ADVERTISEMENT

ಕಲಬುರಗಿ | ‘ಬಡವರ ಪಾಲಿಗೆ ಪೊಲೀಸರು ದೇವರು’

ಪಿಎಸ್‌ಐ, ಆರ್‌ಎಸ್ಐ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ: ಅಲೋಕ್‌ ಕುಮಾರ್‌

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 5:51 IST
Last Updated 4 ಜುಲೈ 2024, 5:51 IST
ಕಲಬುರಗಿಯಲ್ಲಿ ಬುಧವಾರ ನಡೆದ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ‌ದಲ್ಲಿ ಆರ್‌. ಕಿಶೋರ್ ಕುಮಾರ ಅವರಿಗೆ ತರಬೇತಿ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್‌ ಅವರು ‘ಸರ್ವೋತ್ತಮ ಪ್ರಶಸ್ತಿ’ ನೀಡಿದರು. ಪ್ರಾಂಶುಪಾಲ ಡೆಕ್ಕಾ ಕಿಶೋರ್ ಬಾಬು ಉಪಸ್ಥಿತರಿದ್ದರು
ಕಲಬುರಗಿಯಲ್ಲಿ ಬುಧವಾರ ನಡೆದ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ‌ದಲ್ಲಿ ಆರ್‌. ಕಿಶೋರ್ ಕುಮಾರ ಅವರಿಗೆ ತರಬೇತಿ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್‌ ಅವರು ‘ಸರ್ವೋತ್ತಮ ಪ್ರಶಸ್ತಿ’ ನೀಡಿದರು. ಪ್ರಾಂಶುಪಾಲ ಡೆಕ್ಕಾ ಕಿಶೋರ್ ಬಾಬು ಉಪಸ್ಥಿತರಿದ್ದರು   

ಕಲಬುರಗಿ: ನಗರದ ಹೊರವಲಯದ ನಾಗನಹಳ್ಳಿಯಲ್ಲಿ ಇರುವ ಪೊಲೀಸ್ ತರಬೇತಿ ಮಹಾವಿದ್ಯಾಲಯದಲ್ಲಿ ತರಬೇತಿ ಮುಗಿಸಿದ 16 ಪಿಎಸ್‌ಐ (ನಾಗರಿಕ) ಹಾಗೂ 9ನೇ ತಂಡದ ಒಬ್ಬ ಆರ್‌ಎಸ್ಐ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಮಹಾವಿದ್ಯಾಲಯದ ಮಧುಕರ್ ಶೆಟ್ಟಿ ಕವಾಯತು ಮೈದಾನದಲ್ಲಿ ಬುಧವಾರ ಜರುಗಿತು.

ಪೊಲೀಸ್ ಬ್ಯಾಂಡ್‌ ವಾದಗಳಿಗೆ ತಕ್ಕಂತೆ ಪ್ರಶಿಕ್ಷಣಾರ್ಥಿಗಳ ಪಥಸಂಚಲನ ಆರಂಭಿಸುತ್ತಿದ್ದಂತೆ ದೂರದ ಊರುಗಳಿಂದ ಬಂದಿದ್ದ ಅವರ ಪೋಷಕರು, ಸಂಬಂಧಿಗಳು, ಸ್ನೇಹಿತರು ಚಪ್ಪಾಳೆ ತಟ್ಟಿ ಸಂಭ್ರಮಿಸಿದರು. ನಿಧಾನಗತಿ ಮತ್ತು ವೇಗದ ಪಥಸಂಚಲನದ ದೃಶ್ಯಗಳನ್ನು ತಮ್ಮ ಮೊಬೈಲ್‌ಗಳಲ್ಲಿ ಸೆರೆ ಹಿಡಿದರು.

ಬೆಂಗಳೂರಿನ ಸಂಚಾರ ಮತ್ತು ರಸ್ತೆ ಸುರಕ್ಷತೆ ಆಯುಕ್ತ ಹಾಗೂ ತರಬೇತಿ ವಿಭಾಗದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್‌ ಕುಮಾರ್‌ ಅವರು ಪಥಸಂಚಲನ ಪರಿವೀಕ್ಷಣೆ ಮಾಡಿ, ಗೌರವ ವಂದನೆ ಸ್ವೀಕರಿಸಿದರು.

ADVERTISEMENT

ತರಬೇತಿಯ ಅವಧಿಯಲ್ಲಿ ಒಳಾಂಗಣ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ತುಮಕೂರಿನ ಪಾವಗಡದ ಎಂ.ಟೆಕ್‌ ಪದವೀಧರ ಆರ್‌. ಕಿಶೋರ್ ಕುಮಾರ ಅವರು ‘ಸರ್ವೋತ್ತಮ ಪ್ರಶಸ್ತಿ’ಗೆ ಭಾಜನರಾದರು.

