ADVERTISEMENT

ದೇಗಲಮಡಿಯ ಪಪ್ಪಾಯಕ್ಕೆ ದೆಹಲಿಯಲ್ಲಿ ಬೇಡಿಕೆ

ಮಿನಿ ದುಬೈನಲ್ಲಿ ಪಪ್ಪಾಯ ಕಲರವ

ಜಗನ್ನಾಥ ಡಿ.ಶೇರಿಕಾರ
Published 30 ಜೂನ್ 2018, 17:34 IST
Last Updated 30 ಜೂನ್ 2018, 17:34 IST
ಚಿಂಚೋಳಿ ತಾಲ್ಲೂಕು ದೇಗಲಮಡಿಯ ರೈತ ಚಿತ್ರಶೇಖರ ಪಾಟೀಲರ ತೋಟದಲ್ಲಿ ಪಪ್ಪಾಯ ಬೆಳೆ ಭರ್ಪೂರ ಫಲ ಬಿಟ್ಟಿರುವುದು ರೈತ ತೋರಿಸಿದರು
ಚಿಂಚೋಳಿ ತಾಲ್ಲೂಕು ದೇಗಲಮಡಿಯ ರೈತ ಚಿತ್ರಶೇಖರ ಪಾಟೀಲರ ತೋಟದಲ್ಲಿ ಪಪ್ಪಾಯ ಬೆಳೆ ಭರ್ಪೂರ ಫಲ ಬಿಟ್ಟಿರುವುದು ರೈತ ತೋರಿಸಿದರು   

ಚಿಂಚೋಳಿ: ವೀಳ್ಯದೆಲೆ ಬೇಸಾಯದಿಂದ ದೇಶದಾದ್ಯಂತ ಸದ್ದು ಮಾಡಿದ್ದ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ದೇಗಲಮಡಿಯ ರೈತರು, ವೀಳ್ಯೆದೆಲೆ ಬೇಸಾಯಕ್ಕೆ ಬೈ ಬೈ ಹೇಳಿ ಪಪ್ಪಾಯ ಬೇಸಾಯಕ್ಕೆ ಕೈ ಜೋಡಿಸಿ ಸೈ ಎನಿಸಿಕೊಂಡಿದ್ದಾರೆ.

ದೇಗಲಮಡಿ ಗ್ರಾಮಕ್ಕೆ ಬರುತ್ತಿದ್ದರೆ 2/3 ದಶಕಗಳ ಹಿಂದೆ ವೀಳ್ಯದೆಲೆ ಬೇಸಾಯದ ತೋಟಗಳು ಮೌನವಾಗಿಯೇ ಸ್ವಾಗತಿಸುತ್ತಿದ್ದವು. ಆದರೆ ಕಾಲಾನಂತರ ಇಲ್ಲಿ ಎಲೆಬಳ್ಳಿ ಬೇಸಾಯ ಕ್ಷೀಣಿಸಿದ್ದು ರೈತರು ಪಪ್ಪಾಯ ಬೇಸಾಯದತ್ತ ಹೊರಳಿದ್ದಾರೆ.

ಎಲೆಬಳ್ಳಿ ಬೇಸಾಯದಿಂದ ಮಿನಿದುಬೈ ಎಂಬ ಖ್ಯಾತಿ ಪಡೆದಿದ್ದ ದೇಗಲಮಡಿ ಈಗ ಬಾಳೆ ಮತ್ತು ಪಪ್ಪಾಯದಿಂದ ಹೊಸ ಅಧ್ಯಾಯ ಸೃಷ್ಟಿಸಿದೆ. ಇಲ್ಲಿ ಬೆಳೆದ ಪಪ್ಪಾಯ ಹಣ್ಣುಗಳು ದೆೇಶದ ರಾಜಧಾನಿ ದೆಹಲಿಯಲ್ಲಿ ಸದ್ದು ಮಾಡಿದ್ದು, ದೆಹಲಿಯ ಮಾರುಕಟ್ಟೆಗೆ ಮಿನಿ ಮಲೆನಾಡಿನ ಪಪ್ಪಾಯ ಲಗ್ಗೆ ಇಟ್ಟಿವೆ. ಪ್ರಗತಿಪರ ರೈತ ಚಿತ್ರಶೇಖರ ಪಾಟೀಲ 3 ಎಕರೆ ಜಮೀನಿನಲ್ಲಿ ಪಪ್ಪಾಯ ಬೇಸಾಯದಲ್ಲಿ ತೊಡಗಿದ್ದಾರೆ. ಅತ್ಯಂತ ಸೂಕ್ಷ್ಮವಾದ ಪಪ್ಪಾಯವನ್ನು ಕೂಸಿನಂತೆ ಜೋಪಾನ ಮಾಡಿರುವ ಅವರು ರೋಗ ರುಜಿನ ಬಾರದಂತೆ ಕಷ್ಟದಿಂದ ಪೋಷಿಸಿದ್ದಾರೆ.

