬರಾಜು ಮಾಡಬೇಕುಭೀಮಾಶಂಕರ ಮಾಡಿಯಾಳ ರೈತ ಮುಖಂಡ
ರುದ್ರವಾಡಿಯಲ್ಲಿ ಟಿಸಿ ಸುಟ್ಟು ಐದಾರು ದಿನಗಳಾಗಿದ್ದು ಇದುವರೆಗೂ ದುರಸ್ತಿ ಮಾಡಿಲ್ಲ. ದುರಸ್ತಿಗಾಗಿ ಪ್ರತಿ ರೈತರಿಂದ ₹2 ಸಾವಿರದಿಂದ ₹3 ಸಾವಿರ ಪಡೆಯುತ್ತಾರೆಚಂದ್ರಶೇಖರ ರುದ್ರವಾಡಿ ಗ್ರಾಮದ ರೈತ
‘ಜೆಸ್ಕಾಂನಲ್ಲಿ ವಿದ್ಯುತ್ ಪರಿವರ್ತಕಗಳ (ಟಿಸಿ) ಕೊರತೆ ಇಲ್ಲ. ಹೊಸದಾಗಿ ಏಳು ಸಾವಿರ ಟಿಸಿಗಳನ್ನು ಖರೀದಿ ಮಾಡುತ್ತಿದ್ದೇವೆ. ಟಿಸಿಗಳ ಮರು ಜೋಡಣೆಯಲ್ಲಿ ಆಗುತ್ತಿರುವ ವಿಳಂಬವನ್ನು ಪರಿಶೀಲಿಸುತ್ತೇನೆ’ ಎಂದು ಜೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಕರಲಿಂಗಣ್ಣವರ ‘ಪ್ರಜಾವಾಣಿ’ಗೆ ತಿಳಿಸಿದರು. ‘ಆಳಂದದಲ್ಲಿ ಟಿಸಿ ಜೋಡಣೆ ವಿಳಂಬ ಸಂಬಂಧ ಅಧಿಕಾರಿಗಳ ಜತೆಗೆ ಮಾತನಾಡಿ ಬಗೆಹರಿಸುತ್ತೇನೆ. 7 ಗಂಟೆಗೂ ಹೆಚ್ಚಿನ ಅವಧಿಗೆ ತ್ರಿಫೇಸ್ ವಿದ್ಯುತ್ ಕೊಡಲು ಆಗುವುದಿಲ್ಲ. ಕೆಲವೊಂದು ಕಡೆ ಸ್ಥಳೀಯವಾಗಿ ಸಮಯ ಹೊಂದಾಣಿಕೆ ಮಾಡುವುದರಿಂದ ತ್ರಿಫೇಸ್ ವಿದ್ಯುತ್ ಸರಬರಾಜು ಅವಧಿಯಲ್ಲಿ ಬದಲಾಗುತ್ತದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.