ಅತ್ಯುತ್ತಮ ಹೊರಾಂಗಣ ಹಾಗೂ ಅತ್ಯುತ್ತಮ ಶೂಟರ್ ಪ್ರಶಸ್ತಿಯನ್ನು ಶಿವಮೊಗ್ಗದ ಕೆ.ಗಣೇಶ ಅವರು ಪಡೆದಿದ್ದು, ಅಂತರರಾಷ್ಟ್ರೀಯ ವಾಲಿಬಾಲ್ ಕ್ರೀಡಾಪಟು ಸಹ ಆಗಿದ್ದಾರೆ. ಬೆಂಗಳೂರಿನ ಸಾಧನಾ ಎಲ್‌. ಅವರು ರಾಣಿ ಚನ್ನಮ್ಮ ಟ್ರೋಫಿ ನಾಮಾಂಕಿತ ಅತ್ಯುತ್ತಮ ಮಹಿಳಾ ಪ್ರಶಿಕ್ಷಣಾರ್ಥಿ ಪ್ರಶಸ್ತಿ ಸ್ವೀಕರಿಸಿದರು.

ಬಹುಮಾನ ವಿತರಿಸಿ ಮಾತನಾಡಿದ ಅಲೋಕ್‌ ಕುಮಾರ್, ‘ಗ್ರಾಮೀಣ ಭಾಗದ ಬಡವರಿಗೆ ಅನ್ಯಾಯವಾದರೆ ಅವರನ್ನು ಕೇಳುವವರಿಲ್ಲ. ಶ್ರೀಮಂತರಾದರೆ ಬೆಂಗಳೂರಿಗೆ ಹೋಗಿ ಸಚಿವರು, ಉನ್ನತ ಅಧಿಕಾರಿಗಳ ಕಚೇರಿಗಳ ಕದ ತಟ್ಟುತ್ತಾರೆ. ಆದರೆ, ಬಡವರಿಗೆ ಪೊಲೀಸರೇ ತಂದೆ– ತಾಯಿ, ದೇವರಿದ್ದಂತೆ. ಬಡವರ ಕಷ್ಟಗಳಿಗೆ ಸ್ಪಂದಿಸಿ, ಪೊಲೀಸ್ ವ್ಯವಸ್ಥೆಯ ಮೇಲಿಟ್ಟಿರುವ ಅವರ ನಂಬಿಕೆ ಉಳಿಸಿ’ ಎಂದು ಸಲಹೆ ನೀಡಿದರು.

‘ವೈದ್ಯರು ಮತ್ತು ಪೊಲೀಸರದ್ದು ಪುಣ್ಯದ ವೃತ್ತಿಗಳು. ರೋಗಿಗೆ ವೈದ್ಯರನ್ನು ನೋಡಿದರೆ ಬದುಕಿನ ಮೇಲೆ ಆಸೆ ಹುಟ್ಟುತ್ತದೆ. ಪ್ರಾಣ ಭಯದಲ್ಲಿರುವ ವ್ಯಕ್ತಿಗೂ ಕಾನ್‌ಸ್ಟೆಬಲ್‌ ಒಬ್ಬರು ರಕ್ಷಣೆಯ ಭರವಸೆಯಾಗಿ ಕಾಣಿಸುತ್ತಾರೆ. ಎಂಥದೇ ಸ್ಥಿತಿಯಲ್ಲಿ ಆಸೆ, ಆಮಿಷ, ಒತ್ತಡಕ್ಕೆ ಒಳಗಾಗದೆ ಮನಸ್ಸು ಗಟ್ಟಿ ಮಾಡಿಕೊಂಡು ಕರ್ತವ್ಯ ನಿರ್ವಹಿಸಿ’ ಎಂದರು.

‘ಮಾನಸಿಕ ಒತ್ತಡಕ್ಕೆ ಒಳಗಾಗಿ ಬಹಳಷ್ಟು ಪೊಲೀಸ್ ಸಿಬ್ಬಂದಿ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಶಾರರೀಕ ಜತೆಗೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬೇಕು. ವೃತ್ತಿ ಮತ್ತು ಕೌಟುಂಬಿಕ ವಿಷಯಗಳಲ್ಲಿ ಸದೃಢವಾಗಿರಬೇಕು’ ಎಂದು ಹೇಳಿದರು.

ಪೊಲೀಸ್ ತರಬೇತಿ ಕೇಂದ್ರದ ಪ್ರಾಂಶುಪಾಲ ಡೆಕ್ಕಾ ಕಿಶೋರ್ ಬಾಬು ಅವರು ಸ್ವಾಗತಿಸಿ, ವರದಿ ವಾಚನ ಮಾಡಿದರು. ಪೊಲೀಸ್ ಕಮಿಷನರ್ ಆರ್.ಚೇತನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ, ಲೋಕಾಯುಕ್ತ ಎಸ್‌ಪಿ ಜಾನ್ ಆಂಟೋನಿ, ಡಿಸಿಪಿ ಕನಿಕಾ ಸಿಕ್ರಿವಾಲ್, ಹೆಚ್ಚುವರಿ ಎಸ್‌ಪಿ ಶ್ರೀನಿಧಿ, ಎಸಿಪಿ ಬಿಂದುಮಣಿ, ತರಬೇತಿ ಕೇಂದ್ರದ ಉಪಪ್ರಾಂಶುಪಾಲ ಶ್ರೀಕಾಂತ ಕಟ್ಟಿಮನಿ ಉಪಸ್ಥಿತರಿದ್ದರು.