ADVERTISEMENT

ಮಹಾರಾಷ್ಟ್ರದ ಮುಹೋಳ್‌ನಿಂದ ತೈವಾನ್‌786 ತಳಿಯ ಪಪ್ಪಾಯ ಸಸಿಗಳನ್ನು ತಂದು ನೆಟ್ಟು ಬೆಳೆಸಲಾಗಿದೆ. 2017ರ ನವೆಂಬರ್‌5ರಂದು ಸಸಿಗಳನ್ನು ನೆಟ್ಟಿದ್ದ ಇವರು 8 ತಿಂಗಳಲ್ಲಿ ಫಸಲು ಕೈಗೆ ಬಂದಿದೆ. ಎಕರೆಗೆ ಕನಿಷ್ಠ 1 ಲಕ್ಷ ವೆಚ್ಚ ಮಾಡಿದ್ದಾರೆ.

ಹೊಲವನ್ನು ಹದಗೊಳಿಸಲು ಉಳುಮೆ ಮಾಡಿ ತಿಪ್ಪೆಗೊಬ್ಬರ ಹಾಕಿ ಬೋದುಗಳನ್ನು ಮಾಡಿದ್ದಾರೆ. ಬೋದಿನ ಒಳಗಡೆ ಹನಿ ನೀರಾವರಿ ಅಳವಡಿಸಿಕೊಂಡು ಅವುಗಳ ಮೇಲೆ ಮಲ್ಚಿಂಗ್‌(ಪ್ಲಾಸ್ಟಿಕ್‌ ಹೊದಿಕೆ) ಕೈಗೊಂಡಿದ್ದಾರೆ. ಹೊಲದಲ್ಲಿ ಹುಲ್ಲು, ಕಸ ಕಡ್ಡಿಗೆ ಅವಕಾಶವಿಲ್ಲದಂತೆ ಸ್ವಚ್ಛತೆ ಕಾಪಾಡಿ ಹನಿ ನೀರಾವರಿ ವ್ಯವಸ್ಥೆಯಿಂದ ನೀರು, ಗೊಬ್ಬರ ಬೆಳೆಗೆ ನೀಡಿದ್ದಾರೆ. ಬಹುಬೇಗ ವೈರಾಣು ರೋಗಕ್ಕೆ ತುತ್ತಾಗುವ ಪಪ್ಪಾಯ ಬೆಳೆಗೆ ಯಾವುದೇ ರೋಗ ಬಾಧಿಸದಂತೆ ಕಾಲಕ್ಕೆ ತಕ್ಕಂತೆ ವಿವಿಧ ಸಿಂಪರಣೆ ಮಾಡಿದ್ದಾರೆ.

ಜನ ಜಾನುವಾರುಗಳಿಂದ ಹಾನಿ ತಪ್ಪಿಸಲು ಕಾವಲು ನಡೆಸಿದ್ದಲ್ಲದೇ ತಂತಿಬೇಲಿ ಅಳವಡಿಸಿಕೊಂಡಿದ್ದಾರೆ. ಸಧ್ಯ ಭರ್ಪೂರ ಕಾಯಿ ಕಚ್ಚಿರುವ ಪಪ್ಪಾಯ ಗಿಡಗಳು ಫಲಹೊತ್ತು ಕಣ್ಣುಕುಕ್ಕುತ್ತಿವೆ. 3500 ಗಿಡಗಳು ಹೆಚ್ಚಿನ ಪ್ರಮಾಣದಲ್ಲಿ ಕಾಯಿಕಚ್ಚಿದ್ದು ಕೊಯ್ಲಿಗೆ ಬಂದಿವೆ. ದೆಹಲಿಯ ವ್ಯಾಪಾರಿ ಪಪ್ಪಾಯ ಖರೀದಿಸಿದ್ದಾರೆ. ಪ್ರತಿ ಕೆಜಿಗೆ ₹10 ದರ ನಿಡಿದ್ದಾರೆ. 3 ಎಕರೆ ಜಮೀನಿನಲ್ಲಿ 12 ಟನ್‌ ಇಳುವರಿ ಮೊದಲ ಫಸಲಿನಲ್ಲಿ ಬಂದಿದೆ. ಇದಕ್ಕೆ ತಾಲ್ಲೂಕಿನಲ್ಲಿ ತೋಟಗಾರಿಕೆಗೆ ಪೂರಕ ಹವಾಮಾನ ಮತ್ತು ಫಲವತ್ತಾದ ಭೂಮಿ ಸಕಾಲದಲ್ಲಿ ತೋಟಗಾರಿಕೆ ಅಧಿಕಾರಿಗಳ ಸಲಹೆ ಮಾರ್ಗದರ್ಶನದಿಂದ ಸಾಧ್ಯವಾಗಿದೆ ಎಂದು ಬೆಳೆಗಾರ ಚಿತ್ರಶೇಖರ ಪಾಟೀಲ ತಿಳಿಸಿದರು.

