ಕಲಬುರ್ಗಿ: ಶ್ರಾವಣ ಮಾಸ ಮುಕ್ತಾಯವಾದ ಪ್ರಯುಕ್ತ ಬೆನಕನ ಅಮಾವಾಸ್ಯೆ ಪ್ರಯುಕ್ತ ನಗರದ ಶರಣಬಸವೇಶ್ವರ ದೇವಸ್ಥಾನಕ್ಕೆ ಸಹಸ್ರಾರು ಸಂಖ್ಯೆ ಭಕ್ತರು ತೆರಳಿ ಪೂಜೆ ನೆರವೇರಿಸಿದರು.
ಬರಿಗಾಲಲ್ಲಿ ನಡೆಯುತ್ತಲೇ ಕಿಲೋಮೀಟರ್‌ಗಟ್ಟಲೇ ದೂರದಿಂದ ಬಂದಿದ್ದ ಭಕ್ತರು ದೇವರ ದರ್ಶನ ಪಡೆದು ಅಭಿಷೇಕ ಮಾಡಿಸಿದರು. ಕೊರೊನಾ ಪ್ರಯುಕ್ತ ದೇವಸ್ಥಾನದ ದ್ವಾರವನ್ನು ಬಂದ್ ಮಾಡಿದ್ದರೂ ಕೆಲ ಭಕ್ತರು ಒಳಗೆ ತೆರಳಿದರು. ಅಮಾವಾಸ್ಯೆ ಅಂಗವಾಗಿ ಅಪ್ಪನ ಗುಡಿಗೆ ಹೋಗುವ ರಸ್ತೆಯ ಇಕ್ಕೆಲಗಳಲ್ಲಿ ಜಾತ್ರೆಯ ವಾತಾವರಣ ನಿರ್ಮಾಣವಾಗಿತ್ತು.
ಜನದಟ್ಟಣಿ ಹೆಚ್ಚಿದ್ದರಿಂದ ಪೊಲೀಸರು ದೇವಸ್ಥಾನಕ್ಕೆ ತೆರಳುವ ರಸ್ತೆಗೆ ಬ್ಯಾರಿಕೇಡ್ ಹಾಕಿ ಆಟೊ, ಕಾರು ಸೇರಿದಂತೆ ಇತರ ವಾಹನಗಳ ಸಂಚಾರವನ್ನು ನಿರ್ಬಂಧಿಸಿದ್ದರು. ಬೈಕ್ ಸವಾರರಿಗೆ ಮಾತ್ರ ಪ್ರವೇಶವಿತ್ತು. ಬಹಳ ದಿನಗಳ ಬಳಿಕ ದೇವಸ್ಥಾನದ ಬಳಿ ತೆರಳಲು ಅವಕಾಶ ಸಿಕ್ಕಿದ್ದರಿಂದ ಹಿರಿ ಹಿರಿ ಹಿಗ್ಗಿದ ಭಕ್ತರು ಬಹಳ ಹೊತ್ತಿನ ತನಕ ಪೂಜಾ ಕಾರ್ಯಕ್ರಮದಲ್ಲಿ ತೊಡಗಿಕೊಂಡಿದ್ದರು. ಮಾರ್ಚ್‌ನಲ್ಲಿ ಲಾಕ್‌ಡೌನ್ ಆರಂಭವಾದ ಬಳಿಕ ಜಾತ್ರೆಯನ್ನು ಸಾಂಕೇತಿಕವಾಗಿ ನೆರವೇರಿಸಲಾಗಿತ್ತು. ಇದೀಗ ದೇವಸ್ಥಾನದ ಬಳಿ ಭಕ್ತರ ದಟ್ಟಣಿ ಹೆಚ್ಚಾಗಿದೆ.
ಬಹುತೇಕ ಭಕ್ತರು ಮುಖಕ್ಕೆ ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು ದರ್ಶನ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.