ADVERTISEMENT

ಕಾಶಿ ಮಾದರಿಯಲ್ಲಿ ದತ್ತ ಕ್ಷೇತ್ರ ಅಭಿವೃದ್ಧಿ: ರುದ್ರಪ್ಪ ಲಮಾಣಿ

ವಿಧಾನಸಭೆ ಅರ್ಜಿಗಳ ಸಮಿತಿಯಿಂದ ಗಾಣಗಾಪುರ ದೇವಸ್ಥಾನ ಅಭಿವೃದ್ಧಿ ಕುರಿತು ಚರ್ಚೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2024, 12:59 IST
Last Updated 4 ಜುಲೈ 2024, 12:59 IST

ಕಲಬುರಗಿ: ಜಿಲ್ಲೆಯ ಪ್ರಸಿದ್ಧ ಪುಣ್ಯಕ್ಷೇತ್ರ ಅಫಜಲಪುರ ತಾಲ್ಲೂಕಿನ ಗಾಣಗಾಪುರದ ದತ್ತಾತ್ರೇಯ ಕ್ಷೇತ್ರವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ನೆರವಿನೊಂದಿಗೆ ಕಾಶಿ ಮಾದರಿಯಲ್ಲಿ ಸಮಗ್ರ ಮೂಲಸೌಕರ್ಯ ಅಭಿವೃದ್ಧಿಪಡಿಸಲಾಗುವುದು ಎಂದು ವಿಧಾನಸಭೆ ಅರ್ಜಿಗಳ ಸಮಿತಿಯ ಅಧ್ಯಕ್ಷರಾ ರುದ್ರಪ್ಪ ಲಮಾಣಿ ಹೇಳಿದರು.

ಗುರುವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ದೇವಲ ಗಾಣಗಾಪೂರ ದೇವಸ್ಥಾನ ಅಭಿವೃದ್ಧಿ ಕುರಿತಂತೆ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ದೇವಸ್ಥಾನ ಅಭಿವೃದ್ಧಿಗೆ ಜಿಲ್ಲಾಡಳಿತವು ಈಗಾಗಲೇ ₹ 83.52 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಗೆ ಪ್ರಸಾದ ಯೋಜನೆಯಡಿ ಪ್ರಸ್ತಾವ ಸಲ್ಲಿಸಿರುವುದರಿಂದ ಸಮಿತಿ ಸದಸ್ಯ ಶಿವರಾಂ ಹೆಬ್ಬಾರ್ ಅವರ ಸಲಹೆಯಂತೆ ಕೇಂದ್ರ ಸರ್ಕಾರದ ಬಳಿ ಸಮಿತಿಯ ನಿಯೋಗ ತೆರಳಿ ಅನುದಾನ ಬಿಡುಗಡೆಗೆ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ’ ಎಂದರು.

ಕಳೆದ ಫೆಬ್ರವರಿ 24ಕ್ಕೆ ಸಮಿತಿಗೆ ಗಾಣಗಾಪುರ ದೇವಸ್ಥಾನದಲ್ಲಿ ರಸ್ತೆ, ಮೂಲಸೌಕರ್ಯ ಕಲ್ಪಿಸಿಲ್ಲ ಎಂಬ ಅರ್ಜಿ ಸ್ವೀಕಾರವಾದ ಹಿನ್ನೆಲೆಯಲ್ಲಿ ಇಡೀ ಸಮಿತಿಯು ಪ್ರತ್ಯಕ್ಷವಾಗಿ ಕ್ಷೇತ್ರದ ದರ್ಶನ ಮಾಡಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಜಿಲ್ಲೆಗೆ ಭೇಟಿ ನೀಡಿದೆ ಎಂದು ಹೇಳಿದರು.

ADVERTISEMENT

‘ದತ್ತನ ಕ್ಷೇತ್ರಕ್ಕೆ ಲಕ್ಷಾಂತರ ಜನ ಬರುವುದರಿಂದ ಸ್ವಚ್ಛತೆ ಮತ್ತು ನೈರ್ಮಲ್ಯ ತಡೆಯುವ‌ ನಿಟ್ಟಿನಲ್ಲಿ ಒಳಚರಂಡಿ ನಿರ್ಮಾಣ‌ ಮಾಡಬೇಕು. ನದಿ‌ಗೆ ಮಾಲಿನ್ಯ ಹರಿಸುವುದನ್ನು ತಡೆಯಬೇಕು, ಅತಿಕ್ರಮಣ ತೆರವುಗೊಳಿಸಬೇಕು’ ಎಂದು ಸಮಿತಿ ಸದಸ್ಯ ಎಸ್.ಸುರೇಶ್ ಕುಮಾರ್ ಅಭಿಪ್ರಾಯಪಟ್ಟರು. ಇದಕ್ಕೆ ಸಮಿತಿ ಅಧ್ಯಕ್ಷ ರುದ್ರಪ್ಪ ಲಮಾಣಿ ಅವರು, ಒಳಚರಂಡಿ ನಿರ್ಮಾಣ ಆದ್ಯತೆ ಮೇಲೆ ಮಾಡಿ ಎಂದು ಅಧಿಕಾರಿಗಳಿಗೆ ತಿಳಿಸಿದರು.