ಇಲ್ಲಿನ ಪಪ್ಪಾಯ ನೇರವಾಗಿ ಹಣ್ಣಿನ ರೂಪದಲ್ಲಿ ಮಾರಾಟ ಮಾಡಲಾಗುವುದು. ವಿವಿಧ ತಿಂಡಿ ತಿನಿಸುಗಳ ತಯಾರಿ ಜತೆಗೆ ಔಷಧ (ಮೆಡಿಸಿನ್‌) ತಯಾರಿಗೂ ಪಪ್ಪಾಯ ಬಳಕೆಯಾಗುತ್ತವೆ ಖರೀದಿದಾರ ಅನಿಸಿಕೆಯಾಗಿದೆ. ಪಪ್ಪಾಯ ಹಣ್ಣುಗಳಿಗೆ ಮಳೆಗಾಲ ಮತ್ತು ಚಳಿಗಾಲದಲ್ಲಿ ಹೆಚ್ಚು ಬೇಡಿಕೆ ಇರುವುದರಿಂದ ಬೆಲೆ ಕುಸಿಯುವ ಸಾಧ್ಯತೆ ಕಡಿಮೆಯಿದೆ. ಸಕಾಲದಲ್ಲಿ ಫಲ ಕೈಗೆ ಬಂದಿದ್ದರಿಂದ ರೈತರ ಮೊಗದಲ್ಲಿ ಸಂತಸ ಹೆಚ್ಚಾಗಿದೆ ಎನ್ನುತ್ತಾರೆ, ಮಲ್ಲಿಕಾರ್ಜುನ ಮಡಿವಾಳ ಮತ್ತು ರಾಘವೇಂದ್ರ ಮಲಸಾ. ಸಧ್ಯ ಪಪ್ಪಾಯ ರೈತರ ಕೈ ಹಿಡಿದಿದೆ. ಇದೇ ಸ್ಥಿತಿ ಮುಂದುವರೆದರೆ ದೇಗಲಮಡಿಯಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಪಪ್ಪಾಯ ಬೇಸಾಯಕ್ಕೆ ಕೈ ಜೋಡಿಸುವುದರಲ್ಲಿ ಅನುಮಾನವೇ ಇಲ್ಲ.

8 ರೈತರಿಗೆ 11 ಲಕ್ಷ ನೆರವು

ಹೆಕ್ಟೇರ್‌ಗೆ ₹92,500 ಸಹಾಯ ಧನವನ್ನು ತೋಟಗಾರಿಕಾ ಇಲಾಖೆ ರೈತರಿಗೆ ನೀಡಲಾಗಿದೆ. ರೈತರು ಈ ಹಣದಿಂದ ಬೆಳೆ ನಿರ್ವಹಣೆ ಮಾಡಲು ಅನುಕೂಲವಾಗಿದೆ ಎನ್ನುತ್ತಾರೆ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಸುರೇಂದ್ರ ಹೊನ್ನಪ್ಪಗೋಳ್‌.
ದೇಗಲಮಡಿಯಲ್ಲಿ 8 ರೈತರಿಗೆ 12 ಹೆಕ್ಟೇರ್‌ ಪ್ರದೇಶದಲ್ಲಿ ಪಪ್ಪಾಯ ಬೇಸಾಯಕ್ಕೆ ತೋಟಗಾರಿಕಾ ಇಲಾಖೆ ₹ 11.10ಲಕ್ಷ ಸಹಾಯ ಮಾಡಿದೆ ಎಂದು ತೋಟಕಾರಿಕೆ ಅಧಿಕಾರಿ ಹರ್ಷವರ್ಧನ ಮಾಹಿತಿ ನೀಡಿದರು.

ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆ ಅಡಿಯಲ್ಲಿ ರೈತರಿಗೆ ಪಪ್ಪಾಯ ಬೇಸಾಯಕ್ಕೆ ಉತ್ತೇಜನ ನೀಡಿ ನಿರಂತರ ಮಾರ್ಗದರ್ಶನ ಮಾಡಿದ್ದರಿಂದ
ಸುರೇಂದ್ರ ಹೊನ್ನಪ್ಪಗೋಳ್‌,ಸಹಾಯಕ ನಿರ್ದೇಶಕರು ತೋಟಗಾರಿಕಾ ಇಲಾಖೆ, ಚಿಂಚೋಳಿ

ಪಪ್ಪಾಯ ಪ್ರತಿ ಕೆಜಿಗೆ ₹10 ದರ ನೀಡಿ ರೈತರಿಂದ ಖರೀದಿಸಲಾಗುತ್ತಿದೆ. ಕಳೆದ ತಿಂಗಳು ₹12ರಿಂದ16 ಇತ್ತು.
ರಂಜಾನ ಹಬ್ಬದ ನಂತರ ದರ ಕುಸಿದಿದೆ
ಶಾಮರಾವ್‌ ಗೌಡನೂರು,ಪಪ್ಪಾಯ ಬೆಳೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.