ಕಲಬುರಗಿಯಲ್ಲಿ ಬುಧವಾರ ನಡೆದ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ‌ದಲ್ಲಿ ಪ್ರಶಿಕ್ಷಣಾರ್ಥಿಗಳು ತರಬೇತಿ ವಿಭಾಗದ ಎಡಿಜಿಪಿ ಅಲೋಕ್‌ ಕುಮಾರ್‌ ಅವರಿಗೆ ಗೌರವ ವಂದನೆ ಸಲ್ಲಿಸಿದರು

‘ಗ್ಯಾಂಗ್‌ಸ್ಟರ್ ಜೊತೆ ಕೈ ಜೋಡಿಸಿದವರು ಜೈಲು ಪಾಲು’ ‘ಬೆಂಗಳೂರಿನಲ್ಲಿ ಪಿಎಸ್‌ಐ ಆಗಿ ಬಂದ ಎರಡ್ಮೂರು ತಿಂಗಳಲ್ಲಿ ಕೆಲವರು ಗ್ಯಾಂಗ್‌ಸ್ಟರ್ ಕ್ರಿಮಿನಲ್‌ಗಳ ಜತೆಗೆ ಸೇರಿಕೊಂಡು ದರೋಡೆ ಸುಲಿಗೆ ಅಪಹರಣ ಪ್ರಕರಣಗಳಲ್ಲಿ ಸಿಲುಕಿಕೊಂಡು ಜೈಲು ಸೇರಿದ್ದಾರೆ. ತರಬೇತಿ ಮುಗಿದು ಹೊರ ಹೋಗುತ್ತಿದ್ದಂತೆ ಸಾಕಷ್ಟು ಆಮಿಷಗಳು ಎದುರಾಗುತ್ತವೆ. ಅವುಗಳಿಗೆ ಬಲಿಯಾಗಬೇಡಿ’ ಎಂದು ಎಡಿಜಿಪಿ ಅಲೋಕ್‌ ಕುಮಾರ್ ಎಚ್ಚರಿಸಿದರು. ‘ಕೆಲವೊಮ್ಮೆ ನಿಮ್ಮ ಸಹದ್ಯೋಗಿಗಳು ತಪ್ಪು ದಾರಿಗೆ ಎಳೆದು ನಿಮ್ಮನ್ನು ಸಿಲುಕಿಸುತ್ತಾರೆ. ಸದಾ ಎಚ್ಚರದಿಂದ ಇರಬೇಕು. ಕೆಲವು ಠಾಣೆಗಳ ಅಧಿಕಾರಿಗಳು ತಮ್ಮದೇಯಾದ ಜಾತಿ ಧರ್ಮದ ತಂಡಗಳನ್ನು ಮಾಡಿಕೊಂಡು ತಮಗೆ ಬೇಕಾದವರಿಗೆ ಆಯಕಟ್ಟಿನ ಸ್ಥಾನಗಳು ಕೊಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಇದು ಒಳ್ಳೆಯ ನಡೆಯಲ್ಲ. ಠಾಣೆಗಳಲ್ಲಿ ತಂಡದ ಮನೋಭಾವ ಕಂಡುಬರಲ್ಲ. ಶಿಸ್ತಿನಿಂದ ಎಲ್ಲರನ್ನು ಜತೆಯಲ್ಲಿ ಕರೆದೊಯ್ಯಬೇಕು’ ಎಂದರು.

ಜೀರೋ ಟ್ರಾಫಿಕ್: ವಾಹನ ಸವಾರರಿಗೆ ಕಿರಿಕಿರಿ ತರಬೇತಿ ವಿಭಾಗದ ಹೆಚ್ಚುವರಿ ಎಡಿಜಿಪಿ ಅಲೋಕ್‌ ಕುಮಾರ್ ಅವರ ಸಾಗುವ ರಸ್ತೆಗಳಲ್ಲಿ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಲಾಗಿತ್ತು. ಇದರಿಂದ ವಾಹನಗಳ ಸವಾರರು ರಸ್ತೆಯಲ್ಲಿ ನಿಲ್ಲ ಬೇಕಾಯಿತು. ಕಲಬುರಗಿ ಹೈಕೋರ್ಟ್‌ ಪೀಠ ಮುಂಭಾಗದ ರಸ್ತೆಯ ವಾಹನಗಳ ಸಚಾರ ತಡೆದು ನಿಲ್ಲಿಸಿದ ಟ್ರಾಫಿಕ್‌ ಪಿಎಸ್‌ಐ ಅವರನ್ನು ವಾಹನ ಸವಾರರೊಬ್ಬರು ಪ್ರಶ್ನಿಸಿದರು. ‘ಎಡಿಜಿಪಿ ತೆರಳುತ್ತಿದ್ದಾರೆ. ಅವರು ಹೋಗುವವರೆಗೂ ಸುಮ್ಮನೆ ನಿಲ್ಲು ಎಂದು ದಬಾಯಿಸಿದರು’ ಎಂದು ಸವಾರರು ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.