ADVERTISEMENT

ಕರ್ತವ್ಯ ಲೋಪ: ವಾರ್ಡನ್ ಗುರುಲಿಂಗಮ್ಮ ಅಮಾನತು

ಗುವಿವಿ ಬಿಸಿಎಂ ಹಾಸ್ಟೆಲ್‌ ಎದುರು ಅಹೋರಾತ್ರಿ ಧರಣಿ ನಡೆಸಿದ್ದ ವಿದ್ಯಾರ್ಥಿನಿಯರು

​ಪ್ರಜಾವಾಣಿ ವಾರ್ತೆ
Published 11 ಜುಲೈ 2024, 6:55 IST
Last Updated 11 ಜುಲೈ 2024, 6:55 IST
ಗುಲಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿನ ಬಿಸಿಎಂ ಸ್ನಾತಕೋತ್ತರ ವಿದ್ಯಾರ್ಥಿನಿಯರ ವಸತಿನಿಲಯಕ್ಕೆ ಬುಧವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಭು ದೊರೆ ಭೇಟಿ ನೀಡಿ ಬೋರ್‌ವೆಲ್ ದುರಸ್ತಿ ಮಾಡಿಸಿದರು
ಗುಲಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿನ ಬಿಸಿಎಂ ಸ್ನಾತಕೋತ್ತರ ವಿದ್ಯಾರ್ಥಿನಿಯರ ವಸತಿನಿಲಯಕ್ಕೆ ಬುಧವಾರ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಭು ದೊರೆ ಭೇಟಿ ನೀಡಿ ಬೋರ್‌ವೆಲ್ ದುರಸ್ತಿ ಮಾಡಿಸಿದರು   

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿನ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧೀನದ ಮೆಟ್ರಿಕ್ ನಂತರದ ಸ್ನಾತಕೋತ್ತರ ವಿದ್ಯಾರ್ಥಿನಿಯರ ವಸತಿನಿಲಯದ ವಾರ್ಡನ್‌ ಗುರುಲಿಂಗಮ್ಮ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯಿತಿ ಸಿಇಒ ಭಂವರ್‌ ಸಿಂಗ್‌ ಮೀನಾ ಬುಧವಾರ ಆದೇಶ ಹೊರಡಿಸಿದ್ದಾರೆ.

ಹಾಸ್ಟೆಲ್‌ನಲ್ಲಿ ನೀರಿಲ್ಲ ಮತ್ತು ಸರಿಯಾಗಿ ಊಟ ಪೂರೈಸುತ್ತಿಲ್ಲ ಎಂದು ಆರೋಪಿಸಿ ವಿದ್ಯಾರ್ಥಿನಿಯರು ಮಂಗಳವಾರ ಅಹೋರಾತ್ರಿ ವಸತಿನಿಲಯದ ಎದುರು ಧರಣಿ ನಡೆಸಿದ್ದರು. ಈ ಕುರಿತು ‘ಪ್ರಜಾವಾಣಿ’ಯು ಬುಧವಾರದ ಸಂಚಿಕೆಯಲ್ಲಿ ‘ನೀರಿಗಾಗಿ ಗುಲಬರ್ಗಾ ವಿ.ವಿ. ಹಾಸ್ಟೆಲ್‌ ವಿದ್ಯಾರ್ಥಿನಿಯರಿಂದ ಅಹೋರಾತ್ರಿ ಧರಣಿ’ ಶೀರ್ಷಿಕೆಯಡಿ ವರದಿ ಪ್ರಕಟಿಸಿ ವಿದ್ಯಾರ್ಥಿನಿಯರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಿತ್ತು.

ಹಾಸ್ಟೆಲ್‌ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸದೆ ಮತ್ತು ನಿಲಯವನ್ನು ಸಮರ್ಪಕವಾಗಿ ನಿರ್ವಹಿಸದೆ ಕರ್ತವ್ಯ ನಿರ್ಲಕ್ಷ್ಯ ಮತ್ತು ಬೇಜಾವಾಬ್ದಾರಿತನ ತೋರಿದ ಹಿನ್ನೆಲೆಯಲ್ಲಿ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ಅಮಾನತುಗೊಳಿಸಲಾಗಿದೆ. ಅಮಾನತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಅನುಮತಿ ಇಲ್ಲದೇ ಕೇಂದ್ರ ಸ್ಥಾನ ಬಿಡತಕ್ಕದ್ದಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ADVERTISEMENT

ಸ್ಥಳಕ್ಕೆ ಬಿಸಿಎಂ ಅಧಿಕಾರಿ ಭೇಟಿ: ಅಹೋರಾತ್ರಿ ಧರಣಿ ನಡೆಸಿದ ಸ್ಥಳಕ್ಕೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಪ್ರಭು ದೊರೆ ಭೇಟಿ ನೀಡಿ ವಿದ್ಯಾರ್ಥಿನಿಯರೊಂದಿಗೆ ನಡೆಸಿದರು. ಮೆನು ಚಾರ್ಟ್ ಪ್ರಕಾರ ಊಟ, ಟ್ಯಾಂಕರ್ ಮೂಲಕ ನೀರು ಪೂರೈಕೆ ಸೇರಿದಂತೆ ಇನ್ನಿತರ ಬೇಡಿಕೆ ಬಗ್ಗೆ ಭರವಸೆ ನೀಡಿದ ನಂತರ ವಿದ್ಯಾರ್ಥಿನಿಯರು ಧರಣಿ ಕೈಬಿಟ್ಟರು. ಬುಧವಾರ ಬೆಳಿಗ್ಗೆಯೂ ವಸತಿನಿಲಯಕ್ಕೆ ಭೇಟಿ ನೀಡಿದ ಪ್ರಭು ದೊರೆ ಅವರು ಬೋರ್‌ವೆಲ್ ದುರಸ್ತಿ ಮಾಡಿಸಿದ್ದು, ನೀರಿನ ಸಮಸ್ಯೆಗೆ ಮುಕ್ತಿ ಸಿಕ್ಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.