‘ಹಣ ನೀಡಿದರೆ ಮಧ್ಯವರ್ತಿಗಳು ಬೇಗ ದರ್ಶನ ಕೊಡಿಸುತ್ತಾರಂತೆ, ಇದಕ್ಕೆ ಕಡಿವಾಣ ಹಾಕಲು ಏನು ಕ್ರಮ ಕೈಗೊಂಡೀರಿ’ ಎಂದು ಸುರೇಶಕುಮಾರ್ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಶಿವಕಾಂತಮ್ಮ ಅವರನ್ನು ಪ್ರಶ್ನಿಸಿದರು. ಭದ್ರತಾ ಸಿಬ್ಬಂದಿ ಹೆಚ್ಚಿಗೆ ನಿಯೋಜಿಸಲು ಕ್ರಮ ವಹಿಸಲಾಗಿದೆ ಎಂದು ಶಿವಕಾಂತಮ್ಮ ಉತ್ತರಿಸಿದರು.

ಸಮಿತಿ ಸದಸ್ಯರಾದ ಶಿವರಾಂ ಹೆಬ್ಬಾರ್, ಸುರೇಶಬಾಬು ಸಿ.ಬಿ., ಎಸ್.ಟಿ.ಸೋಮಶೇಖರ, ಎ.ಸಿ.ಶ್ರೀನಿವಾಸ ಮಹೇಂದ್ರ ತಮ್ಮಣ್ಣನವರ ಮಾತನಾಡಿ, ದತ್ತನ ದರ್ಶನಕ್ಕೆ ಆನ್ ಲೈನ್ ಬುಕ್ಕಿಂಗ್ ವ್ಯವಸ್ಥೆ ಜಾರಿಗೆ ತಂದು ಜನಸಂದಣಿ ತಡೆಯಬಹುದು. ದಾನಿಗಳ‌ ನೆರವಿನಿಂದ ಅಥವಾ ಪ್ರವಾಸೋದ್ಯಮ ಇಲಾಖೆಯಿಂದ ಧಾರ್ಮಿಕ ಕ್ಷೇತ್ರ ಅಭಿವೃದ್ಧಿಪಡಿಸಬಹುದು‌. ದತ್ತನ ಕ್ಷೇತ್ರ ಸಮಗ್ರ ಅಭಿವೃದ್ಧಿಗೆ ಪ್ರತ್ಯೇಕ ಪ್ರಾಧಿಕಾರ ರಚಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್ ಮಾತನಾಡಿ, ‘ಗಾಣಗಾಪುರ ಕ್ಷೇತ್ರ ಸಮಗ್ರ ಅಭಿವೃದ್ಧಿಗೆ ₹ 200 ಕೋಟಿ ವೆಚ್ಚದ ನೀಲಿ ನಕ್ಷೆ ಸಿದ್ಧಪಡಿಸಿದೆ. ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ದತ್ತಾತ್ರೇಯನ ಕ್ಷೇತ್ರದಲ್ಲಿ ದೇವಸ್ಥಾನ ಆವರಣ, ಸಂಗಮ ಮತ್ತು ಅಷ್ಟ ತೀರ್ಥ ಸ್ಥಳಗಳ ಸಮಗ್ರ ಅಭಿವೃದ್ಧಿಗೆ ₹ 83.52 ಕೋಟಿ ಪ್ರಸ್ತಾವ ಸಲ್ಲಿಸಿದೆ. ದೇವಸ್ಥಾನದಲ್ಲಿ 2014–15ರಿಂದ 2023–24ರವರೆಗೆ ದೇವಸ್ಥಾನಕ್ಕೆ ಬಂದ ₹ 3.96 ಕೋಟಿ ವರಮಾನದಲ್ಲಿ ಮೂಲಸೌಕರ್ಯ, ಸಿಬ್ಬಂದಿ ವೇತನಕ್ಕಾಗಿ ₹ 1.98 ಕೋಟಿ ರೂ. ಖರ್ಚು ಮಾಡಿದೆ. ಗಾಣಗಾಪುರದಲ್ಲಿ ಸಿ.ಸಿ. ರಸ್ತೆ, ಯಾತ್ರಿ ನಿವಾಸ, ಪಾರ್ಕಿಂಗ್, ಸಿ.ಸಿ. ಡ್ರೇನ್ ಹೀಗೆ ಸುಮಾರು 24 ಮೂಲಸೌಕರ್ಯ ಕಾಮಗಾರಿಗಳಿಗೆ ₹ 1.62 ಕೋಟಿ ರೂ. ಖರ್ಚು‌ ಮಾಡಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ಆಯುಕ್ತ ಬಸವರಾಜೇಂದ್ರ‌ ಎಚ್., ಹೆಚ್ಚುವರಿ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಪ್ರೊಬೇಷನರಿ ಐಎಎಸ್ ಅಧಿಕಾರಿ ಮೀನಾಕ್ಷಿ ಆರ್ಯ, ಸಹಾಯಕ ಆಯುಕ್ತ ಆಶಪ್ಪ ಪೂಜಾರಿ, ಅಫಜಲಪುರ ತಹಶೀಲ್ದಾರ್ ಸಂಜೀವಕುಮಾರ ದಾಸರ್ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿದ್ದರು.

ಸಭೆಯ ನಂತರ ರುದ್ರಪ್ಪ ಲಮಾಣಿ ಅಧ್ಯಕ್ಷತೆಯ‌‌ ಕರ್ನಾಟಕ ವಿಧಾನಸಭೆ ಅರ್ಜಿ ಸಮಿತಿ ಸದಸ್ಯರು ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡಿ ಅಲ್ಲಿನ ಮೂಲಸೌಕರ್ಯ ಕುರಿತು ಅಧಿಕಾರಿಗಳೊಂದಿಗೆ ಪರಿಶೀಲಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.